ಬೆಂಗಳೂರು: ನಗರದ ಟ್ರಿನಿಟಿ ಸರ್ಕಲ್ ಬಳಿಯ ಅಜಂತಾ ಹೋಟೆಲ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಎರಡು ಮಹಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ 10:30ರ ಸುಮಾರಿಗೆ ದಟ್ಟ ಹೊಗೆ ಆವರಿಸಿದ್ದು, ಉಸಿರಾಡಲಾಗದೇ ಹೋಟೆಲ್ ಸಿಬ್ಬಂದಿ ಎರಡನೇ ಮಹಡಿಯಿಂದ ಜಿಗಿದಿದ್ದಾರೆ. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಅಪಾಯದಲ್ಲಿ ಸಿಲುಕಿದ್ದ ಐವರು ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್, ಅಭಿಷೇಕ್, ರಾಚಪ್ಪಜಿ ಮತ್ತು ಶೇಖರ್ ಅವರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಪಾರ್ಕಿಂಗ್ ಲಾಟ್ ನಲ್ಲಿದ್ದ ಒಂದು ಆಟೋ, ಒಂದು ಜೀಪ್ ಸುಟ್ಟು ಕರಕಲಾಗಿದೆ.