News Karnataka Kannada
Thursday, May 02 2024
ಕರ್ನಾಟಕ

ಕೊಡಗಿನೊಳಗೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟರೆ ಹೋರಾಟ ಅನಿವಾರ್ಯ ವಿವಿಧ ಸಂಘಟನೆಗಳ ಎಚ್ಚರಿಕೆ

Raja Seat 8 7 21
Photo Credit :

ಮಡಿಕೇರಿ ಜುಲೈ 9 : ಮೊನ್ನೆಯಷ್ಟೇ ರಾಜ್ಯ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಕೊಡಗಿನಲ್ಲೂ ಕೊರೋನ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿರುವುದರಿಂದ ಅನ್‌ ಲಾಕ್‌ ಮಾಡುತ್ತೇವೆ ಎಂದರು. ಇದರಿಂದ ಬಹುಶಃ ಒತ್ತಡಕ್ಕೀಡಾದ ಜಿಲ್ಲಾಡಳಿತ ಶುಕ್ರವಾರದಿಂದಲೇ ಅನ್‌ ಲಾಕ್‌ ಘೋಷಿಸಿದೆ. ಆದರೆ ಅನ್‌ ಲಾಕ್‌ ನಿಂದಾಗಿ ತೆರೆದುಕೊಳ್ಳುವ ಪ್ರವಾಸೋದ್ಯಮ ಚಟುವಟಿಕೆಗೆ ಕೊಡಗಿನ ವಿವಿಧ ಸಂಘಟನೆಗಳಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಒಂದೆಡೆ ಪ್ರವಾಸೋದ್ಯಮ ಚಟುವಟಿಕೆಯ್ಲಲ್ಲಿ ತೊಡಗಿರುವವರು ವ್ಯಾಪಾರವಿಲ್ಲದೆ ಸಾಯುತಿದ್ದೇವೆ ಎಂದು ಅನ್‌ ಲಾಕ್‌ ಮಾಡಲು ಒತ್ತಡ ಹೇರುತಿದ್ದರೆ ಮತ್ತೊಂದೆಡೆ ಸಂಘಟನೆಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿವೆ. ಅನ್ ಲಾಕ್ ಆದರೂ ಕೊಡಗಿನ ಗಡಿಗಳು ಅನ್ ಲಾಕ್ ಆಗುವುದು ಬೇಡ. ಕೊಡಗಿನಲ್ಲಿ ಕೊರೋನ ಸಂಪೂರ್ಣ ನಿಯಂತ್ರಣ ಬರುವವರೆಗೂ ಹಾಗೂ ಮಳೆಗಾಲ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಡಬಾರದು ಕೊಟ್ಟರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ, ಯೂತ್ ವಿಂಗ್ ಹಾಗೂ ಪೊಮ್ಮಕಡ ಪರಿಷತ್ ಎಚ್ಚರಿಸಿದೆ.

ಈ ಕುರಿತು ಸಾಮೂಹಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿ ಈಗಾಗಲೇ ಕೊಡಗು ರಕ್ಷಣಾ ವೇದಿಕೆ ಹೋರಾಟದ ಸೂಚನೆಯನ್ನು ನೀಡಿದ್ದು, ಕೊರೋನ ಹತೋಟಿಗೆ ಬಾರದೆ ಕೊಡಗಿನಲ್ಲಿ ಪ್ರವಾಸೋದ್ಯಮ ತೆರೆದುಕೊಂಡರೆ ಖಂಡಿತಾ ಇವರೊಂದಿಗೆ ನಮ್ಮ ಮೂರು ಸಂಸ್ಥೆಗಳು ಕೈಜೋಡಿಸಿ ಜಿಲ್ಲೆಯಲ್ಲಿ ಇನ್ನಷ್ಟು ಸಂಘಟನೆಗಳನ್ನು ಜೊತೆಗೂಡಿಸಿ ದೊಡ್ಡ ಮಟ್ಟದ ಹೋರಾಟನ್ನು ಮಾಡಬೇಕಾಗುತ್ತದೆ ಎಂದು ಆವರು ಎಚ್ಚರಿಸಿದ್ದಾರೆ. ಈಗಾಗಲೇ ರಾಜ್ಯ ಅನ್ ಲಾಕ್ ಆಗಿದ್ದರು ಕಳೆದ ಮೂರು ದಿವಸದ ಹಿಂದೆಯೂ ಕೊಡಗಿನಲ್ಲಿ ಕೊರೋನ ಹತೋಟಿಗೆ ಬಾರದ ಕಾರಣ ಜಿಲ್ಲೆ ಲಾಕ್ ಡೌನ್ ಆಗಿಯೇ ಮುಂದುವರಿದಿತ್ತು. ಆದರೆ ಇದೀಗ ಕೇವಲ ಎರಡು ದಿವಸದಲ್ಲಿ ಕೊರೋನ ಪಾಸಿಟಿವಿಟಿ ಒಂದಿಷ್ಟು ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯನ್ನು ಸಂಪೂರ್ಣ ಅನ್ ಲಾಕ್ ಮಾಡಿರುವುದು ಸರಿಯಾದ ಕ್ರಮವಲ್ಲ, ಒಂದಿಷ್ಟು ಕಾದುನೋಡುವ ತಂತ್ರ ಮಾಡಬೇಕಿತ್ತು. ಇದರ ಹಿಂದೆ ಇದೀಗ ಕೊಡಗಿನಲ್ಲಿ ಪ್ರವಾಸೋದ್ಯಮ ಆರಂಭಿಸಬೇಕು ಎಂಬ ಕೂಗು ಕೇವಲ ಕೆಲವರಿಂದ ಮಾತ್ರ ಕೇಳಿಬರುತ್ತಿದ್ದು, ಕೆಲವರ ಸ್ವಾರ್ಥಕ್ಕಾಗಿ ನಾವು ಜಿಲ್ಲೆಯನ್ನು ಬಲಿಕೊಡುವುದು ಬೇಡ. ಹಾಗೇ ಕೆಲವೊಂದು ಬೆಳವಣಿಗೆಯಿಂದ ಹಲವಾರು ಸಂಶಯಗಳು ಮನೆಮಾಡಿದೆ. ಏಕಾಏಕಿ ಪಾಸಿಟಿವಿಟಿ ದರ ಕಡಿಮೆಯಾಗುವುದಕ್ಕೂ ಹಾಗೂ ಪ್ರವಾಸೋದ್ಯಮ ತೆರೆದುಕೊಳ್ಳಬೇಕಿದೆ ಎಂಬ ಕೂಗು ಕೇಳಿಬರುತ್ತಿರುವುದಕ್ಕೂ ಒಂದೇ ಸೌಮ್ಯಥೆ ಕಂಡುಬರುತ್ತಿದೆ, ನಮಗೆ ಕೊಡಗಿನ ಪಾಸಿಟಿವಿಟಿ ದರದ ಬಗ್ಗೆಯೇ ಸಂಶಯವಿದೆ. ಏಕಾಏಕಿ ಇಷ್ಟೊಂದು ಕಡಿಮೆಯಾಗಲು ಸಾದ್ಯವಿಲ್ಲ. ಹಾಗೇ ಸೋಂಕಿತ ಪ್ರಕರಣ ಕೂಡ ಎರಡಂಕಿಗೆ ಇಳಿದಿಲ್ಲ. ಯಾವುದೇ ಕಾರಣಕ್ಕೂ ಕೊರೋನ ಸಂಪೂರ್ಣ ಹತೋಟಿಗೆ ಬರುವ ವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೇಲಿನ ಮೂರು ಸಂಸ್ಥೆಗಳು ಮನವಿ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟದಲ್ಲಿದ್ದಾರೆ ನಿಜ, ಈ ಕಷ್ಟ ಸಂಪೂರ್ಣ ದೂರವಾಗಬೇಕು ಎನ್ನುವುದು ಅಷ್ಟೇ ಸತ್ಯ. ಹಾಗಂತ ಕೆಲವೇ ದಿನಗಳಲ್ಲಿ ಮತ್ತೇ ಕೊರೋನ ಅಧಿಕವಾಗಿ ಇನ್ನಷ್ಟು ತಿಂಗಳು ಜನರಿಗೆ ಲಾಕ್ ಡೌನ್ ಶಿಕ್ಷೆ ಅನುಭವಿಸುವಂತ್ತಾಗುವುದು ಬೇಡ. ಎರಡನೇ ಅಲೆಯನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ನಾವು ಹಲವಾರು ಅಮೂಲ್ಯ ರತ್ನಗಳು ಸೇರಿದಂತೆ ನಮ್ಮವರನ್ನು ಕಳೆದುಕೊಂಡಿದ್ದೇವೆ ಮತ್ತೆ ಹೀಗಾಗುವುದು ಬೇಡ. ಮೂರನೇ ಅಲೆಯ ತೀವ್ರತೆ ಅಧಿಕವಾಗಲಿದೆ, ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀಳಲಿದೆ ಎಂಬ ತಜ್ಞರ ಮಾತು ಕೇಳಿದಾಗ ಈಗಾಗಲೇ ಭಯವಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೇ ಅಲೆ ಆರಂಭವಾಗಿದೆ. ನಮ್ಮ ಭವಿಷ್ಯದ ಕಂದಮ್ಮಗಳಿಗಾಗಿ ನಾವು ಇದೀಗಲೇ ಒಂದಿಷ್ಟು ಕಠೀಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಕೊಡಗಿನೊಳಗೆ ಅನ್ ಲಾಕ್ ಆದರೂ ಸದ್ಯಕ್ಕೆ ಕೊರೋನ ಸಂಪೂರ್ಣ ಹತೋಟಿಗೆ ಬರುವವರೆಗೂ ಮಳೆಗಾಲ ಮುಗಿಯುವವರೆಗೂ ಕೊಡಗಿನ ಎಲ್ಲಾ ಗಡಿಗಳು ಅನ್ ಲಾಕ್ ಆಗುವುದು ಬೇಡ. ಇನ್ನಷ್ಟು ಬಿಗಿ ತಪಾಸಣೆ ಅಗತ್ಯವಾಗಿದೆ, ಪ್ರವಾಸೋದ್ಯಮ ತೆರೆದುಕೊಂಡರೆ ಹೋರಾಟದ ಹಾದಿ ಹಿಡಿಯಬೇಕಾಗಿರುವುದು ಅನಿವಾರ್ಯ ಕೂಡ. ಕೂಡಲೇ ಪ್ರವಾಸೋದ್ಯಮ ಆರಂಬಿಸಲು ಅವಕಾಶ ಮಾಡಿಕೊಡಬೇಕು ಎಂದು ದ್ವನಿ ಎತ್ತುತ್ತಿರುವವರಿಗೆ ಒಂದು ಮಾತು. ದಿಡೀರನೆ ಕೊಡಗಿನ ಒಳಗೆ ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಬಂದು ಕೊಡಗಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಸ್ಪೋಟಗೊಂಡು ಸಾವುನೋವುಗಳು ಅಧಿಕವಾದರೇ ಈ ಪ್ರವಾಸೋದ್ಯಮ ಸಂಘಟನೆಯವರು ಅದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಲು ತಯಾರಾಗಿದ್ದಾರೆಯೇ. ಈ ಬಗ್ಗೆ ಜಿಲ್ಲಾಡಳಿತಕ್ಕೆ ತಾವುಗಳು ಲಿಖಿತ ಹೇಳಿಕೆಯನ್ನು ನೀಡಬಹುದಾ.?

ಒಮ್ಮೆ ಯೋಚಿಸಿ ನೋಡಿ ಎರಡನೇ ಅಲೆಯನ್ನು ನಾವು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಕೊಡಗಿನಲ್ಲಿ ಇಂದು ಅನೇಕ ಮಹಿಳೆಯರು ವಿಧವೆಯಾಗಿದ್ದಾರೆ, ಹಲವು ಮಕ್ಕಳಿಗೆ ತಂದೆ ತಾಯಿ ಇಬ್ಬರು ಇಲ್ಲದಾಗಿದ್ದಾರೆ. ನಾವುಗಳು ಅನೇಕ ಬಂದುಗಳನ್ನು ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಹಣದಿಂದವಾಗಲಿ ಅಥವಾ ಮತ್ತೆ ಯಾವುದರಿಂದಾಗಲಿ ಅವರನ್ನು ವಾಪಾಸು ತರಲು ಸಾದ್ಯವಿಲ್ಲ. ಕೇವಲ ಕೆಲವರ ಸ್ವಾರ್ಥಕ್ಕಾಗಿ ಈ ನಾಡಿನ ಜನರ ನೆಮ್ಮದಿ ಮತ್ತೇ ಹಾಳಾಗುವುದು ಬೇಡ. ಇಷ್ಟು ಕಾದಿದ್ದೇವೆ ಕೇವಲ ಒಂದಷ್ಟು ಸಮಯ ಎಲ್ಲಾವನ್ನು ಸಹಿಸಿಕೊಳ್ಳಬೇಕಿದೆ, ಒಂದಷ್ಟು ಪರಿಸ್ಥಿತಿಯನ್ನು ಅವಲೋಕಿಸಿ ಕೊಡಗಿನೊಳಗೆ ಬೇಕಾದರೆ ಮುಕ್ತ ಅವಕಾಶಕ್ಕೆ ಅಂದರೆ ಈ ಮೊದಲಿನಂತೆ ಎಲ್ಲಾ ಅಂಗಡಿ ಮಳಿಗೆಗಳಿಗೂ ಒಂದಷ್ಟು ನಿಯಮಗಳೊಂದಿಗೆ ತೆರೆದುಕೊಳ್ಳಲು ಅವಕಾಶ ಕೊಡಲಿ ನಂತರ ಪರಿಸ್ಥಿತಿ ನೋಡಿಕೊಂಡು ಪ್ರವಾಸೋದ್ಯಮಕ್ಕೆ ಅವಕಾಶ ಕೊಟ್ಟರಾಯಿತು. ಈಗಾಗಲೇ ಮಳೆಯ ತೀವ್ರತೆ ಕೂಡ ಅಧಿಕವಾಗಿಲ್ಲ, ಹಾಗೇ ಶೇಕಡಾ 60% ಜನರಿಗೆ ಇನ್ನೂ ವ್ಯಾಕ್ಸಿನ್ ಕೂಡ ಸಿಕ್ಕಿಲ್ಲ. 90ದಿವಸ ಕಳೆದ ಹಿರಿಯರಿಗೂ ಕೂಡ ಇನ್ನು ವ್ಯಾಕ್ಸಿನ್ ದೊರಕಲಿಲ್ಲ. ಇದನೆಲ್ಲಾ ಕೊಡಿಸುವ ಪ್ರಯತ್ನ ನಾವು ಮೊದಲು ಮಾಡಬೇಕಿದೆ ಹೊರತು ಏಕಾಏಕಿ ತರಾತುರಿಯಲ್ಲಿ ಗಡಿಯನ್ನು ತೆರೆಯಲು ಪ್ರವಾಸೋದ್ಯಮ ಆರಂಭಿಸಲು ಒತ್ತಡ ಹೇರುವುದು ಸರಿಯಲ್ಲ. ಹೆಗ್ಗಣವನ್ನು ಬಿಲದೊಳಗೆ ಬಿಟ್ಟುಕೊಂಡು ಹೊರಗೆ ಮಣ್ಣುಮುಚ್ಚುವ ಪ್ರಯತ್ನ ಬೇಡ, ಅದು ಇಂದಲ್ಲಾ ನಾಳೆ ಹೊರಗೆ ಬರುತ್ತದೆ. ನಮ್ಮವರ ಹಿತಾದೃಷ್ಟಿಯಿಂದ ಸದ್ಯಕ್ಕೆ ಕೊರೋನ ಸಂಪೂರ್ಣ ಹತೋಟಿಗೆ ಬರುವವರೆಗೂ ಮಳೆಗಾಲ ಒಂದಷ್ಟು ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು, ಒಂದು ಸಮಯ ಇದನ್ನು ಮೀರಿ ಕೊಟ್ಟರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು