ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರದಿಂದ ಮಳೆ ಸುರಿಯುತ್ತಲಿದ್ದು, ಈ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದೆ. ಅಕ್ಟೋಬರ್ 3 ರಂದು ಬೆಂಗಳೂರು ಗರಿಷ್ಠ ಪ್ರಮಾಣದ ಮಳೆ ದಾಖಲಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ 1997ರ ನಂತರ ದಾಖಲಾದ ಗರಿಷ್ಠ ಮಳೆ ಪ್ರಮಾಣ ಇದಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 3ರಂದು ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 63.8 ಮಿ.ಮೀ. ಮಳೆಯಾಗಿದೆ. ನಾಗರಭಾವಿ ಪ್ರದೇಶದಲ್ಲಿ ಅತಿ ಹೆಚ್ಚು 117 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.
ಆರ್. ಆರ್. ನಗರ ವಲಯದಲ್ಲಿನ ಜ್ಞಾನಭಾರತಿ ವಾರ್ಡ್ನಲ್ಲಿ 115 ಮಿ. ಮೀ ಮಳೆ ದಾಖಲಾಗಿದೆ. ರಾಜರಾಜೇಶ್ವರಿ ನಗರ, ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿನ ಹಲವು ವಾರ್ಡ್ಗಳಲ್ಲಿ ಭಾನುವಾರ ತಡರಾತ್ರಿ 100 ಮಿ.ಮೀಗೂ ಹೆಚ್ಚಿನ ಮಳೆಯಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
1997ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 179 ಮೀ.ಮೀ. ಮಳೆಯಾಗಿತ್ತು. ಆನಂತರ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.