ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೆಶ್ವರದ ಬಡಾವಣೆಗಳಲ್ಲಿರುವ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸಲಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋಶ್ ಹೇಳಿದ್ದಾರೆ.
ಬಿಝ್ ಆರ್ಬಿಟ್ ಸಂಸ್ಥೆ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಹಿಂದೆ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣ ಬಳಸಿ ಗುರುತಿಸಲಾಗುತ್ತಿದೆ.
ಒಂದು ವಾರ ಮಾತ್ರ ಬಣ್ಣದ ಗುರುತು ಇರುತ್ತಿತ್ತು. ಮೈಕ್ರೋ ಚಿಪ್ ತಂತ್ರಾನದಿಂದ ನಾಯಿಯ ವಾಸಸ್ಥಳ, ಲಸಿಕೆ, ಸಂತಾನಹರಣ ಶಸಚಿಕಿತ್ಸೆ ನೀಡಿದ ದಿನಾಂಕ ಸೇರಿ ಇತರೆ ಅಂಶಗಳನ್ನು ಕಲೆ ಹಾಕಿ ಮಾಹಿತಿ ನಮೂದಿಸಲು ಸಹಾಯವಾಗಲಿದೆ. ಜತೆಗೆ, ಪದೇಪದೆ ಲಸಿಕೆ ಹಾಕುವುದು ತಪ್ಪಲಿದೆ. ಇದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿದೆ. ಹಲವು ಸ್ಥಳಿಯ ಸಂಸ್ಥೆಗಳು ಈಗಾಗಲೇ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಿವೆ ಎಂದರು. ಪ್ರಾಣಿಗಳ ಚರ್ಮದ ಕೆಳಗೆ ಚುಚ್ಚುಮದ್ದು ಮೂಲಕ ಇರಿಸಲಾಗುವುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಿನ ಸಂಖ್ಯೆಯಾಗಿದೆ ಎಂದು ವಿವರಿಸಿದರು.