Bengaluru 23°C
Ad

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹6.29 ಕೋಟಿ ಮೌಲ್ಯದ 9 ಕೆ.ಜಿ ಚಿನ್ನ ವಶಕ್ಕೆ

Gold

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹6.29 ಕೋಟಿ ಮೌಲ್ಯದ 9 ಕೆ.ಜಿಗೂ ಅಧಿಕ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಡಿಆರ್‌ಐ ಅಧಿಕಾರಿಗಳ ಪ್ರಕಾರ ಮಂಗಳವಾರ ಬೆಳಿಗ್ಗೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಮೊದಲ ಪ್ರಕರಣದಲ್ಲಿ, ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಥಾಯ್ ಏರ್‌ವೇಸ್ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಹ್ಯಾಂಡ್ ಬ್ಯಾಗ್‌ನಲ್ಲಿ ಗಟ್ಟಿ ಹಾಗೂ ಕಚ್ಚಾ ರೂಪದಲ್ಲಿ 6.8 ಕೆ.ಜಿ ಚಿನ್ನ ಪತ್ತೆಯಾಗಿತ್ತು.

ಬಿಟ್ಟು ಹೋಗಿದ್ದ ಹ್ಯಾಂಡ್‌ಬ್ಯಾಗ್‌ನಲ್ಲಿ ದೊರೆತ ದಾಖಲೆಯ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ. ಬಳಿಕ ಇಬ್ಬರನ್ನೂ ಬಂಧಿಸಲಾಗಿದ್ದು, ₹4.77 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಇದಾದ ಕೆಲವೇ ತಾಸಿನೊಳಗೆ ನಡೆದ ಮತ್ತೊಂದು ಪ್ರಕರಣದಲ್ಲಿ ದುಬೈಯಿಂದ ಬಂದಿಳಿದಿದ್ದ ಎಮಿರೇಟ್ಸ್ ವಿಮಾನದಲ್ಲಿ ತಪಾಸಣೆ ನಡೆಸಿದಾಗ ಗಟ್ಟಿ ರೂಪದಲ್ಲಿ 2.18 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಮೌಲ್ಯ ₹1.52 ಕೋಟಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad