News Karnataka Kannada
Wednesday, April 17 2024
Cricket
ಬೆಂಗಳೂರು ನಗರ

ಕೊರೊನಾ ಸೋಂಕಿತರಿಗೆ ಸಿಗುತ್ತಿಲ್ಲ ಬಿಯು ನಂಬರ್​; ಸಮಸ್ಯೆ ಹಿಂದೆ ಖಾಸಗಿ ಕೈವಾಡ ಎಂದು ಸರ್ಕಾರ ಶಂಕೆ

Photo Credit :

ಕೊರೊನಾ ಸೋಂಕಿತರಿಗೆ ಸಿಗುತ್ತಿಲ್ಲ ಬಿಯು ನಂಬರ್​; ಸಮಸ್ಯೆ ಹಿಂದೆ ಖಾಸಗಿ ಕೈವಾಡ ಎಂದು ಸರ್ಕಾರ ಶಂಕೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿ ವೇಗವಾಗಿ ಏರುತ್ತಿದ್ದು, ಎರಡನೇ ಅಲೆಯ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ. ಒಂದೆಡೆ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲವಾದರೆ ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ಸೋಂಕಿತರಿಗೆ ಬಿಯು ನಂಬರ್ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಸಾಲುಸಾಲಾಗಿ ಕೇಳಿಬರುತ್ತಿವೆ. ಬಿಯು ನಂಬರ್​ಗೆ ಸಂಬಂಧಿಸಿದಂತೆ ಖಾಸಗಿ ಪ್ರಯೋಗಾಲಯಗಳ ಕೈವಾಡ ಇದೆ ಎಂಬ ಶಂಕೆ ಸರ್ಕಾರದ ಕಡೆಯಿಂದಲೇ ವ್ಯಕ್ತವಾಗಿದ್ದು, ಬಿಯು ನಂಬರ್​ ಗೊಂದಲ ಪರಿಹರಿಸಲು ಯಾವ ಮಾರ್ಗ ಅನುಸರಿಸಬಹುದೆಂಬ ಮಾಹಿತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಬಿಯು ನಂಬರ್ ಸಿಗದೇ ಇರುವುದಕ್ಕೆ ಮುಖ್ಯ ಕಾರಣ ಪರೀಕ್ಷೆಯ ನಂತರ ಅದರ ಮಾಹಿತಿ ಐಸಿಎಂಆರ್ ಪೋರ್ಟಲ್​ಗೆ ಸಮರ್ಪಕವಾಗಿ ಅಪ್​ಡೇಟ್ ಆಗುತ್ತಿಲ್ಲ. ರಾಜ್ಯ ಕೊವಿಡ್​ ವಾರ್​ ರೂಮ್ ಐಸಿಎಂಆರ್ ಪೋರ್ಟಲ್ ಮಾಹಿತಿ ಆಧರಿಸಿಯೇ ಬಿಯು ನಂಬರ್ ನೀಡುವುದರಿಂದ ಇಲ್ಲಿ ಸಮಸ್ಯೆ ಆಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಗೊಂದಲಕ್ಕೆ ಕಾರಣವನ್ನೂ ನೀಡಿರುವ ಅವರು, ಖಾಸಗಿ ಪ್ರಯೋಗಾಲಯಗಳು ಸ್ವ್ಯಾಬ್ ಟೆಸ್ಟ್ ವಿಚಾರದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪರಿಪಾಲಿಸುತ್ತಿಲ್ಲ. ಪರೀಕ್ಷೆಯ ನಂತರ ಮಾಹಿತಿಯನ್ನು ಭಾರತ ಸರ್ಕಾರ ಬಿಡುಗಡೆಗೊಳಿಸಿರುವ ಸಾಫ್ಟ್​ವೇರ್​ಗೆ ಹಾಕದಿದ್ದರೆ ಅದು ನಮಗೆ ಕಾಣಿಸುವುದೇ ಇಲ್ಲ. ಹೀಗಾಗಿ ಬಿಯು ನಂಬರ್ ನೀಡುವುದು ಕೂಡ ಅಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬಹುದು?
1. ಜನರಿಗೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಕೊರೊನಾ ಟೆಸ್ಟ್​ನ SRF ID (Specimen Referral Form) ಏಕೆ ಮುಖ್ಯ ಎಂಬುದನ್ನು ಅರ್ಥ ಮಾಡಿಸಬೇಕು. ಪ್ರಯೋಗಾಲಯಗಳು ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿದರೆ ಎಸ್​ಆರ್​ಎಫ್​ ಐಡಿ ಜನರೇಟ್ ಆಗುತ್ತದೆ. ಹೀಗಾಗಿ ಜನರೇ ಎಸ್​ಆರ್​ಎಫ್​ ಐಡಿ ವಿಚಾರದಲ್ಲಿ ಎಚ್ಚೆತ್ತುಕೊಂಡು ಕೇಳಲಾರಂಭಿಸಿದರೆ ಸಹಜವಾಗಿ ಪರೀಕ್ಷಾ ಕೇಂದ್ರಗಳು ನಿಯಮ ಪಾಲಿಸುತ್ತವೆ ಹಾಗೂ ಇದು ಬಿಯು ನಂಬರ್​ ನೀಡಲು ಸಹಕಾರಿಯಾಗುತ್ತದೆ.
2. ಕೆಲವು ಪ್ರಕರಣಗಳಲ್ಲಿ ಕೆಲಸದ ಒತ್ತಡದಿಂದಾಗಿ ಪ್ರಯೋಗಾಲಯದ ಸಿಬ್ಬಂದಿ ಎಸ್​ಆರ್​ಎಫ್​ ಐಡಿ ಸಿಕ್ಕರೂ ಅದನ್ನು ಪೋರ್ಟಲ್​ನಲ್ಲಿ ದಾಖಲಿಸುತ್ತಿಲ್ಲ. ಇದನ್ನು ಸರಿಪಡಿಸುವುದು ಕೂಡಾ ಮುಖ್ಯ. ಇದಕ್ಕಾಗಿ ಪ್ರಯೋಗಾಲಯಗಳಿಗೆ ಡೇಟಾ ಎಂಟ್ರಿ ಆಪರೇಟರ್ಸ್​ಗಳನ್ನು ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಪ್ರಯೋಗಾಲಯಗಳಿಗೆ ಸಿಬ್ಬಂದಿ ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಪ್ರಯೋಗಾಲಯಗಳಿಗೆ ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಅಳವಡಿಸುವ ಪ್ರಕ್ರಿಯೆ ಆಗುತ್ತಿದೆ. ಇದು ಯಶಸ್ವಿಯಾದರೆ ಈ ಸಮಸ್ಯೆ ಕಡಿಮೆಯಾಗುತ್ತದೆ.
3. ಐಸಿಎಂಆರ್​ ಪೋರ್ಟಲ್​ಗೆ ಮಾಹಿತಿ ನೀಡದೇ ಇರುವುದು ಅಥವಾ ಡೇಟಾ ಎಂಟ್ರಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವ ಪ್ರಯೋಗಾಲಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಲ್ಯಾಬ್​ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದರ ಬಗ್ಗೆ ಎಚ್ಚರಿಕೆ ನೀಡಿದರೆ ಪ್ರಯೋಗಾಲಯಗಳು ಸರಿದಾರಿಗೆ ಬರಬಹುದು. ಜತೆಗೆ, ಈಗಾಗಲೇ ನಿಯಮಗಳ ಬಗ್ಗೆ ಅರಿವಿದ್ದವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕು.
4. ಕೆಲ ಖಾಸಗಿ ಪ್ರಯೊಗಾಲಯಗಳು ಮತ್ತು ಆಸ್ಪತ್ರೆಗಳು ಬೇಕಂತಲೇ ನಿಯಮ ಉಲ್ಲಂಘಿಸುತ್ತಿವೆ. ಕೊರೊನಾ ಸೋಂಕಿತರನ್ನು ತಮಗೆ ಬೇಕಾದ ಕಡೆಯಲ್ಲಿ ಸೇರಿಸಿ ಚಿಕಿತ್ಸೆ ನೀಡುವ ಸಲುವಾಗಿ ಖಾಸಗಿಯಾಗಿ ಪರೀಕ್ಷೆ ನಡೆಸಿ ವೈಯಕ್ತಿಕವಾಗಿ ಮಾಹಿತಿ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಎಸ್​ಆರ್​ಎಫ್​ ಐಡಿ ಜನರೇಟ್ ಆಗುವುದೇ ಇಲ್ಲ. ಎಸ್​ಆರ್​ಎಫ್ ಐಡಿ ಇಲ್ಲದ ಕಾರಣ ಸಹಜವಾಗಿ ಬಿಯು ನಂಬರ್ ಕೂಡಾ ಸಿಗುವುದಿಲ್ಲ. ಇದನ್ನು ತಡೆಗಟ್ಟಬೇಕೆಂದರೆ ಜನರೇ ಮುಂದಾಗಿ ಎಸ್​ಆರ್​ಎಫ್​ ಐಡಿಯನ್ನು ಕೇಳಿ ಪಡೆಯಬೇಕು.
ಈ ಮಾರ್ಗಗಳನ್ನು ಅನುಸರಿಸಿ ಐಸಿಎಂಆರ್​ ಪೋರ್ಟಲ್​ಗೆ ಸಮರ್ಪಕ ಮಾಹಿತಿ ನೀಡುವುದು ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವುದು ಸಾಧ್ಯವಾದರೆ ಬಿಯು ನಂಬರ್ ಜನರೇಟ್ ಖಂಡಿತವಾಗಿಯೂ ಆಗುತ್ತದೆ. ಐಸಿಎಂಆರ್ ಪೋರ್ಟಲ್​ನಲ್ಲಿ ಮಾಹಿತಿ ನೀಡಿದ ಒಂದು ತಾಸಿನೊಳಗೆ ಬಿಯು ನಂಬರ್ ಜನರೇಟ್ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವತಿಯಿಂದ ಸಭೆಯನ್ನೂ ನಡೆಸಲಾಗಿದೆ. ಎಲ್ಲವೂ ಕ್ರಮಬದ್ಧವಾಗಿ ನಡೆದರೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು