ಕೆಎಸ್ಆರ್ಟಿಸಿ ಬಸ್ಗಳಲ್ಲಿ ತಮ್ಮಿಷ್ಟದ ಹಾಡುಗಳನ್ನು ಎಲ್ಲರಿಗೂ ಕೇಳಿಸುವಂತೆ ಹಾಕಿ ಕಿರಿಕಿರಿ ಮಾಡುವವರಿಗೆ ಇದು ಬ್ಯಾಡ್ ನ್ಯೂಸ್. ಇನ್ನುಮುಂದೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇಯರ್ ಫೋನ್ ಇಲ್ಲದೆ ಜೋರಾಗಿ ಹಾಡು ಹಾಕಿದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.
ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದು, ಬಸ್ನಲ್ಲಿ ಪ್ರಯಾಣಿಸುವಾಗ ಹಾಡು, ವಾರ್ತೆ ಅಥವಾ ಸಿನಿಮಾವನ್ನು ಜೋರಾಗಿ ಹಾಕುವಂತಿಲ್ಲ ಎಂದಿದ್ದಾರೆ.
ಕೆಲವು ಪ್ರಯಾಣಿಕರಿಗೆ ಈ ರೀತಿ ಮಾಡುವುದರಿಂದ ಕಿರಿಕಿರಿ ಆಗುತ್ತದೆ. ನಿದ್ದೆ ಮಾಡುವವರಿಗೂ ತೊಂದರೆಯಾಗುತ್ತದೆ. ಈ ರೀತಿ ಜೋರಾಗಿ ಹಾಡು ಹಾಕುವುದು ತಡೆಯಬೇಕು ಎಂದು ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಬಸ್ನಲ್ಲಿ ಶಬ್ದ ಮಾಲಿನ್ಯ ಮಾಡಿದರೆ, ಅವರಿಗೆ ಹಾಡು ಹಾಕದಂತೆ ಅದು ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿ ಹೇಳಬೇಕು. ಇದನ್ನು ಕೇಳಿ ಹಾಡುಗಳನ್ನು ಆಫ್ ಮಾಡಿದರೆ ಸರಿ, ಇಲ್ಲವಾದರೆ ಅವರನ್ನು ಬಸ್ನಿಂದ ಕೆಳಗೆ ಇಳಿಯುವಂತೆ ಸೂಚಿಸಬೇಕು. ಅವರು ಕೆಳಗೆ ಇಳಿದ ಮೇಲೆಯೇ ಬಸ್ ಓಡಿಸಬೇಕು. ಇವರಿಗೆ ಪ್ರಯಾಣದರ ಹಿಂದಿರುಗಿಸುವಂತೆಯೂ ಇಲ್ಲ.