ಬಾಗಲಕೋಟೆ: ಕಲಾದಗಿ ಗ್ರಾಮದ ಯುವಕ ತೌಶೀಪ್ ಮೆಹ್ತರ್ ಎಂಬಾತ ಪಾಕಿಸ್ತಾನ ಪರ ವಾಟ್ಸಾಪ್ ಸ್ಟೇಟಸ್ ಹಾಕಿ ಪುಂಡತನ ಮೆರೆದ ಘಟನೆ ನಡೆದಿದೆ. ಯಾವುದೋ ವಾಹನದ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ವಿಡಿಯೋದ ತುಣುಕನ್ನು ಸ್ಟೇಟಸ್ ಇಟ್ಟುಕೊಂಡು ಪಾಕ್ ಪರ ಪ್ರಿತಿ ತೋರ್ಪಡಿಸಿದ್ದಾನೆ. ಇದೀಗ ತೌಶೀಪ್ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಿಂದೂ ಕಾರ್ಯಕರ್ತರು ಕಿಡಿಕಾರಿದ್ದಾರೆ. ಈ ಹಿನ್ನಲೆ ಎಚ್ಚೆತ್ತ ಕಲಾದಗಿ ಪೊಲೀಸರು ಆರೋಪಿ ತೌಶೀಪ್ನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಕಳೆದ ವರ್ಷ ಕೊಲ್ಹಾಪುರದಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ಹೊಗಳಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲ, ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆಗಳು, ಕೊಲ್ಹಾಪುರ ನಗರ ಬಂದ್‌ಗೂ ಕರೆ ನೀಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದರು. ನಂತರ ಕೊಲ್ಹಾಪುರ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದೀಗ ಬಾಗಲಕೋಟೆಯಲ್ಲಿಯೂ ಯುವಕನೊಬ್ಬ ಪುಂಡಾಟ ಮೆರೆದಿದ್ದಾನೆ.