ಬೆಂಗಳೂರು: ಭ್ರಷ್ಟರಿಗೆ ಶಿಕ್ಷೆಯ ಭಯವೇ ಇಲ್ಲದಂತಾಗಿದೆ. ಹೀಗಾಗಿ ಅವರು ಅವ್ಯಾಹತವಾಗಿ ಹಗರಣಗಳನ್ನು ಮಾಡುತ್ತಿದ್ದಾರೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಎಂದು ಬೇಸರ ವ್ಯಕ್ತಪಡಿಸಿದರು.‘
ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಾಗೂ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ (ಎಐಯುವೈಎಸ್ಸಿ) ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ‘ಕೆಪಿಎಸ್ಸಿ ಸ್ವಚ್ಛಗೊಳಿಸಿ; ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ’ ಕುರಿತ ವೆಬಿನಾರ್ನಲ್ಲಿ ಭಾನುವಾರ ಮಾತನಾಡಿದರು.
ಸ್ವಾರ್ಥ ಮತ್ತು ದುರಾಸೆಯೂ ಹಗರಣಕ್ಕೆ ಕಾರಣ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬರುವವರಿಗೆ ಭವ್ಯ ಸ್ವಾಗತ ನೀಡುವ ಪರಿಪಾಠ ಹೆಚ್ಚುತ್ತಿರುವುದು ವಿಷಾದನೀಯ. ಜನರ ಈ ಮನೋಧೋರಣೆ ಬದಲಾಗಬೇಕು ಎಂದರು.
ಈಗಿನ ಕೆಪಿಎಸ್ಸಿ ಅಧ್ಯಕ್ಷರ ನೇಮಕವು ಕಾನೂನುಬಾಹಿರ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟರಿಗೆ ಮಣೆ ಹಾಕುತ್ತಿರುವುದಕ್ಕೆ ಇದೊಂದು ನಿದರ್ಶನ ಎಂದರು.