News Karnataka Kannada
Sunday, April 14 2024
Cricket
ಬೆಂಗಳೂರು

ಬೆಂಗಳೂರಿನ ಕಾನೂನು, ಸುವ್ಯವಸ್ಥೆಗೆ ಕಂಟಕವಾಗಿರುವ ಆಟೊರಿಕ್ಷಾ ಸಂಘಟನೆಗಳ ರಂಪಾಟ

Auto-rickshaw organisations disrupt law and order situation in Bengaluru
Photo Credit : News Kannada

ಬೆಂಗಳೂರು: ಕಾರ್ಮಿಕ ಸಂಘಟನೆಗಳ ಜೊತೆ ಒಡನಾಟ ಹೊಂದಿರುವ ಆಟೊರಿಕ್ಷಾ ಚಾಲಕರಿಂದಾಗಿ ಇತ್ತೀಚೆಗೆ ಬೆಂಗಳೂರು ಮಹಾನಗರವು ಲಜ್ಜಾಹೀನ ಮತ್ತು ಆತಂಕಕಾರಿ ಘಟನಾವಳಿಗಳಿಗೆ ಸಾಕ್ಷಿಯಾಯಿತು. ನಗರದ ಬೀದಿಗಳಲ್ಲಿ ಅರಾಜಕತೆ ಸೃಷ್ಟಿಸಿದ ಈ ಚಾಲಕರು, ರ‍್ಯಾಪಿಡೊ ಕಚೇರಿಯ ಮೇಲೆ ಹಿಂಸಾತ್ಮಕ ದಾಳಿ ಆಯೋಜಿಸುವ ಮೂಲಕ ಕಾನೂನು ಪಾಲನೆಯ ಎಲ್ಲಾ ಗಡಿಗಳನ್ನು ಉಲ್ಲಂಘಿಸಿದರಲ್ಲದೆ, ಕೆಲ ಆಟೊರಿಕ್ಷಾಗಳನ್ನು ಧ್ವಂಸಗೊಳಿಸಿದರು.

ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ, ತಮ್ಮ ಇಂತಹ ಅಪರಾಧ ಪ್ರವೃತ್ತಿಯನ್ನು ಎಲ್ಲರಿಗೂ ತೋರಿಸಲು ಈ ವಿನಾಶಕಾರಿ ಕೃತ್ಯಗಳನ್ನು ನಿರ್ಲಜ್ಜತನದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸಿದ್ದಾರೆ. ಈ ಬಗೆಯ ಭಂಡತನದ ವರ್ತನೆಯು ಹಗಲು ಹೊತ್ತಿನಲ್ಲಿಯೇ ಮಾರುಕಟ್ಟೆಯ ಹೃದಯಭಾಗದಲ್ಲಿ ಎಲ್ಲರ ಎದುರಿನಲ್ಲಿ ನಡೆಯಿತು.

ತಮ್ಮ ಆಟೊರಿಕ್ಷಾಗಳಲ್ಲಿ ಸೀಟ್ ಬೆಲ್ಟ್ ಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ರ‍್ಯಾಪಿಡೊ (Rapido) ಜಾರಿಗೊಳಿಸಿರುವ ಉದಾತ್ತ ಉಪಕ್ರಮವೇ, ಆಟೊ ಚಾಲಕರ ಹಿಂಸಾಚಾರದ ಈ ಅಸಹ್ಯಕರ ಪ್ರದರ್ಶನಕ್ಕೆ ಪುಷ್ಟಿ ನೀಡಿದೆ. ಚಾಲಕರು ಮತ್ತು ಪ್ರಯಾಣಿಕರ ಜೀವ ರಕ್ಷಿಸುವ ಈ ಸ್ವಾಗತಾರ್ಹ ಪ್ರಯತ್ನವನ್ನು ಶ್ಲಾಘಿಸುವ ಮತ್ತು ಬೆಂಬಲಿಸುವ ಬದಲು, ಆಟೊರಿಕ್ಷಾ ಚಾಲಕರ ಕಾರ್ಮಿಕ ಸಂಘಟನೆಗಳು ಆಘಾತಕಾರಿ ನಡೆಯಾಗಿರುವ ಕೋಪ ಮತ್ತು ಹಗೆತನದಿಂದ ಪ್ರತಿಕ್ರಿಯೆ ದಾಖಲಿಸಿವೆ.

ಚಾಲಕರು ತಮ್ಮ ಹಳೆಯ ವಿಧಾನಗಳಿಗೆ ಅಂಟಿಕೊಳ್ಳಲು ಮೊಂಡುತನ ತೋರಿಸುತ್ತಿದ್ದಾರೆ. ನಗರದ ನಿವಾಸಿಗಳ ಬದಲಾಗುತ್ತಿರುವ ಬೇಡಿಕೆಗಳನ್ನು ನಿರ್ಲಕ್ಷಿಸಿರುವ ಆಟೊರಿಕ್ಷಾ ಚಾಲಕರು ಯಾವುದೇ ಬದಲಾವಣೆ ಅಥವಾ ಪರ್ಯಾಯ ಸೌಲಭ್ಯವನ್ನು ತಮ್ಮ ಜೀವನೋಪಾಯಕ್ಕೆ ಎದುರಾಗಿರುವ ಬೆದರಿಕೆಯನ್ನಾಗಿ ನೋಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಬೈಕ್-ಟ್ಯಾಕ್ಸಿಗಳ ಜನಪ್ರಿಯತೆಯ ಬಗ್ಗೆ ಆಟೊರಿಕ್ಷಾ ಸಂಘಟನೆಗಳು ಬಹಳ ಹಿಂದಿನಿಂದಲೂ ಅಸಮಾಧಾನ ಹೊಂದಿವೆ. ಮಾರುಕಟ್ಟೆಯಲ್ಲಿನ ತಮ್ಮ ಪಾಲನ್ನು ಕಳೆದುಕೊಳ್ಳುವ ಅನಗತ್ಯ ಭೀತಿ ಆಟೊರಿಕ್ಷಾ ಚಾಲಕರನ್ನು ಕಾಡುತ್ತಿದೆ. ಆಟೊರಿಕ್ಷಾ ಚಾಲಕರ ಸಂಘಟನೆಗಳು ನಿರಂತರವಾಗಿ ಭಂಡತನ ಮತ್ತು ಕಾನೂನು – ಸುವ್ಯವಸ್ಥೆ ಪಾಲನೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಪ್ರದರ್ಶಿಸುತ್ತಿವೆ. ಸಾರ್ವಜನಿಕರಿಗೆ ನಿಯಂತ್ರಿತ, ಅನುಕೂಲಕರ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುವ ಪರ್ಯಾಯ ಸಾರಿಗೆ ವಿಧಾನಗಳನ್ನು ಪ್ರಸ್ತುತಪಡಿಸಿದರೂ, ಅವರು ಯಾವುದೇ ರೀತಿಯ ಸ್ಪರ್ಧೆಯನ್ನು ಮೊಂಡುತನದಿಂದ ವಿರೋಧಿಸುತ್ತ ಬಂದಿದ್ದಾರೆ. ನಗರದ ಪ್ರಯಾಣಿಕರ ಯೋಗಕ್ಷೇಮ ಮತ್ತು ಅನುಕೂಲತೆಯ ಬದಲಿಗೆ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುವ ಆಟೊರಿಕ್ಷಾ ಚಾಲಕರ ಭಂಡತನದ ವರ್ತನೆಯು ತೀವ್ರ ನಿರಾಶೆಯನ್ನುಂಟು ಮಾಡುತ್ತದೆ.

ಆಟೊ ಚಾಲಕನೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ ನಂತರ, ಪ್ರಯಾಣಿಕ ರೆಡ್ಡಿ ಪ್ರಸಾದ್ ಅವರು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ. ರ‍್ಯಾಪಿಡೊದ ಆ್ಯಪ್ ನಲ್ಲಿ ಕಾರ್ಯನಿರ್ವಹಿಸುವ ಆಟೊ ಚಾಲಕರ ಸಹಯೋಗದಲ್ಲಿ ಕಂಪನಿಯು ರಸ್ತೆ ಸುರಕ್ಷತೆಯ ಕುರಿತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮ ಜಾರಿಗೊಳಿಸುತ್ತಿದೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆ ಉಪಕ್ರಮದ ಭಾಗವಾಗಿ, ನಾವು ಸೀಟ್ ಬೆಲ್ಟ್ಗಳನ್ನು ವಿತರಿಸುತ್ತಿದ್ದೇವೆ, ಆಟೊಗಳಿಗೆ ಮಳೆಯಿಂದ ರಕ್ಷಣೆ ನೀಡುವ ಪರದೆಗಳು ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳನ್ನು ವಿತರಿಸುತ್ತಿದ್ದೇವೆ. ಈ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ವೇಳೆ ಬೆಂಗಳೂರು ಸಾರಥಿ ಸೇನೆ ಆಟೊ ಸಂಘಟನೆಯ ಕೆಲವು ಸದಸ್ಯರು ಪ್ರಚಾರ ಕಾರ್ಯಕ್ರಮದ ಮಧ್ಯೆ ಬಲವಂತವಾಗಿ ಪ್ರವೇಶಿಸಿ ಕಂಪನಿಯ ಉದ್ಯೋಗಿಗಳಿಗೆ ಬೆದರಿಕೆ ಹಾಕಿದ್ದಾರೆ. ನೌಕರರನ್ನು ಥಳಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಘಟನೆ ನಂತರ ಆಟೊ ಸಂಘಟನೆಯ ಗುಂಪು ನಮ್ಮ ನೌಕರರ ಬಳಿ ಇದ್ದ ಸೀಟ್ ಬೆಲ್ಟ್ ಗಳು, ಆಟೊ ಸೈಡ್ ಕರ್ಟನ್ ಗಳು ಮತ್ತು ಚಾರ್ಜರ್ಗಳನ್ನು ಕದ್ದುಕೊಂಡು ಹೋಗಿದೆ.

ಆಶ್ಚರ್ಯಕರ ಸಂಗತಿ ಏನೆಂದರೆ, ದಾಳಿಕೋರರು ಆಟೊರಿಕ್ಷಾ ಧ್ವಂಸಗೊಳಿಸಿದರಷ್ಟೇ ಅಲ್ಲ, ಸೈಡ್ ಕರ್ಟನ್ ಮತ್ತು ಸೀಟ್ ಬೆಲ್ಟ್ ಗಳನ್ನು ಲೂಟಿ ಮಾಡಿದ್ದಾರೆ. ಅವರ ಇಂತಹ ವರ್ತನೆಗಳ ಒಟ್ಟಾರೆ ಪರಿಣಾಮಗಳನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಕೃತ್ಯಗಳನ್ನು ಭಂಡತನದಿಂದ ಪ್ರದರ್ಶಿಸಿದ್ದಾರೆ. ಈ ಮೂಲಕ ಪೊಲೀಸರ ಅಧಿಕಾರ ಮತ್ತು ಕಾನೂನಿನ ನಿಯಮಗಳಿಗೆ ನಿರ್ಲಜ್ಜತನದಿಂದ ಸವಾಲು ಹಾಕಿದ್ದಾರೆ.

ಈ ಘಟನೆಯು ಬೆಂಗಳೂರಿನಲ್ಲಿ ಆಟೊರಿಕ್ಷಾ ಚಾಲಕರು ಕಾನೂನನ್ನು ಕೈಗೆತ್ತಿಕೊಂಡ ಮತ್ತೊಂದು ಉದಾಹರಣೆಯಾಗಿದೆ. ಘಟನೆಯನ್ನು ಟೆಲಿವಿಷನ್ ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡಲಾಗಿದ್ದರೂ ಮತ್ತು ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೂ, ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿರುವುದಕ್ಕೆ ಯಾವುದೇ ಸಮರ್ಥನೀಯ ವಿವರಣೆಯೂ ಇಲ್ಲ. ದಾಳಿಯ ಹೊಣೆಗಾರರನ್ನು ಬಂಧಿಸುವಲ್ಲಿ 24 ಗಂಟೆಗಳ ವಿಳಂಬವು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾನೂನು ಜಾರಿ ಸಂಸ್ಥೆಗಳ ಬದ್ಧತೆಯ ಬಗ್ಗೆಯೇ ಗಂಭೀರ ಸ್ವರೂಪದ ಅನುಮಾನಗಳನ್ನು ಮೂಡಿಸುತ್ತದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆಟೊರಿಕ್ಷಾ ಚಾಲಕರ ದಾಳಿಯು, ಅವರ ಅಕ್ರಮ ಮತ್ತು ಬೆದರಿಕೆಯ ಅಪಾಯಕಾರಿ ಪ್ರವೃತ್ತಿಯನ್ನು ಸೂಚಿಸುತ್ತದೆ. ಸ್ಪರ್ಧೆಯ ಭಯ ಮತ್ತು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ಅಚಲವಾದ ಬಯಕೆಯಿಂದ ಪ್ರೇರಣೆಗೊಂಡಿರುವ ಈ ಚಾಲಕರು ನಗರದ ಸುರಕ್ಷತೆ ಮತ್ತು ಪ್ರಗತಿಗೆ ತೀವ್ರ ಸ್ವರೂಪದ ಬೆದರಿಕೆ ಒಡ್ಡುತ್ತಾರೆ.

ಇಂತಹ ಹಿಂಸಾಚಾರದ ಕೃತ್ಯಗಳಿಗೆ ಅಧಿಕಾರಿಗಳು ತ್ವರಿತವಾಗಿ ಮತ್ತು ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸುವುದು ಅಗತ್ಯವಾಗಿದೆ. ನ್ಯಾಯದ ಸಂಪೂರ್ಣ ಸಾಮರ್ಥ್ಯವನ್ನು ಜಾರಿಗೊಳಿಸಲು ತಮ್ಮಿಂದ ಸಾಧ್ಯವಿದೆ ಎಂಬುದನ್ನು ಅವರು ಖಚಿತಪಡಿಸಬೇಕಾಗಿದೆ. ಕೆಲವು ಅಶಿಸ್ತಿನ ವ್ಯಕ್ತಿಗಳ ಸಂಕುಚಿತ ಹಿತಾಸಕ್ತಿಗಳಿಗಿಂತ, ತಮ್ಮ ಯೋಗಕ್ಷೇಮದ ಖಾತರಿ ನೀಡುವ ಸುರಕ್ಷಿತ ಮತ್ತು ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿಕೊಳ್ಳಲು ಬೆಂಗಳೂರಿನ ಜನರು ಸಂಪೂರ್ಣ ಅರ್ಹರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು