ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ.
ಮಂಗಳವಾರ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿ ಮಾಡಿದ ಮುತ್ತಯ್ಯ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಚಿವರು, ಬದನಕುಪ್ಪೆಯಲ್ಲಿ ಮುರಳೀಧರನ್ ಅವರು ‘ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್’ ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು.
ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು. ಇದಕ್ಕಾಗಿ ಅವರಿಗೆ ಈಗಾಗಲೇ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು.
ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಕುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಅವರು ನುಡಿದರು.
ಮುಂಬರುವ ದಿನಗಳಲ್ಲಿ ಮುತ್ತಯ್ಯ ಧಾರವಾಡದಲ್ಲಿ ಕೂಡ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಇದ್ದರು.