News Karnataka Kannada
Monday, April 22 2024
Cricket
ಬೆಂಗಳೂರು ನಗರ

ಬೆಂಗಳೂರು : ಕಳೆದೆರಡು ವರ್ಷಗಳಲ್ಲಿ ಶೇ10 ಮಾಲಿನ್ಯ ಹೆಚ್ಚಳ

Photo Credit :

ಬೆಂಗಳೂರು : ಕಳೆದೆರಡು ವರ್ಷಗಳಲ್ಲಿ ಶೇ10 ಮಾಲಿನ್ಯ ಹೆಚ್ಚಳ

ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯದ ಹೆಚ್ಚಳದ ಚರ್ಚೆಯು ವಿವಾದಾಸ್ಪದ ವಿಷಯವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾಲಿನ್ಯದ ಮಟ್ಟವು ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೊಂಡರೆ ಪರಿಸರವಾದಿಗಳು ಅದನ್ನು ಒಪ್ಪುತ್ತಿಲ್ಲ.

ಕೆಎಸ್‍ಪಿಸಿಬಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಹೆಚ್. ಲೋಕೇಶ್ವರಿ ಅವರ ಪ್ರಕಾರ ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟವು ನಿರಂತರವಾಗಿ ಕುಸಿಯುತ್ತಿದೆ. 2014 ರಿಂದ 2018ರವರೆಗಿನ ವಾರ್ಷಿಕ ಸರಾಸರಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ಮಧ್ಯಮ’ದಿಂದ ‘ತೃಪ್ತಿದಾಯಕ’ಕ್ಕೆ ಬದಲಾಗಿದೆ.

ಇದಲ್ಲದೆ, ಪಿಎಂ10ರ ವಾರ್ಷಿಕ ಸರಾಸರಿ 2018ರಲ್ಲಿ 28%ರಷ್ಟು ಕಡಿಮೆಯಾಗಿದೆ, 2014ರ ದತ್ತಾಂಶಗಳಿಗೆ ಹೋಲಿಕೆ ಮಾಡಿದರೆ ಪಿಎಂ2.5 ಯು 2015ರಿಂದ 2017ರವರೆಗೆ 29%ರಷ್ಟು ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

ಬೆಂಗಳೂರಿನಲ್ಲಿರುವ ಕೆಎಸ್‍ಪಿಸಿಬಿಯ ವಾಯುಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳ ಮಾಹಿತಿಯಂತೆ ವಾಯುಮಾಲಿನ್ಯದಲ್ಲಿ ಇಳಿಕೆಯನ್ನು ತೋರಿಸುತ್ತದೆ.

ಪಿಎಂ10 ಮತ್ತು ಪಿಎಂ2.5 ಕಣಗಳನ್ನು ಉಸಿರಾಡುವುದರಿಂದ ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನಂತಹ ಅನೇಕ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು.

ದಾರಿತಪ್ಪಿಸುವ ದತ್ತಾಂಶ: ಕೆಎಸ್‍ಪಿಸಿಬಿಯು ಬೆಂಗಳೂರಿನಂತಹ ದೊಡ್ಡ ನಗರದಲ್ಲಿನ ವಾಯುಮಾಲಿನ್ಯದ ಸೂಚ್ಯಂಕವನ್ನು ಸರಾಸರಿ ವಿಧದಲ್ಲಿ ಮಾಹಿತಿ ನೀಡುವುದು ತಪ್ಪು ವಿಧಾನ ಎಂದು ಸೆಂಟರ್ ಫಾರ್ ಇಕಾಲಜಿಕಲ್ ಸಯನ್ಸಸ್‍ನ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರ ಅಭಿಪ್ರಾಯಪಡುತ್ತಾರೆ. ಬೆಂಗಳೂರಿನಲ್ಲಿ ಮೆಜೆಸ್ಟಿಕ್‍ನಂತಹ ಅತಿಹೆಚ್ಚು ಮಾಲಿನ್ಯಹೊಂದಿದ ನಗರಗಳಿರುವಂತೆಯೇ ಜಯನಗರ, ಲಾಲ್‍ಬಾಗ್‍ನಂತಹ ಸ್ವಚ್ಛ ಪ್ರದೇಶಗಳೂ ಇವೆ. ಒಟ್ಟು ನಗರದ ಸರಾಸರಿಯನ್ನು ಒಂದೇ ಅಂಕದಲ್ಲಿ ವಿವರಿಸಿದರೆ, ಹೆಚ್ಚು ಸಮಸ್ಯೆಗೊಳಗಾಗಿರುವ ಪ್ರದೇಶವನ್ನು ನಿರ್ಲಕ್ಷಿಸಿದಂತಾಗಬಹುದು.

ಕೆಎಸ್‍ಪಿಸಿಬಿಯ ಬಳಿ ಅರ್ಧದಷ್ಟು ಮಾಲಿನ್ಯಕಾರಕಗಳ ದತ್ತಾಂಶಗಳು ಲಭ್ಯವಿಲ್ಲ ಮತ್ತು ಅದು ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದೆ ಎಂದವರು ವಿವರಿಸುತ್ತಾರೆ.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಾಗಿರುವ ಡಾ. ಯಲ್ಲಪ್ಪ ರೆಡ್ಡಿ ಅವರು ಮಾತನಾಡಿ `ಅಸಮರ್ಪಕ ದತ್ತಾಂಶ ಸಂಗ್ರಹಗಳ ವ್ಯವಸ್ಥೆಯಿಂದಾಗಿ ಸರ್ಕಾರದ ದತ್ತಾಂಶಗಳನ್ನು ನಂಬುವಂತಿಲ್ಲ. 75%ರಷ್ಟು ಮೆಲ್ವಿಚಾರಣಾ ಕೇಂದ್ರಗಳು ಪೂರ್ತಿಯಾಗಿ ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿಲ್ಲ. ಉಳಿದ ಕೇಂದ್ರಗಳು ಕೂಡಾ ಕೆಲವೇ ಕೆಲವು ದಿನಗಳ ಸೀಮಿತ ಲೆಕ್ಕವನ್ನಷ್ಟೇ ನೀಡುತ್ತಿದೆ. ಹೀಗಾಗಿ ನಾವು ಭಾಗಶಃ ದತ್ತಾಂಶವನ್ನಷ್ಟೇ ಪಡೆಯುತ್ತಿದ್ದೇವೆ’

`ಕೆಲವು ಸ್ಥಳಗಳಲ್ಲಿ ಮೇಲ್ವಿಚಾರಣಾ ಕೇಂದ್ರಗಳನ್ನು ಸುತ್ತಲೂ ಮರಗಿಡಗಳಿರುವ ಇರುವ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಕೆಎಸ್‍ಪಿಸಿಬಿಯ ಕಚೇರಿಯಿರುವ ಎಂಜಿ ರಸ್ತೆಯಲ್ಲಿಯೇ ಮೇಲ್ವಿಚಾರಣ ಕೇಂದ್ರವಿಲ್ಲ’ ಎಂದು ಹೇಳಿದ ಅವರು ‘ಮಾಲಿನ್ಯಮಟ್ಟವು ಹೆಚ್ಚಿರುವ ಕಡೆಗಳಲ್ಲಿ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿಲ್ಲ. ಅದೂ ಅಲ್ಲದೇ, ಒಂದು ಮಹಡಿಯಷ್ಟು ಎತ್ತರದಲ್ಲಿ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿದರೆ ನೆಲಮಟ್ಟದ ಮಾಲಿನ್ಯದ ದತ್ತಾಂಶಗಳನ್ನು ಸಂಗ್ರಹಿಸುವುದು ಸಾಧ್ಯವಿಲ್ಲ’ ಎನ್ನುತ್ತಾರೆ.

`ನಗರದ ಅತ್ಯಂತ ಹೆಚ್ಚು ಕಲುಷಿತ ಪ್ರದೇಶಗಳಾದ ಮೆಜೆಸ್ಟಿಕ್ ಹಾಗೂ ಪೀಣ್ಯದಂತಹ ಪ್ರದೇಶದ ದತ್ತಾಂಶಗಳೇ ಲಭ್ಯವಿಲ್ಲ. ಸರಿಯಾಗಿ ಯೋಚಿಸಿದರೆ ಸಮಸ್ಯೆಯ ಗಂಭೀರತೆಯ ಅರಿವಾಗಬಹುದು. ಸರಿಯಾದ ದತ್ತಾಂಶಗಳಿಲ್ಲದೆ ಇರುವುದರಿಂದ ಸಮಸ್ಯೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಕೆಎಸ್‍ಪಿಸಿಬಿಯು ಮೊದಲಾಗಿ ಮೇಲ್ವಿಚಾರಣಾ ಘಟಕಗಳಲ್ಲಿರುವ 20 ವರ್ಷ ಹಳೆಯದಾದ ಯಂತ್ರಗಳನ್ನು ತೆಗೆದುಹಾಕಬೇಕು. ಅವು ಈಗ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಹೊಸದಾಗಿ ಅತ್ಯಂತ ನಿಖರ ದತ್ತಾಂಶ ಸಂಗ್ರಹಿಸುವ ಯಂತ್ರಗಳನ್ನು ಜೋಡಿಸಬೇಕು’ ಎಂದು ಯಲ್ಲಪ್ಪಾ ರೆಡ್ಡಿ ಅಭಿಪ್ರಾಯಪಡುತ್ತಾರೆ.

ಸರಕಾರೇತರ ಪರಿಸರ ಸಂರಕ್ಷಣಾ ಸಂಸ್ಥೆಯಾಗಿರುವ ಇಕೋ ವಾಚ್‍ನ ನಿರ್ದೇಶಕರಾದ ಅಕ್ಷಯ್ ಹೆಬ್ಳೀಕರ್ ಅವರ ಪ್ರಕಾರ `ವಾಹನಗಳ ಸಂಖ್ಯೆಯು ಅಧಿಕಗೊಳ್ಳುತ್ತಿದೆ. ಮಾಲಿನ್ಯದಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ವಾಯುಮಾಲಿನ್ಯ ಕಡಿಮೆಯಾಗುತ್ತಿದೆ ಎಂದು ಕೆಎಸ್‍ಪಿಸಿಬಿಯು ಹೇಳುತ್ತಿರುವುದು ಆತಂಕಕಾರಿ. ಇದೊಂದು ನಿರ್ಲಕ್ಷ್ಯದ ನಡೆ’ ಎಂದಿದ್ದಾರೆ.

ಒಂದೆಡೆಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವಂತೆಯೇ ಇನ್ನೊಂದೆಡೆಯಿಂದ ನಾವು ಹಸಿರು ಹೊದಿಕೆಯನ್ನು ಇಲ್ಲವಾಗಿಸುತ್ತಿದ್ದೇವೆ. ಇದರಿಂದಾಗಿ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಗರಿಷ್ಠ ಪ್ರಮಾಣದಲ್ಲಿ ಸೇರಿಕೊಳ್ಳುವುದಕ್ಕೆ ಅವಕಾಶವಾಗುತ್ತದೆ. ವಾಯುಮಾಲಿನ್ಯದ ಮಟ್ಟವು ಹೆಚ್ಚುತ್ತಿದೆ, ಮತ್ತು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅದು ಹೆಚ್ಚಾಗಿ ಮುಂದೆ ಶೀಘ್ರದಲ್ಲಿಯೇ ಬೆಂಗಳೂರು ದೆಹಲಿಯಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅಕ್ಷಯ್ ಹೆಬ್ಳೀಕರ್.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು