News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ಒಗ್ಗಟ್ಟಿನ ಫಲ ಮಸ್ಕಿ ಗೆಲುವು, ಕಾಂಗ್ರೆಸ್, ಸುಪ್ರೀಂ ಕೋರ್ಟ್ ಹೋರಾಟದ ಫಲ ಉಚಿತ ಲಸಿಕೆ; ಡಿ.ಕೆ ಶಿವಕುಮಾರ್

Photo Credit :

ಒಗ್ಗಟ್ಟಿನ ಫಲ ಮಸ್ಕಿ ಗೆಲುವು, ಕಾಂಗ್ರೆಸ್, ಸುಪ್ರೀಂ ಕೋರ್ಟ್ ಹೋರಾಟದ ಫಲ ಉಚಿತ ಲಸಿಕೆ; ಡಿ.ಕೆ ಶಿವಕುಮಾರ್

ಬೆಂಗಳೂರು:’ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾಯಕನ್ನು ಬೆಳೆಸಲು ಕೇವಲ ವ್ಯಕ್ತಿಯಿಂದ ಸಾಧ್ಯವಿಲ್ಲ. ಅದಕ್ಕೆ ಪಕ್ಷ ಹಾಗೂ ಸಂಘಟನೆ ಮುಖ್ಯ. ಪಕ್ಷದ ನಾಯಕರು, ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಉಪಚುನಾವಣೆಯಲ್ಲಿ ಜಯ ಸಿಕ್ಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ತಿಳಿಸಿದ್ದಾರೆ.

 

ಏಪ್ರಿಲ್ ನಲ್ಲಿ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಬಸನಗೌಡ ತುರುವಿಹಾಳ್ ಅವರು ಕೋವಿಡ್ ಪೀಡಿತರಾಗಿದ್ದ ಕಾರಣ ತಡವಾಗಿ ಅಂದರೆ ಇಂದು ವಿಧಾನಸೌಧದಲ್ಲಿ ವಿಧಾನಸಭೆ ಸ್ಪೀಕರ್ ಅವರಿಂದ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಿವಕುಮಾರ್ ಅವರು, ಬಸವನಗೌಡ ತುರುವಿಹಾಳ್ ಅವರನ್ನು ಸನ್ಮಾನಿಸಿ, ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:

 

‘ನಾನು ಪ್ರತಿಜ್ಞೆ ತೆಗೆದುಕೊಳ್ಳುವ ದಿನ ರಾಹುಲ್ ಗಾಂಧಿ ಅವರು ಕರೆಮಾಡಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದರು. ಆಗ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ. ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು…

 

ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಮುಖ ಕಾರಣ ಅಭ್ಯರ್ಥಿ ಬಗ್ಗೆ ಇಡೀ ಜಿಲ್ಲೆಯ ನಾಯಕರಲ್ಲಿ ಒಕ್ಕೊರಲಿನ ಅಭಿಪ್ರಾಯ ಬಂದಿದ್ದು. ನಂತರ ಎಲ್ಲರೂ ಒಟ್ಟಾಗಿ ಸೇರಿ, ಕೆಲಸ ಮಾಡಿದ್ದರಿಂದ ಈ ಜಯ ಸಾಧ್ಯವಾಯಿತು. ಈ ಗೆಲುವಿಗೆ ಡಿ.ಕೆ. ಶಿವಕುಮಾರ್ ಆಗಲಿ, ಕಾರ್ಯಾಧ್ಯಕ್ಷರಾಗಲಿ ಕಾರಣ ಅಲ್ಲ. ಮೊದಲು ನೀವು, ಆಮೇಲೆ ಅಭ್ಯರ್ಥಿ ಮಾಡಿದ್ದ ಜನಸೇವೆ. ನಾವು ಏನು ಮಾಡಿದೆವು ಎಂಬುದು ಬೇರೆ ವಿಚಾರ. ನೀವು ಮತದಾರರ ಸ್ವಾಭಿಮಾನ ಉಳಿಸಿಕೊಂಡಿದ್ದು ಮುಖ್ಯ.

 

ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಯೋಗ ಸಿಗುತ್ತದೆ, ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ನೀವು ಚುನಾವಣೆಗೂ ಮುನ್ನ ನನ್ನ ಬಳಿ ಮಾತನಾಡಲು ಬಂದಾಗ, ನೀವು ಏನು ಹೇಳುತ್ತೀರೋ ನಾನು ಅದಕ್ಕೆ ಸಮ್ಮತಿ ಸೂಚಿಸುತ್ತೇನೆ ಎಂದಿದ್ದೆ. ಇದರಲ್ಲಿ ರಾಜಿ ಇಲ್ಲ, ನನಗೆ ಫಲಿತಾಂಶ ಬೇಕು ಎಂದಿದ್ದೆ.

 

ನನಗೆ ಸುರ್ಜೇವಾಲ ಸಾಹೇಬರು ಕೂಡ ಸೂಚನೆ ಕೊಟ್ಟಿದ್ದರು. ಬಿಜೆಪಿ ಅವರು ದುಡ್ಡು, ಕಾಸು ಎಲ್ಲ ಹಂಚಿದ್ದರು. ನೀವು ಅದರ ವಿರುದ್ಧ ಹೋರಾಡಿದಿರಿ. ಪಕ್ಕದ ಜಿಲ್ಲೆಯ ಪಕ್ಷದ ನಾಯಕರ ಸಹಕಾರ ಕೂಡ ಚೆನ್ನಾಗಿತ್ತು. ಅದರಲ್ಲೂ ರೈತ ಸಂಘಟನೆಗಳು, ಬೇರೆ ಸಂಘಟನೆಗಳು ಬೆಂಬಲ ಸೂಚಿಸಿದವು.

 

ನನಗೆ ವಿರೋಧ ಪಕ್ಷದವರೂ ಸಹಕರಿಸಿದ್ದಾರೆ. ನಮ್ಮ ಅಭ್ಯರ್ಥಿಗೆ ಅನ್ಯಾಯ ಆಗಿದೆ ಅಂತಾ ಅವರು ಭಾವಿಸಿ ಸಹಕಾರ ಕೊಟ್ಟಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಅಭ್ಯರ್ಥಿ ಕರೆದುಕೊಂಡು ಬಂದವರಿಗೆ, ಒಟ್ಟಾಗಿ ಕೆಲಸ ಮಾಡಿದವರಿಗೆ, ಹಗಲು-ರಾತ್ರಿ ದುಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

 

ನಿಮ್ಮ ಗೆಲುವು ಕೇವಲ ರಾಜ್ಯದ ಗೆಲುವಲ್ಲ. ದೇಶದ ಗೆಲವು. ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲೂ ನಮ್ಮ ಅಭ್ಯರ್ಥಿ ಶ್ರಮಪಟ್ಟಿದ್ದರು. ಆದರೂ ಸ್ವಲ್ಪ ಎಡವಟ್ಟಾಯಿತು. ಸ್ವಲ್ಪ ಅಂತರದಲ್ಲಿ ಸೋತರೂ ನಮ್ಮ ವಿರೋಧಿಗಳಿಗೆ ಉತ್ತಮ ಸಂದೇಶ ರವಾನೆಯಾಗಿದೆ. ಬಸವಕಲ್ಯಾಣದಲ್ಲಿ ನಮ್ಮ ನಾಯಕರು ಆಸ್ಪತ್ರೆ ಸೇರಿದರು. ಈ ಬಗ್ಗೆ ವರದಿಯನ್ನು ಪಡೆಯುತ್ತೇವೆ.

 

ಪ್ರತಿ ಕ್ಷೇತ್ರದಲ್ಲಿ ನಮಗೆ ಮಾಹಿತಿ ನೀಡುವ ತಂಡವಿದೆ. ಯಾರೇ ಪಕ್ಷದ ವಿರುದ್ಧ ಶಿಸ್ತು ಮೀರಿ ನಡೆದುಕೊಂಡರೆ ನಾನು ಸುಮ್ಮನೆ ಇರುವುದಿಲ್ಲ. ನಿಮಗೆ ಯಾರ ಬೆಂಬಲ ಇದ್ದರೂ ಸರಿ ನಾನು ಮುಲಾಜು ನೋಡುವುದಿಲ್ಲ. ನಮಗೆ ಶಿಸ್ತು ಮುಖ್ಯ.

 

ಚುನಾವಣೆಯಲ್ಲಿ ದುಡಿದ ಎಲ್ಲ ಕಾರ್ಯಕರ್ತರಿಗೂ ಅಭಿನಂದಿಸುತ್ತೇನೆ.’

 

*ಉಚಿತ ಲಸಿಕೆ; ಕಾಂಗ್ರೆಸ್, ಸುಪ್ರೀಂಕೋರ್ಟ್ ಹೋರಾಟದ ಫಲ*

 

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ‘ಇದು ಕಾಂಗ್ರೆಸ್ ಪಕ್ಷದ ಹೋರಾಟ. ದೇಶದ ಎಲ್ಲ ವಿರೋಧ ಪಕ್ಷಗಳು ಸೇರಿ, ಲಸಿಕೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಲ್ಲ. ಭಾರತ ಸರ್ಕಾರ ಇದರ ಜವಾಬ್ದಾರಿ ಹೊರಬೇಕು ಎಂದು ಒತ್ತಾಯ ಮಾಡುತ್ತಿದ್ದೆವು. ನಾವು ನಮ್ಮ ಅಭಿಯಾನ ಆರಂಭಿಸಿ, ರಾಜ್ಯಪಾಲರನ್ನು ಭೇಟಿಯಾಗಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಲಾಗಿತ್ತು. ಜಿಲ್ಲಾ ಮಟ್ಟದಿಂದಲೂ ಒತ್ತಾಯ ಮಾಡಲಾಗಿತ್ತು.

 

ಇದೆಲ್ಲಕ್ಕಿಂತ ಮುಖ್ಯವಾಗಿ ಸುಪ್ರೀಂಕೋರ್ಟ್ ಕೊಟ್ಟ ಸೂಚನೆಗಳಿಗೆ ಎಲ್ಲರ ಪರವಾಗಿ ತಲೆಬಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಪ್ರಜಾಪ್ರಭುತ್ವ ಉಳಿಸಿ, ಆಡಳಿತ ವ್ಯವಸ್ಥೆ ಉಳಿಸಲು, ಜನರ ನೋವು ಅಳಿಸಿ, ಅವರ ಜೀವ ರಕ್ಷಿಸಲು ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಣಯ ಮಹತ್ವದ್ದಾಗಿದೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು