News Karnataka Kannada
Sunday, April 21 2024
Cricket
ಬೆಂಗಳೂರು ನಗರ

ನಗರವಾಸಿಗಳ ತ್ಯಾಜ್ಯದ ಪಾಡು: ದುರ್ವಾಸನೆ ಸಹಿಸಬೇಕಾದ ಹಳ್ಳಿಗರ ಗೋಳು

Photo Credit :

ನಗರವಾಸಿಗಳ ತ್ಯಾಜ್ಯದ ಪಾಡು: ದುರ್ವಾಸನೆ ಸಹಿಸಬೇಕಾದ ಹಳ್ಳಿಗರ ಗೋಳು

ಬೆಂಗಳೂರು:  ಒಂದು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರ ಸೃಷ್ಟಿಸುತ್ತಿರುವ ತ್ಯಾಜ್ಯ ದಿನವೊಂದಕ್ಕೆ 6 ಸಾವಿರ ಟನ್‍ಗಳಾಗುತ್ತವೆ, ಅಂದರೆ ವರ್ಷವೊಂದಕ್ಕೆ ಸರಿಸುಮಾರು 20 ಲಕ್ಷ ಟನ್‍ಗಳ ತ್ಯಾಜ್ಯರಾಶಿಯ ಸೃಷ್ಟಿಗೆ ಕಾರಣವಾಗುತ್ತಿದೆ ಸಿಲಿಕಾನ್ ಸಿಟಿ. ಬೆಂಗಳೂರು ನಗರದ ನಿವಾಸಿಗಳು ತಮ್ಮ ತ್ಯಾಜ್ಯಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮಿಸಿರುವ ಅಟೋ ಟಿಪ್ಪರ್‍ಗಳಿಗೆ ನಿತ್ಯವೂ ನೀಡುತ್ತಿದ್ದು, ಆ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಆದರೆ ನಗರದ ತ್ಯಾಜ್ಯ ಸುರಿಯುವ ಪ್ರದೇಶದ ಸುತ್ತಲಮುತ್ತಲಿನ ಹಳ್ಳಿಗಳಾದ ಮಂಡೂರು, ಮಾವಳ್ಳಿಪುರ, ಬೆಲ್ಲಹಳ್ಳಿಯ ಜನರು ಬೆಂಗಳೂರು ನಗರದ ಜನರು ಸೃಷ್ಟಿಸುವ ತ್ಯಾಜ್ಯದ ದುರ್ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಬದುಕು ಕಳೆಯುತ್ತಿದ್ದಾರೆ.

ಮಂದೂರು ನಿವಾಸಿಯಾಗಿರುವ ಸಿಲ್ಲವಲಿ ಎನ್. ಎಂಬವರ ಪ್ರಕಾರ ‘2007ರಲ್ಲಿ ಬಿಬಿಎಂಪಿಯು ತಮ್ಮ ಹಳ್ಳಿಯ ಬಳಿ ಡಂಪಿಂಗ್ ಯಾರ್ಡ್‍ಗೆ ಜಾಗ ಗುರುತಿಸುವ ತನಕವೂ ನಮ್ಮ ಹಳ್ಳಿಯು ನಿಜಕ್ಕೂ ಸುಂದರವಾಗಿತ್ತು. ಆದರೆ ಈಗ ಮಾತ್ರ ಅಸಾಧ್ಯ ದುರ್ವಾಸನೆಯನ್ನು ನಾವು ಸಹಿಸಬೇಕಾಗಿದ್ದು, ನೂರಾರು ಟ್ರಕ್ಕುಗಳಲ್ಲಿ ಬರುವ ತ್ಯಾಜ್ಯವನ್ನು ನಿತ್ಯವೂ ಇಲ್ಲಿ ರಾಶಿ ಹಾಕಲಾಗುತ್ತಿದ್ದು, ಇದು ಅನೇಕ ರೋಗಗಳಿಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು(ಸಿಪಿಸಿಬಿ) ಇಂತಹ ತ್ಯಾಜ್ಯಗಳನ್ನು ಜನವಾಸವಿಲ್ಲದ, ಜನರು ಸಂಪರ್ಕಕ್ಕೆ ಬಾರದ ರೀತಿಯ ಬಂಜರು ಭೂಮಿಯನ್ನು ಆಯ್ಕೆ ಮಾಡಿ ಅಲ್ಲಿ ಸುರಿಯಬೇಕೆಂದು ಹೇಳುತ್ತದೆ. ತ್ಯಾಜ್ಯ ಸುರಿಯುವುದೆಂದರೆ ಅದು ಕೇವಲ ದೊಡ್ಡದಾದ ಸ್ಥಳವನ್ನು ಆಕ್ರಮಿಸಿಕೊಳ್ಳುವುದು ಮಾತ್ರವಲ್ಲದೆ, ರೋಗಕಾರಕಗಳು, ನೊಣಗಳು, ಅಸಾಧ್ಯ ವಾಸನೆಗೂ ಕಾರಣವಾಗುತ್ತದೆ. ಕೊಳಚೆ ನೀರು ನಿಂತು ಅದರಿಂದ ಹಸಿರು ಮನೆ ಅನಿಲದ ಉತ್ಪತ್ತಿಯಾಗಿ ಬೆಂಕಿ ಹರಡುವ ಅಪಾಯವೂ ಕೂಡಾ ಇರುತ್ತದೆ.

ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗಿರುವ ಮಾರ್ಗಸೂಚಿಗಳ ಪ್ರಕಾರ ಕಸ ಸುರಿಯುವ ಸ್ಥಳವು ಜನವಸತಿ ಪ್ರದೇಶಕ್ಕಿಂತ ಕನಿಷ್ಠ 500 ಮೀಟರ್ ದೂರದಲ್ಲಿರಬೇಕು. ಮತ್ತು ಕಸ ಸುರಿಯುವ ಸ್ಥಳವನ್ನು ಗುರುತಿಸಿದ ಬಳಿಕ ಅದರ ಸುತ್ತಲಿನ 500 ಮೀಟರ್ ವ್ಯಾಪ್ತಿಯನ್ನು ‘ನೋ ಡೆವಲಪ್‍ಮೆಂಟ್ ಬಫರ್ ಝೋನ್’ (ಅಭಿವೃದ್ಧಿ ರಹಿತ ಬಫರ್ ವಲಯ)ವೆಂದು ಘೋಷಿಸಬೇಕು.

ಸಿಪಿಸಿಬಿಯು ಪರಿಸರ ಕಾಳಜಿಯ ಉದ್ದೇಶದಿಂದ ತ್ಯಾಜ್ಯ ಸುರಿಯುವ ಪ್ರದೇಶದ ಸುತ್ತಲಿನ ಬಫರ್ ಝೋನ್‍ನಲ್ಲಿ ತ್ಯಾಜ್ಯ ಕೊಳೆಯುವ ಮೂಲಕ ಮಿಥೇನ್ ಉತ್ಪತ್ತಿಯಾಗುವ ಬಗ್ಗೆಯೂ ತಿಳಿಸಿದೆ. ಮಿಥೇನ್ ಬ್ಯಾಕ್ಟೀರಿಯಾದ ಆಮ್ಲಜನಕ ರಹಿತ ಉಸಿರಾಟದ ಉಪ-ಉತ್ಪನ್ನವಾಗಿದೆ ಮತ್ತು ಈ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದ ತೇವಾಂಶವನ್ನು ಮತ್ತು ಮಿಥೇನ್ ಸಾಂದ್ರತೆಯೊಂದಿಗೆ ಡಂಪಿಂಗ್ ಯಾರ್ಡ್‍ಗಳಲ್ಲಿ ಅಭಿವೃದ್ದಿ ಹೊಂದುತ್ತದೆ. ಗರಿಷ್ಠ ಆಮ್ಲಜನಕ ರಹಿತ ವಿಭಜನೆಯಲ್ಲಿ ಈ ಅನಿಲ ಸಂಯೋಜನೆಯು 50% ರವರೆಗೆ ತಲುಪಬಹುದು ಎಂದು ಸಿಪಿಸಿಬಿ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.

2014ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು `ಬಿಬಿಎಂಪಿಯು ಈಗ ತ್ಯಾಜ್ಯ ರಾಶಿ ಹಾಕುತ್ತಿರುವ ಡಂಪಿಂಗ್ ಯಾರ್ಡ್‍ಗಳು ಬಫರ್ ಝೋನ್‍ಗಳ ಒಳಗಿದ್ದು, ಆ ಪ್ರದೇಶಗಳ ಜನರಿಂದ ನಿರಂತರವಾಗಿ ದುರ್ವಾಸನೆ ಹಾಗೂ ವ್ಯಾಪಕವಾದ ಹಾರಾಡುತ್ತಿರುವ ಹಕ್ಕಿಗಳಿಂದಾಗಿ ಕಿರಿಕಿರಿ ಅನುಭವಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ’ ಎಂದು ಹೇಳಿದೆ.

ಕೆಎಸ್‍ಪಿಸಿಬಿಯು ಭವಿಷ್ಯದಲ್ಲಿ ಯಾವುದೇ ಡಂಪಿಂಗ್ ಯಾರ್ಡ್‍ಗಳು ಬಫರ್ ಝೋನ್ ಒಳಗಿರಬಾರದು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿತ್ತಾದರೂ ಬಿಬಿಎಂಪಿಯು ಈ ವಿಷಯದಲ್ಲಿ ಸರಿಯಾದ ಹೆಜ್ಜೆಯನ್ನಿಟ್ಟಿಲ್ಲ.

ವಿಶ್ವ ಬ್ಯಾಂಕಿನ ಅಧ್ಯಯನ ಪ್ರಕಾರ `ಭಾರತದಂತಹ ರಾಷ್ಟ್ರಗಳಲ್ಲಿ 90% ತ್ಯಾಜ್ಯಗಳನ್ನು ಅನಿಯಂತ್ರಿತ ಸ್ಥಳಗಳಲ್ಲಿಯೇ ಸುರಿಯಲಾಗುತ್ತಿದ್ದು, ತೆರೆದ ಸ್ಥಳಗಳಲ್ಲಿಯೇ ತ್ಯಾಜ್ಯವನ್ನು ಸುಡಲಾಗುತ್ತಿದೆ. ಇದು ಗಂಭೀರ ಅನಾರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದ್ದು, ಸುರಕ್ಷತೆಯಿಲ್ಲದ ಈ ಕ್ರಮಗಳಿಂದ ಪರಿಸರವು ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ. ಸರಿಯಾಗಿ ನಿರ್ವಹಿಸದ ಕಸದ ರಾಶಿಯು ರೋಗ ಹರಡುವ ವಾಹಕಗಳನ್ನು ಬೆಳೆಸುವ ಕೆಲಸ ಮಾಡುತ್ತದೆ. ತ್ಯಾಜ್ಯರಾಶಿಯಿಂದ ಉತ್ಪತ್ತಿಯಾಗುವ ಮಿಥೇನ್ ಅನಿಲ ಹೊರಸೂಸುವಿಕೆಯ ಪರಿಣಾಮದಿಂದ ವಾಯುಮಾಲಿನ್ಯವೂ ಉಂಟಾಗುತ್ತಿದೆ. ಇದರ ಜೊತೆಗೆ ನಗರ ಹಿಂಸಾಚಾರಗಳಿಗೆ ಗಲಭೆಕೋರರಿಗೆ ಸಾಧನಗಳಾಗಿ ಕಾಣಲ್ಪಡುವ ತ್ಯಾಜ್ಯ ರಾಶಿಯಲ್ಲಿರುವ ಬಟ್ಟೆ ತೊಳೆಯುವ ಯಂತ್ರಗಳು, ರೆಫ್ರಿಜರೇಟರ್‍ಗಳು, ಹವಾನಿಯಂತ್ರಕಗಳು ಮತ್ತು ಮರದ ತುಂಡುಗಳನ್ನು ರಸ್ತೆಗಳನ್ನು ಮುಚ್ಚುವುದಕ್ಕಾಗಿ  ಹಾಗೂ ಗಾಜಿನ ಬಾಟಲ್‍ಗಳನ್ನು ಆಯುಧಗಳಾಗಿಯೂ ಬಳಸಲಾಗುತ್ತಿದೆ’ ಎಂದು ತಿಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕರಾದ ಪ್ರೊ. ನಂದಿನಿ ಎನ್. ಅವರ ಪ್ರಕಾರ ‘ತ್ಯಾಜ್ಯ ತಾಣಗಳಲ್ಲಿ ಇ. ಕೋಲಿ (ಬ್ಯಾಕ್ಟೀರಿಯಾ) ಮತ್ತು ಫೆಕಲ್ ಸ್ಟ್ರೆಪ್ಟೋಕೊಕಿ (ಬಯೋ-ಏರೋಸಾಲ್‍ಗಳು) ನಂತಹ ಸೂಕ್ಷ್ಮಜೀವಿಗಳ ಉಪಸ್ಥಿತಿಯು ಹೆಚ್ಚುತ್ತವೆ. ಮತ್ತು ಇವು ಗಾಳಿಯ ಮೂಲಕ ಸಮೀಪದ ಜನವಾಸ ಪ್ರದೇಶಗಳತ್ತ ಬರುತ್ತವೆ’ ಎನ್ನುತ್ತಾರೆ.

‘ಇಂತಹ ಬಯೋಏರೋಸಾಲ್ಸ್‍ಗಳಿಗೆ ಒಡ್ಡಿಕೊಳ್ಳುವುದರಿಂದ ವೈರಸ್‍ಗಳು, ಶಿಲೀಂಧ್ರಗಳು, ಅಸ್ತಮಾ, ಅಲರ್ಜಿಕ್ ರೆನಿಟಸ್ ಮತ್ತು ಕ್ಯಾನ್ಸರ್ ರೋಗಗಳು ಹರಡುವ ಸಾಧ್ಯತೆಯಿದೆ’ ಎನ್ನುತ್ತಾರೆ ಪ್ರೊ. ನಂದಿನಿ ಎನ್.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‍ಒ) ಪ್ರಕಾರ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಆರೋಗ್ಯ ಕಾರ್ಯಕರ್ತರು, ತ್ಯಾಜ್ಯ ನಿರ್ವಹಿಸುವ ಕಾರ್ಮಿಕರು, ರೋಗಿಗಳು ಮತ್ತು ಸಮುದಾಯವೇ ಮಾರಕವಾದ ಸೋಂಕುಗಳಿಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ವೈದ್ಯಕೀಯ ತ್ಯಾಜ್ಯಗಳು ಉತ್ಪತ್ತಿಯಾಗುವ ಸ್ಥಳದಲ್ಲಿಯೇ ವಿಲೇವಾರಿಗೊಳಿಸಿ, ಬೇರ್ಪಡಿಸಿ ಸೂಕ್ತವಾಗಿ ಸಂಸ್ಕರಿಸುವುದು ಹಾಗೂ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು.

ಲೇಕ್‍ಸೈಡ್ ಸೆಂಟರ್ ಫಾರ್ ಹೆಲ್ತ್ ಪ್ರಮೋಷನ್‍ನ ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಹೆಚ್. ಪರಮೇಶ್ ಅವರ ಪ್ರಕಾರ `ತ್ಯಾಜ್ಯ ರಾಶಿ ಹಾಕುವ ತಾಣಗಳಿಂದ ಉತ್ಪತ್ತಿಯಾಗುವ ಮಾಲಿನ್ಯಕಾರಕಗಳಾದ ಮಿಥೇನ್, ಸಾರಜನಕ, ಇಂಗಾಲ, ಪಿಎಂ ಮಟ್ಟದ ಕಣಗಳು, ಡಯಾಕ್ಸಿನ್‍ಗಳು ಉಸಿರಾಟದ ತೊಂದರೆಗಳು, ಅಸ್ತಮಾ, ಚರ್ಮ ಹಾಗೂ ಮೂತ್ರಕೋಶದ ಕ್ಯಾನ್ಸರ್‍ನಂತಹ ಅನೇಕ ಆನಾರೋಗ್ಯಗಳಿಗೆ ಕಾರಣವಾಗಬಹುದು. ಇದರ ಜೊತೆಗೆ ಸಂತಾನೋತ್ಪತ್ತಿಯ ಮತ್ತು ಬೆಳವಣಿಗೆಯ ಸಮಸ್ಯೆಗಳೂ ಉಂಟಾಗುವ ಸಾಧ್ಯತೆ ಹೆಚ್ಚು.

ಡಬ್ಲ್ಯುಹೆಚ್‍ಒ ಅಧ್ಯಯನ ಪ್ರಕಾರ ಘನತ್ಯಾಜ್ಯವನ್ನು ತೆರೆದ ಸ್ಥಳದಲ್ಲಿ ಸುಡುವುದಕ್ಕಿಂತಲೂ ಕಡಿಮೆ ವೆಚ್ಚದ ಪರ್ಯಾಯವಾಗಿ ತ್ಯಾಜ್ಯವನ್ನು ಕಡಿಮೆಗೊಳಿಸುವುದು, ಸಂಗ್ರಹ, ಸಂಸ್ಕರಣೆ, ಬೇರ್ಪಡಿಕೆ, ನಿರ್ವಹಣೆ, ಮರುಬಳಕೆ ಮಾಡುವ ಪ್ರಕ್ರಿಯೆಯು ಕಾರ್ಯಸಾಧ್ಯವಾದುದಾಗಿದೆ. ಇದು ಈಗಾಗಲೇ ಬಹುತೇಕ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನವಾಗಿದೆ. ನಗರ ತ್ಯಾಜ್ಯದ ಸುಧಾರಿತ ಸಂಗ್ರಹಣೆ, ನಿರ್ವಹಣೆ ಮತ್ತು ವಿಲೇವಾರಿ ಹವಾಮಾನ ಮತ್ತು ಆರೋಗ್ಯ ಎರಡರಲ್ಲೂ ಅನೇಕ ಸುಧಾರಣೆಗಳನ್ನು ನೀಡುವ ಒಂದು ಪ್ರಮುಖ ತಂತ್ರವಾಗಿದೆ. ಆಮ್ಲಜನಕ ರಹಿತ ಸ್ಥಿತಿಯಲ್ಲಿ ಕರಗುವುದನ್ನು, ಮಿಥೇನ್ ಹೊರಸೂಸುವಿಕೆಯನ್ನು ಒಳಚರಂಡಿ, ಜಾನುವಾರು ಗೊಬ್ಬರ, ಡಂಪಿಂಗ್ ಯಾರ್ಡ್‍ಗಳಿಂದ ಸಂಗ್ರಹಿಸಿ ನಂತರ ಅದನ್ನು ಬಯೋಗ್ಯಾಸ್ ಅಥವಾ ಬಯೋ ಮಿಥೇನ್ ಆಗಿ ಬಳಸುವ ಮೂಲಕ ಅಡುಗೆ, ಶಾಖ ಮತ್ತು ವಿದ್ಯುತ್ ಅಗತ್ಯಗಳಿಗಾಗಿ ಬಳಸಬಹುದು ಎಂದು ಅಧ್ಯಯನ ತಿಳಿಸಿದೆ. 

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಾಗಿರುವ ಡಾ. ಯಲ್ಲಪ್ಪ ರೆಡ್ಡಿಯವರ ಪ್ರಕಾರ ‘ತ್ಯಾಜ್ಯದ ಉತ್ಪಾದನೆಯೇ ಪ್ರಮುಖ ಸಮಸ್ಯೆಯಾಗಿದೆ. ಪ್ಲಾಸ್ಟಿಕ್ ಮತ್ತು ಜೈವಿಕವಾಗಿ ಕರಗದ ವಸ್ತುಗಳ ಬಳಕೆಯನ್ನು ಜನರು ಗಣನೀಯವಾಗಿ ಕಡಿಮೆಗೊಳಿಸಬೇಕು ಮತ್ತು ಉದ್ಯಮಗಳು ತಮ್ಮ ವಿತರಣಾ ವ್ಯವಸ್ಥೆಯಲ್ಲಿ ಜೈವಿಕವಾಗಿ ಕರಗುವಂತಹ ವಸ್ತುಗಳನ್ನೇ ಪ್ಯಾಕೇಟ್‍ಗಳ ತಯಾರಿಕೆಗೆ ಉಪಯೋಗಿಸಬೇಕು’.

‘ಸುಪ್ರಿಮ್ ಕೋರ್ಟಿನ ನಿರ್ದೇಶನದಂತೆ ಸ್ಥಳೀಯಾಡಳಿತಗಳು ತ್ಯಾಜ್ಯವನ್ನು ಬೇರ್ಪಡಿಸಬೇಕು’ ಎಂದು ಡಾ. ಯಲ್ಲಪ್ಪ ರೆಡ್ಡಿ ಹೇಳುತ್ತಾರೆ. 

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101 Reporters.comನ ಸದಸ್ಯರು)

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು