News Karnataka Kannada
Wednesday, April 24 2024
Cricket
ಹುಬ್ಬಳ್ಳಿ-ಧಾರವಾಡ

ಬೋರ್ವೇಲ್ ಕೊರೆಸಲು ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ ರೂ. 2 ಕೋಟಿ ಬಿಡುಗಡೆ: ಸಿಎಂ

ಕರ್ನಾಟಕದಲ್ಲಿ ಈ ಸಲ ಬಾರಿ ಪ್ರಮಾಣದ ಬರ ಇದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶಿಸಿದರು.
Photo Credit : News Kannada

ಧಾರವಾಡ :  ಕರ್ನಾಟಕದಲ್ಲಿ ಈ ಸಲ ಬಾರಿ ಪ್ರಮಾಣದ ಬರ ಇದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶಿಸಿದರು.

ಅವರು ಬೆಂಗಳೂರಿನ ಗೃಹ ಕಛೇರಿ ಕೃಷ್ಣ ದಿಂದ ವೀಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅವರು ಮಾತನಾಡಿದರು.

ಕರ್ನಾಟಕದಲ್ಲಿ ಪ್ರಖರವಾದ ಬರಗಾಲ ಪರಿಸ್ಥಿತಿ ಕಾಣುತ್ತಿದೆ. ಮುಂಗಾರು ಮಳೆ ವಿಫಲವಾಗಿ, ರೈತರು ಬೆಳೆದಿದ್ದ ಸುಮಾರು 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಇನ್ನೂ ಮಾರ್ಚ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಎದುರಿಸಬೇಕು. ಮೈಸೂರು ಭಾಗದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ಪೂರ್ವ ಮಳೆ ಬರುವ ಸಾಧ್ಯತೆ ಇದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಬರುತ್ತದೆ ಎಂಬ ನಿರೀಕ್ಷೆ ಇಲ್ಲ. ಅದಕ್ಕಾಗಿ ಅಧಿಕಾರಿಗಳು ಈಗಿನ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಮುಂದಿನ ಪರಿಸ್ಥಿಯನ್ನು ಸಮಸ್ಯೆಗಳಿಲ್ಲದೆ ನಿಭಾಯಿಸಲು ಎರಡು ಪ್ರಕಾರದ ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಬೇಕೆಂದು ಅವರು ಸೂಚಿಸಿದರು.

ಜನರಿಗೆ ತೊಂದರೆ ಆದರೆ ಆಯಾ ಜಿಲ್ಲೆಯ ಡಿಸಿ,ಎಸಿ ಮತ್ತು ತಹಸಿಲ್ದಾರರನ್ನು ಜವಾಬ್ದರರನ್ನಾಗಿ ಮಾಡುತ್ತೇನೆ. ಅವರು ಎಚ್ಚರಿಕೆ ವಹಿಸಬೇಕು.ಕುಡಿಯುವ ನೀರಿನ ಕೊರತೆ ಆಗಬಾರದು. ಜನ ಕೆಲಸ ಸಿಕ್ಕಿಲ್ಲ ಅಂತಾ ಗುಳೆ ಹೋಗಬಾರದು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು, ಸಿಇಓ ಗಳು ತಮ್ಮ ಜಿಲ್ಲೆಯ ತಹಶಿಲ್ದಾರ, ಆರ್ ಐ, ವಿ.ಎ ಮತ್ತು ಪಿಡಿಓ ಗಳ ಜೋತೆ ಸಭೆ ಜರುಗಿಸಬೇಕು. ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ವಿಪತ್ತನ್ನು ಸಮರ್ಥವಾಗಿ ನಿರ್ವಹಿಸಲು ಜನರ ಸಹಕಾರ, ಅವರ ಪಾಲ್ಗೋಳ್ಳುವಿಕೆ ಮುಖ್ಯ. ಅದಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ತಮ್ಮ ಡಿಸಿ ಕಚೇರಿಯಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರದಂತೆ ಎಲ್ಲ ಜಿಲ್ಲೆಗಳಲ್ಲಯೂ ತಕ್ಷಣ ಜನರ ನೆರವಿಗೆ ಬರಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು
ಮತ್ತು ಪ್ರತಿ ತಾಲೂಕಿನಲ್ಲಿ ಕಂಟ್ರೊಲ್ ರೂಮ್ ಆರಂಭಿಸಿ, ದಿನದ 24 ಗಂಟೆ ಜನರ ಅಹವಾಲು ಆಲಿಸುವ ಮತ್ತು ಪರಿಹಾರ ಕೈಗೊಳ್ಳುವ ಕೆಲಸವಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಕ್ರಮವಹಿಸಿ, ಜಿಲ್ಲೆಯಿಂದ ಮೇವು ಹೊರ ಹೋಗದಂತೆ ಆದೇಶಿಸಿ. ಕೃಷಿ, ಕುಡಿಯುವ ನೀರಿಗೆ ತಡೆರಹಿತ ವಿದ್ಯುತ್ ನೀಡಬೇಕು ಮತ್ತು ಕುಡಿಯುವ ನೀರಿಗಾಗಿ ಹೊಸ ಬೋರವೇಲ್ ಕೊರೆಸಿದಾಗ ತಕ್ಷಣ ವಿದ್ಯತ್ ಸಂಪರ್ಕ ಕೊಡಲು ಕೆಪಿಟಿಸಿಎಲ್ ಕ್ರಮವಹಿಸಬೇಕು. ದಾಖಲಾತಿ, ಅನುಮತಿ ನೆಪದಲ್ಲಿ ವಿಳಂಬ ಮಾಡಿದರೆ ಕರ್ತವ್ಯ ಲೋಪವೆಂದು ತಿಳಿದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಬರಗಾಲ ಪರಿಸ್ಥಿಯಲ್ಲಿ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಖರ್ಚಿಗೆ ಈ ಯೋಜನೆಗಳಿಂದ ಸ್ವಲ್ಪ ಹಣ ಸೀಗುತ್ತಿದೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ಹಣ ಸೀಗುತ್ತಿದೆ. ರಾಜ್ಯದ 4.5 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನೆ ತಲುಪುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲೆಗಳಲ್ಲಿ ಸಮರ್ಥವಾಗಿ ವಿಪತ್ತು ನಿರ್ವಹಿಸಲು ಅಗತ್ಯದಷ್ಟು ಅನುದಾನವನ್ನು ಎಲ್ಲ ಡಿಸಿ, ತಹಸಿಲ್ದಾರಗಳಿಗೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಹೊಸದಾಗಿ ಬೋರವೇಲ್ ಕೊರೆಸಲು ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ ರೂ.2 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸಂವಾದದಲ್ಲಿ ತಿಳಿಸಿದರು.

ಪತ್ರಿಕೆಗಳಲ್ಲಿನ ವಾಚಕರ ವಾಣಿ,ಓದುಗರ ಪತ್ರಗಳಿಗೆ ಉತ್ತರಿಸಿ: ಮುಖ್ಯಮಂತ್ರಿಗಳ ನಿರ್ದೇಶನ
ಸರಕಾರ,ಆಡಳಿತ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಸಂಪರ್ಕ ಸೇತುವೆ ಆಗಿರುವ ಪತ್ರಿಕೆಗಳಲ್ಲಿ ವಾರಕೊಮ್ಮೆ ಪ್ರಕಟವಾಗುವ ವಾಚಕರ ವಾಣಿ, ಓದುಗರ ಪತ್ರ, ಸಾರ್ವಜನಿಕರ ಅಹವಾಲು, ಜನಸ್ಪಂದನ ವಿಭಾಗಗಳಲ್ಲಿನ ಸಮಸ್ಯೆ ಅಹವಾಲು, ಬೇಡಿಕೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವ ರೂಢಿ ಬೆಳೆಸಿಕೊಳ್ಳಬೇಕು.

ಇದರಿಂದ ಸರಕಾರ, ಆಡಳಿತದ ಮೇಲೆ ಜನರ ವಿಶ್ವಾಸರ್ಹತೆ ಹೆಚ್ವುತ್ತದೆ. ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಕುಡಿಯುವ ನೀರು, ಸ್ವಚ್ಚತೆ, ನಿರಪಯುಪಕ್ತ ಕಟ್ಟಡ, ಹಾಳಾದ ರಸ್ತೆ, ವಿದ್ಯತ್ ವ್ಯವಸ್ಥೆ ಕುರಿತು ಓದುಗರ ಅಭಿಪ್ರಾಯಗಳು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಬಗ್ಗೆ ಸೂಕ್ತ ಕ್ರಮವಹಿಸಿ, ಆಯಾ ಅಧಿಕಾರಿಗಳ ಹಂತದಲ್ಲಿ ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳೆಹಾನಿ ಪರಿಹಾರ ವಿತರಣೆ:
ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ, ದಿವ್ಯ ಪ್ರಭು ಅವರು ಮಾತನಾಡಿ, 2023ರ ಮುಂಗಾರು ವಿಫಲತೆ ಹಿನ್ನಲೆಯಲ್ಲಿ ಬೆಳೆ ಹಾನಿಗಾಗಿ ಸರಕಾರ ಪ್ರತಿ ರೈತನಿಗೆ ಬೆಳೆಹಾನಿಗಾಗಿ ಬಿಡುಗಡೆ ಮಾಡಿರುವ ರೂ.2000 ಮಧ್ಯಂತರ ಪರಿಹಾರಧನವು ಮಾರ್ಚ 05 ರವರೆಗೆ ಧಾರವಾಡ ಜಿಲ್ಲೆಯ 1,01,584 ಜನ ರೈತರಿಗೆ ಒಟ್ಟು ರೂ.19.82 ಕೋಟಿ ಹಣ ಜಮೆ ಆಗಿದೆ. ಬಾಕಿ ಉಳಿದ ರೈತರಿಗೂ ಹಂತಹಂತವಾಗಿ ಬೆಳೆಹಾನಿ ಪರಿಹಾರಧನವು ನೇರವಾಗಿ ಅವರ ಬ್ಯಕ್ ಖಾತೆಗೆ ಜಮೆ ಆಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಜಿಲ್ಲಾ ವಿಪತ್ತು, ಟಾಸ್ಕಪೆÇೀರ್ಸ್ ಸಭೆ:
ಜಿಲ್ಲೆಯಲ್ಲಿ ಸಮರ್ಥವಾಗಿ ಬರ ನಿರ್ವಹಣೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮವಹಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಗಳನ್ನು ನಡೆಸಿ, ಬರ ಪರಿಹಾರ ಕ್ರಮಗಳನ್ನು ಪರಿಶೀಲಿಸಿ, ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾನ್ಯ ವಿವಿಧ ಶಾಸಕರುಗಳ ಅಧ್ಯಕ್ಷತೆಯಲ್ಲಿ ಸುಮಾರು 24 ಟಾಸ್ಕ್ ಪೆÇೀರ್ಸ್ ಸಭೆಗಳನ್ನು ಜರುಗಿಸಿ, ಆಯಾ ತಾಲೂಕಿನ ಬರ ಸ್ಥಿತಿ ಅವಲೋಕಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು:
ಜಿಲ್ಲೆಯ ಗ್ರಾಮೀಣಭಾಗದಲ್ಲಿ ಕುಡಿಯುವ ನೀರು ಸರಬರಾಜು ಪರಸ್ಥತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗಿದ್ದು, ಜಿಲ್ಲೆಯ ಏಳು ತಾಲೂಕುಗಳ ಸುಮಾರು 153 ಗ್ರಾಮಗಳಲ್ಲಿ ಮಾರ್ಚದಿಂದ ಮೇ ಅಂತ್ಯದವರೆಗೆ ಕುಡಿಯುವ ನೀರು ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿತ್ತು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಕ್ಕೆ ಪ್ರತಿದಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಕೋಳಿವಾಡ ಗ್ರಾಮದಿಂದ ಪ್ರತಿದಿನ ನೀರು ತರಲು ಪೈಪಲೈನ್ ಹಾಕುವ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಮಾ.10 ರೊಳಗೆ ಮುಗಿಸಲು ಗುತ್ತಿಗೆದಾರನಿಗೆ ತಾಕೀತು ಮಾಡಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಮತ್ತು ಧಾರವಾಡ ತಾಲೂಕಿನ ಹೊಸಟ್ಟಿ, ಬೇಲೂರ, ಮುಗದ ಮತ್ತು ನಿಗದಿ ಗ್ರಾಮಗಳಿಗೆ ಖಾಸಗಿ ಬೋರವೇಲ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಗುರುತಿಸಿರುವ ಸಮಸ್ಯಾತ್ಮಕವೆನಿಸುವ ಗ್ರಾಮಗಳಿಗೆ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲು 325 ಖಾಗಿ ಬೋರವೇಲ್ ಗಳನ್ನು ಗುರುತಿಸಿ, ದರ ನಿಗದಿಗೊಳಿಸಲಾಗಿದೆ. ಮತ್ತು ಈಗಾಗಲೇ 313 ಜನ ಬೋರವೇಲ್ ಮಾಲೀಕರೊಂದಿಗೆ ಒಪ್ಪಂದ ಪತ್ರ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಗರ ಕುಡಿಯುವ ನೀರು:
ಜಿಲ್ಲೆಯ ನಗರಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಒಂದು ಮಹಾನಗರಪಾಲಿಕೆ, ಎರಡು ಪುರಸಭೆಗಳು ಮತ್ತು ಮೂರು ಪಟ್ಟಣ ಪಂಚಾಯತಿಗಳು ಸೇರಿ ಒಟ್ಟು ಆರು ನಗರ ಜನವಸತಿ ಪ್ರದೇಶಗಳಿವೆ. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 182 ವಾರ್ಡ ಗಳಲ್ಲಿ ಮತ್ತು ಉಳಿದ ಐದು ನಗರಸ್ಥಳಿಯ ಸಂಸ್ಥೆಗಳ 100 ವಾರ್ಡಗಳಲ್ಲಿ ಸಾರ್ವಜನಿಕರಿಗೆ ತೃಪ್ತಿಕರವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜುವಿನಲ್ಲಿ ದಿನಗಳ ಅಂತರ ಕಡಿಮೆ ಮಾಡಲು ಮತ್ತು ನೀರು ಸೋರಿಕೆ ತಡೆಗಟ್ಟಲು ಆಯುಕ್ತರು ಮತ್ತು ಮುಖ್ಯಾಧಿಕಾರಿಗಳು ಕ್ರಮವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಾನುವಾರು ಮೇವು ದಾಸ್ತಾನು:
ಜಾನುವಾರುಗಳಿಗೆ ಮೇವು ಕೊರತೆ ಇರುವದಿಲ್ಲ. ಈಗ ನಮ್ಮಲ್ಲಿ ಮುಂದಿನ 11 ವಾರಗಳಿಗೆ ಅಂದಾಜು ಬೇಕಾಗಬಹುದಾದ 1,17,970 ಟನ್ ಮೇವು ದಾಸ್ತಾನು ಲಭ್ಯವಿದೆ. ಅಗತ್ಯವಿದ್ದಲ್ಲಿ ಖಾಸಗಿಯವರಿಂದ ಮೇವು ಖರೀದಿಗೆ ಟೆಂಡರ್ ಮಾಡಿದ್ದು, ಮೇವು ಪೂರೈಕೆದಾರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಜಿಲ್ಲೆಯ 14 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಮತ್ತು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಮತ್ತು ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮಗಳಲ್ಲಿ ಮೇವು ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಕೆ ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಪಶುಸಂಗೋಪನೆ ಇಲಾಖೆಯಿಂದ ಜಿಲ್ಲೆಯಲ್ಲಿ 15,471 ರೈತರಿಗೆ ಸುಮಾರು 37,645 ಮಿನಿ ಮೇವಿನ ಬೀಜದ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಇದರಿಂದ ಮಾರ್ಚ ಅಂತ್ಯದವರೆಗೆ ರೈತರಿಗೆ ಸುಮಾರು 1,42,751 ಟನ್ ಹಸಿರು ಮೇವು ಲಭಿಸುವ ಅಂದಾಜಿದೆ ಎಂದು ಅವರು ಹೇಳಿದರು.

ಗೋ ಶಾಲೆ:
ಜಿಲ್ಲೆಯಲ್ಲಿ ಒಂದು ಸರಕಾರಿ ಹಾಗೂ 10 ಖಾಸಗಿಯವರ ಗೋಶಾಲೆಗಳಿವೆ. ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಯಾವುದೇ ಗೋಶಾಲೆ ತೆರೆಯುವ ಅಗತ್ಯ ಕಂಡುಬಂದಿಲ್ಲ. ಅಗತ್ಯಬಿದ್ದರೆ ರೈತರ ಬೇಡಿಕೆ ಪರಿಶೀಲಿಸಿ,ಗೋಶಾಲೆ ತೆರೆಯಲು ಜಿಲ್ಲಾಡಳಿತ ತಯ್ಯಾರಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಡಿಸಿ, ತಹಸಿಲ್ದಾರ ಪಿಡಿ ಖಾತೆಯ ಲಭ್ಯ ಹಣ
ವಿಪತ್ತು ನಿರ್ವಹಣೆಗಾಗಿ ಡಿಸಿ ಕಚೇರಿಯ ಪಿಡಿ ಖಾತೆಯಲ್ಲಿ 15.95 ಕೋಟಿ ರೂ.ಗಳು ಮತ್ತು ಎಂಟು ತಹಸಿಲ್ದಾರ ಕಚೇರಿ ಪಿಡಿ ಖಾತೆಯಲ್ಲಿ 5.10 ಕೋಟಿ ರೂ.ಗಳು ಸೇರಿ ಮಾರ್ಚ್ 3 ರವರೆಗೆ ಒಟ್ಟು 21.05 ಕೋಟಿ ರೂ.ಗಳು ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನರೇಗಾ ನೋಟ
ನರೇಗಾ ಯೋಜನೆಯಡಿ ಪ್ರಸಕ್ತ ವರ್ಷದ ಅನುಮೊದಿತ ಗುರಿ 26 ಲಕ್ಷ ಮಾನವ ದಿನಗಳಲ್ಲಿ ಈಗಾಗಲೇ 22.28 ಲಕ್ಷ ಮಾನವ ದಿನಗಳ ಕೂಲಿ ನೀಡಲಾಗಿದ್ದು, ಶೇ.85.68 ರಷ್ಟು ಸಾಧನೆ ಆಗಿದೆ. ಕೂಲಿ ಮತ್ತು ಸಾಮಗ್ರಿ ವೆಚ್ಚ ಸೇರಿ ಆರ್ಥಿಕವಾಗಿ ರೂ.9,705 ಲಕ್ಷ ರೂ.ಗಳ ಗುರಿ ಸಾಧಿಸಲಾಗಿದ್ದು, ಬಾಕಿ ಇರುವ 3,619 ಲಕ್ಷ ರೂ.ಗಳ ಬಿಡುಗಡೆಗೆ ಜಿಲ್ಲಾ ಪಂಚಾಯತಿಯಿಂದ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಜನ, ಜಾನುವಾರಗಳಿಗೆ ಕುಡಿಯುವ ನೀರು, ಉದ್ಯೋಗ ಮತ್ತು ಮೇವು ಪೂರೈಕೆಗೆ ಕ್ರಮವಹಿಸಲಾಗಿದ್ದು, ಸರಕಾರದ ನಿರ್ದೇಶನಗಳ ಪ್ರಕಾರ ಮುನ್ನೆಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಾನಗರಪಾಲಿಕೆ ಅಧೀಕ್ಷಕ ಇಂಜನೀಯರ್ ತಿಮ್ಮಪ್ಪ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್., ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜನೀಯರ್ ಆರ್.ಎಂ.ಸೋಪ್ಪಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ.ಬದ್ರಣ್ಣವರ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರವಿ.ಸಾಲಿಗೌಡರ, ಹೆಸ್ಕಾಂ ಅಧೀಕ್ಷಕ ಇಂಜನೀಯರ್ ಶರಣಮ್ಮ ಜಂಗಿನ, ಕಾರ್ಯಪಾಲಕ ಇಂಜನೀಯರ್ ಎಂಎಂ.ನದಾಫ, ಕರ್ನಾಟಕ ನಿರಾವರಿ ನಿಗಮದ ಕಾರ್ಯಪಾಲಕ ಇಂಜನೀಯರ್ ಬಸವರಾಜ ಬಿಲ್ಲಕುಂದಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು