News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ಅಧಿಕಾರ ಕಳೆದು ಶಕ್ತಿಹೀನವಾಗಿರುವ ಕೆಎಸ್‍ಪಿಸಿಬಿ

Photo Credit :

ಅಧಿಕಾರ ಕಳೆದು ಶಕ್ತಿಹೀನವಾಗಿರುವ ಕೆಎಸ್‍ಪಿಸಿಬಿ

ಬೆಂಗಳೂರು: ಯಾವುದೇ ಒಂದು ನಗರದ ದೈನಂದಿನ ನಿರ್ವಹಣೆಗಾಗಿ ಸರಕಾರ ನಿಯೋಜಿತ ಸಂಸ್ಥೆಗಳು ಒಂದಾಗಿ, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಆದಾಗ್ಯೂ ಬೆಂಗಳೂರಿನಲ್ಲಿ ಇಂತಹ ನಿರ್ವಹಣೆ, ನಿಯಮಪಾಲನೆಗಾಗಿ ಅರ್ಧ ಡಜನ್‍ಗಳಷ್ಟು ಸ್ವತಂತ್ರಸರಕಾರಿ ಸಂಸ್ಥೆಗಳಿವೆ. ಇಂತಹ ಪ್ರಮುಖ ನಿಯಂತ್ರಕ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)ಯು ಅಧಿಕಾರವಿಲ್ಲದೆ ಶಕ್ತಿಹೀನವಾಗಿದೆ. ಈ ಸಂಸ್ಥೆಯು ಕೇವಲ ನಿಯಮಗಳನ್ನು ರೂಪಿಸಲಷ್ಟೇ ಅವಕಾಶವಿದ್ದು, ಜಾರಿಗೊಳಿಸುವ ಅಧಿಕಾರವನ್ನು ಹೊಂದಿಲ್ಲದಿರುವುದೇ ಇದಕ್ಕೆ ಕಾರಣ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‍ಎಸ್‍ಬಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ಗಳು ನಗರದ ಆಗುಹೋಗುಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಿದ್ದು, ಅದೇ ರೀತಿ ಕೆಎಸ್‍ಪಿಸಿಬಿ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ)ಯ ಕಾರ್ಯಚಟುವಟಿಕೆಯ ಮೇಲೂ ನಿಯಂತ್ರಣ ಸಾಧಿಸುತ್ತವೆ.

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸಯನ್ಸ್ ನ ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ `ಕೆಎಸ್‍ಪಿಸಿಬಿಯು ಸ್ವಂತದಲ್ಲಿ ಅಧಿಕಾರವನ್ನು ಹೊಂದಿದ್ದು, ಆದರೆ ಪ್ರಸ್ತುತ ಸರಕಾರಗಳ ಆಡಳಿತ ವ್ಯವಸ್ಥೆಗಳಿಂದಾಗಿ ಅದು ತನ್ನ ಅಧಿಕಾರ ಕಳೆದುಕೊಂಡಂತಾಗಿದೆ. ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಎಂಟಿಸಿಗಳ ಆಯುಕ್ತರು ಅಥವಾ ಅಧ್ಯಕ್ಷರುಗಳ ಸಮಿತಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಅದೇ ನಿರ್ದೇಶನಗಳನ್ನು ಪಾಲಿಸುವಂತೆ ಕೆಎಸ್‍ಪಿಸಿಬಿಗೆ ಒತ್ತಡ ಹೇರುತ್ತವೆ’ ಎನ್ನುತ್ತಾರೆ.

ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ) 1974ರ ಪ್ರಕಾರ ಕರ್ನಾಟಕ ಸರಕಾರವು 1974ರ ಸೆಪ್ಟೆಂಬರ್ 21ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)ಯನ್ನು ಸ್ಥಾಪಿಸಿತು. ನಂತರದಲ್ಲಿ ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ಬಂದ ಬಳಿಕ ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನೂ ಇದೇ ಸಂಸ್ಥೆಗೆ ನೀಡಲಾಯಿತು.

ಈ ಕಾಯ್ದೆಯಡಿ ವ್ಯಾಖ್ಯಾನಿಸಲಾದ ರಾಜ್ಯ ಮಂಡಳಿಯ ಕಾರ್ಯವು ವಾಯು ಮಾಲಿನ್ಯವನ್ನು ತಡೆಗಟ್ಟುವುದು, ನಿಯಂತ್ರಿಸುವುದು, ಮಾಲಿನ್ಯವನ್ನು ತಗ್ಗಿಸುವುದು, ನಿಯಮಗಳನ್ನು ರೂಪಿಸುವುದು, ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ನಿಯಮಗಳನ್ನು ರೂಪಿಸುವಂತೆ ಸಲಹೆ ನೀಡುವುದು, ಮುನ್ನೆಚ್ಚರಿಕೆ ನಿಯಮಗಳನ್ನು ರೂಪಿಸುವುದು, ತನಿಖೆಗಳನ್ನು ಮಾಡುವುದು, ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸುವುದು, ಸಂಗ್ರಹಿಸುವುದು ಮತ್ತು ಪ್ರಚಾರಪಡಿಸುವುದು ಈ ಸಂಸ್ಥೆಯ ಜವಾಬ್ದಾರಿಯಾಗಿದೆ.

ಈ ಕಾಯಿದೆಯ ಅನ್ವಯ ಕೆಎಸ್‍ಪಿಸಿಬಿಗೆ ಕೆಲವು ಅಧಿಕಾರಗಳಿವೆ. ವಾಯುಮಾಲಿನ್ಯ ನಿಯಂತ್ರಣ ಪ್ರದೇಶಗಳನ್ನು ಈ ಸಂಸ್ಥೆಯು ವಿಸ್ತರಣೆ ಅಥವಾ ಕಡಿತಗೊಳಿಸುವ ಮೂಲಕ ಬದಲಾಯಿಸಬಹುದು. ಕಾಯಿದೆಯಲ್ಲಿ ರಾಜ್ಯ ಸರಕಾರವು ಕೆಎಸ್‍ಪಿಸಿಬಿಯ ಜೊತೆಗೆ ಸಮಾಲೋಚಿಸಿದ ಬಳಿಕ ಯಾವುದೇ ವಾಯುಮಾಲಿನ್ಯ ನಿಯಂತ್ರಣ ಪ್ರದೇಶದಲ್ಲಿ ಯಾವುದೇ ವಸ್ತುಗಳನ್ನು ಸುಡುವುದರಿಂದ (ಇಂಧನವಲ್ಲದವು) ವಾಯುಮಾಲಿನ್ಯ ಉಂಟಾಗಬಹುದು ಅಥವಾ ಉಂಟಾಗದೇ ಇದ್ದರೂ, ಅಂತಹ ವಸ್ತುಗಳನ್ನು ಸುಡುವುದನ್ನು ಅಂತಹ ಪ್ರದೇಶಗಳಲ್ಲಿ ನಿಷೇಧಿಸಬಹುದಾಗಿದೆ. ಇದರ ಜೊತೆಗೆ ಕೆಎಸ್‍ಪಿಸಿಬಿಯು ಯಾವುದೇ ರೀತಿಯ ಹೊಗೆ ಹೊರಸೂಸುವ ಕೈಗಾರಿಕೆಗಳು ಅಥವಾ ಸಾರಿಗೆ ಕ್ಷೇತ್ರಗಳಿಗೆ ಮಾಲಿನ್ಯ ನಿಯಂತ್ರಿಸುವ ಸೂಚನೆಗಳನ್ನು ನೀಡಬಹುದಾಗಿದೆ.

ಕೆಎಸ್‍ಪಿಸಿಬಿಯು ಬೇರೆಬೇರೆ ಸರಕಾರಿ ಸಂಸ್ಥೆಗಳಿಗೆ ಅನೇಕ ಆದೇಶಗಳನ್ನು ನೀಡುತ್ತಿರುತ್ತದೆ.. ಬಿಎಂಟಿಸಿಯಲ್ಲಿರುವ ಎಲ್ಲಾ ಬಿಎಸ್3 ವಾಹನಗಳನ್ನು ತೆಗೆದುಹಾಕುವಂತೆ ಹಾಗೂ ಬಿಎಸ್4 ಗಳ ಬಳಕೆಗೆ ಈ ಹಿಂದೆ ನಿರ್ದೇಶನ ನೀಡಿತ್ತು. ಇನ್ನೊಂದೆಡೆ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಭಾಗಕ್ಕೂ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆಯೂ ಆದೇಶ ನೀಡಿದೆ. ಹೀಗೆ ಹಲವು ಸಂಸ್ಥೆಗಳಿಗೂ ಅನೇಕ ಬಾರಿ ಹಲವು ವಿಧ ನಿರ್ದೇಶನಗಳನ್ನು ಈ ಸಂಸ್ಥೆ ನೀಡುತ್ತಲೇ ಬಂದಿದ್ದರೂ, ಫಲಿತಾಂಶ ಮಾತ್ರ ಏನು ಎಂಬುದು ಇದುವರೆಗೂ ಸ್ಪಷ್ಟಗೊಂಡಿಲ್ಲ. ತ್ಯಾಜ್ಯ ಸುಡುವಿಕೆ ಈಗಲೂ ನಗರದಲ್ಲಿ ಅವ್ಯಾಹತವಾಗಿ ಸಾಗಿದೆ. ಅದೇ ರೀತಿ ಬಿಎಂಟಿಸಿ ತನ್ನ ಹಳೆಯ ಬಸ್ಸುಗಳನ್ನೇ ರಸ್ತೆ ಮೇಲೆ ಓಡಿಸುತ್ತಿದೆ.

ಕೆಎಸ್‍ಪಿಸಿಬಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಹೆಚ್. ಲೋಕೇಶ್ವರಿ ಅವರು ಹೇಳುವಂತೆ `ಯಾವುದೇ ಇತರ ಇಲಾಖೆಗಳು ಕೆಎಸ್‍ಪಿಸಿಬಿಯ ನಿರ್ದೇಶನಗಳನ್ನು ಪಾಲಿಸುವುದಿಲ್ಲ. ಸೂಚನೆಗಳನ್ನು ನೀಡಿದ ನಂತರ ಅವುಗಳನ್ನು ಪಾಲಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದಾಗಿ ಇಲಾಖೆಗಳ ಕಾರ್ಯವೈಖರಿಯನ್ನು ಪತ್ತೆಹಚ್ಚುವುದೂ ನಮಗೆ ಸಾಧ್ಯವಾಗುವುದಿಲ್ಲ’ ಎನ್ನುತ್ತಾರವರು.

“ನಾವು ಬಿಎಂಟಿಸಿಗೆ ಸಿಎನ್‍ಜಿ ಬಸ್ಸುಗಳನ್ನು ಓಡಿಸುವಂತೆ ಸೂಚನೆ ನೀಡಿದ್ದೆವು, ಆದರೆ ಅವರು ವಿದ್ಯುತ್ ಚಾಲಿತ ಬಸ್ಸುಗಳ ಬಗ್ಗೆಯೇ ಆಸಕ್ತರಾಗಿದ್ದಾರೆ. ಆದರೂ ವಿದ್ಯುತ್ ಚಾಲಿತ ಬಸ್ಸುಗಳೂ ಇದುವರೆಗೆ ಬಂದಿಲ್ಲ. ಕಸ ಸುಡುವುದನ್ನು ನಿಲ್ಲಿಸುವಂತೆ ಬಿಬಿಎಂಪಿಗೆ ನಾವು ಹೇಳಿದ್ದೇವೆ, ಆದರೆ ನಾವೇನು ಮಾಡೋಣ; ಎರಡೂ ಇಲಾಖೆಗಳು ನಮ್ಮ ಮಾತನ್ನು ಕೇಳುವುದಿಲ್ಲ’ ಎಂದಿದ್ದಾರೆ ಅವರು.

ಕೆಎಸ್‍ಪಿಸಿಬಿಯು ತನ್ನನ್ನು ಅಸಹಾಯಕವಾಗಿಯೋ, ಮುಗ್ದಮಗುವಿನಂತೆಯೋ ತೋರ್ಪಡಿಸಿಕೊಂಡರೆ ಆ ಬಗ್ಗೆ ತಜ್ಞರು ಬೇರೆಯೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಹಾಗೂ ಕೆಎಸ್‍ಪಿಸಿಬಿಯ ಮಾಜಿ ಅಧ್ಯಕ್ಷರೂ ಆಗಿರುವ ಡಾ. ಯಲ್ಲಪ್ಪ ರೆಡ್ಡಿಯವರ ಪ್ರಕಾರ `ಕೆಎಸ್‍ಪಿಸಿಬಿಗೆ ಅಧಿಕಾರವಿದೆ, ಮಾತ್ರವಲ್ಲದೆ ತನ್ನ ಮಾತನ್ನು ಕೇಳದ ಇಲಾಖೆಯ ಮುಖ್ಯಸ್ಥನ ವಿರುದ್ಧವೇ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ’ ಎನ್ನುತ್ತಾರೆ.

ವಾಯು (ನಿಯಂತ್ರಣ & ಮಾಲಿನ್ಯ ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 21, 22ರನ್ವಯ ನೀಡಲಾದ ನಿಬಂಧನೆಗಳನ್ನು ಅಥವಾ ಸೆಕ್ಷನ್ 31ಎ ಯಂತೆ ನೀಡಲಾದ ನಿರ್ದೇಶನಗಳನ್ನು ಯಾರಾದರೂ ಪೂರ್ಣಗೊಳಿಸಲು ವಿಫಲರಾದರೆ ಆರು ತಿಂಗಳಿಂದ ಒಂದು ವರ್ಷ ಮತ್ತು ಆರು ತಿಂಗಳುಗಳಿಗೆ ಕಡಿಮೆಯಿಲ್ಲದಂತೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಅಥವಾ ಮುಂದುವರಿದು 6 ವರ್ಷಗಳವರೆಗೂ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಬಹುದಾಗಿದೆ. ಜನರ ಮೇಲಷ್ಟೇ ಈ ಶಿಕ್ಷೆ ವಿಧಿಸುವ ಅಧಿಕಾರವನ್ನು ಕೆಎಸ್‍ಪಿಸಿಬಿಗೆ ನೀಡಲಾಗಿಲ್ಲ; ಬದಲಾಗಿ ತಮ್ಮ ಆದೇಶ, ಸೂಚನೆ, ನಿಯಮಗಳನ್ನು ಪಾಲಿಸದೇ ಇರುವ ಯಾವುದೇ ಸರಕಾರಿ ಸಂಸ್ಥೆ, ಇಲಾಖೆ ಅಥವಾ ಆ ಇಲಾಖೆ ಮುಖ್ಯ ಅಧಿಕಾರಿಯನ್ನೂ ಅಪರಾಧಿ ಎಂದು ಪರಿಗಣಿಸಿ, ಕಾನೂನು ಕ್ರಮಕ್ಕೆ ಹೊಣೆಗಾರರನ್ನಾಗಿಸಬಹುದು.

ಆದರೆ ಕೆಎಸ್‍ಪಿಸಿಬಿಯ ಅಧ್ಯಕ್ಷರು ಯಾವುದೇ ರೀತಿಯಲ್ಲೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಿಲ್ಲ ಮತ್ತು ದಂಡವನ್ನೂ ವಿಧಿಸುವ, ಶಿಕ್ಷೆ ನೀಡುವ ಕ್ರಮಕ್ಕೆ ಮುಂದಾಗುವುದಿಲ್ಲ. ಕಾರಣ, ಕೆಎಸ್‍ಪಿಸಿಬಿಯು ತನ್ನದೇ ಸ್ವಯಂ ನಿಯಂತ್ರಣ ಹೊಂದಿದೆಯಾದರೂ, ಅದರ ಅಧ್ಯಕ್ಷರಾದವರು ಸರಕಾರದ ವ್ಯವಸ್ಥೆಯ ಒಳಗೆ ಇರುವುದರಿಂದ ಏನೂ ಮಾಡಲಾಗುವುದಿಲ್ಲ. ಇಂದು ಕೆಎಸ್‍ಪಿಸಿಬಿಯ ಅಧ್ಯಕ್ಷನಾಗಿದ್ದವರೇ ನಾಳೆ ಬಿಬಿಎಂಪಿಯ ಅಧ್ಯಕ್ಷರಾಗಬಹುದು. ಇಂದು ಬಿಬಿಎಂಪಿಯ ಮುಖ್ಯಸ್ಥರಾಗಿದ್ದವರೇ ನಾಳೆ ಕೆಎಸ್‍ಪಿಸಿಬಿಯ ಆಡಳಿತ ಚುಕ್ಕಾಣಿ ಹಿಡಿಯಬಹುದು. ಹೀಗಾಗಿ ಅವರು ಪರಸ್ಪರ ಒಬ್ಬರನ್ನೊಬ್ಬರು ಸಂತೋಷದಿಂದ ಇರಿಸುತ್ತಾರೆ. ಜನರು ತೊಂದರೆಗೊಳಗಾಗುತ್ತಲೇ ಇದ್ದರೂ ಆ ಬಗ್ಗೆ ಯಾರೂ ಚಿಂತಿಸುವುದಿಲ್ಲ’ ಎನ್ನುತ್ತಾರೆ ಡಾ. ಯಲ್ಲಪ್ಪ ರೆಡ್ಡಿ.

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101reporters.com ನ ಸದಸ್ಯರು)

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು