ಬೆಂಗಳೂರು: ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಇಂದಿನಿಂದ ಪುನರಾರಂಭಗೊಳ್ಳಲಿವೆ.
ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿರಬೇಕು. ಕಾಲೇಜಿನ ಪ್ರವೇಶದ್ವಾರದ ಬಳಿಯೇ ವಿದ್ಯಾರ್ಥಿಗಳ ಲಸಿಕಾ ಪ್ರಮಾಣಪತ್ರ ಪರಿಶೀಲಿಸಿ ಪ್ರವೇಶ ನೀಡಲಾಗುತ್ತದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜಿಗೆ ಬರುವ 72 ಗಂಟೆಯ ಮೊದಲು ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿರಬೇಕು.
ಈ ಬಗ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಎಲ್ಲ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜುಗಳು ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.
ಈ ಬಗ್ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ’ ಎಂದಿದ್ದಾರೆ.
ತರಗತಿಗಳಿಗೆ ಹಾಜರಾಗುವ ಅಥವಾ ಆನ್ಲೈನ್ ಮೂಲಕ ಕಲಿಯುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಆದರೆ, ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದಿದ್ದಾರೆ.