ಬಳ್ಳಾರಿ: ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಬಳಕೆದಾರರ ಶುಲ್ಕ ದುರ್ಬಳಕೆ ಮಾಡಿಕೊಂಡ ಆರೋಪದಡಿ ಮೂವರು ಸಿಬ್ಬಂದಿಯನ್ನು ವಿಮ್ಸ್ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಿತ್ಯ ಹತ್ತು, ಇಪ್ಪತ್ತು ರೂಪಾಯಿ ಹೊರ ರೋಗಿಗಳ ವಿಭಾಗದಲ್ಲಿ ಕಟ್ಟುವ ಹಣಕ್ಕೆ ಖನ್ನ ಹಾಕಿದ್ದು ಬ್ಯಾಂಕ್ಗೆ ಕಟ್ಟ ಬೇಕಿದ್ದ ಸುಮಾರು 6 ಲಕ್ಷದ 21 ಸಾವಿರದ 242 ರೂಪಾಯಿ ಹಣ ಎಗರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಸಿಬ್ಬಂದಿ ದಯಾ ಅಮರ್, ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ ಎಂಬುವವರನ್ನು ಅಮಾನತುಗೊಳಿಸಿದ್ದಾರೆ. ದ್ವಿತಿಯ ದರ್ಜೆ ಸಹಾಯಕ ದಯಾ ಅಮರ್ ಎಂಬಾತ ಬ್ಯಾಂಕ್ಗೆ ಹಾಕಿರುವ ನಕಲಿ ಚಲನ್ ತೋರಿಸಿ ಆ ಹಣ ಎಗರಿಸಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಒಂದು ಅಥವಾ ಎರಡು ಸಾವಿರ ಹಣವನ್ನು ಬ್ಯಾಂಕ್ಗೆ ಹಾಕಿ ಬಳಿಕ ನಕಲಿ ಚಲನ್ನಲ್ಲಿ 20 ರಿಂದ 25 ಸಾವಿರ ಅಂತಾ ಬರೆದು ಯಾಮಾರಿಸಿದ್ದಾರೆ.
ವಿಮ್ಸ್ ಮೇಲಾಧಿಕಾರಿಗಳು ಅಕೌಂಟ್ ಚೆಕ್ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಆರೋಪದಡಿ ದಯಾ ಅಮರ್ ಸಹಿತ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಸಿಬ್ಬಂದಿಯಾದ ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ ತಿಳಿಸಿದ್ದಾರೆ. ಇಲಾಖಾ ತನಿಖೆಗೆ ಆದೇಶಿಸಿದ್ದು ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ ತಿಳಿಸಿದ್ದಾರೆ.