News Karnataka Kannada
Monday, April 29 2024
ಕರ್ನಾಟಕ

ಕುಶಾಲನಗರದ ಎಸ್ಎಲ್ಎನ್ ಗ್ರೂಪ್ ಮೇಲೆ ಐಟಿ ದಾಳಿ

Photo Credit :

ಕುಶಾಲನಗರದ ಎಸ್ಎಲ್ಎನ್ ಗ್ರೂಪ್ ಮೇಲೆ ಐಟಿ ದಾಳಿ

ಮಡಿಕೇರಿ: ಕೊಡಗಿನ ಬೃಹತ್ ಉದ್ಯಮವಾಗಿರುವ ಎಸ್ಎಲ್ಎನ್ ಗ್ರೂಪ್ ಮೇಲೆ ಏಕ ಕಾಲದಲ್ಲಿ 11 ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ ನಿಗ್ರಹ ದಳ ಹಲವು ದಾಖಲೆಗಳ ಪರಿಶೀಲನೆ ನಡೆಸಿದೆ.

ಕೇಂದ್ರ ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಅವರ ಸಂಬಂಧಿಗಳದ್ದು ಎನ್ನಲಾಗಿರುವ ಪ್ರತಿಷ್ಠಿತ ಕೂಡ್ಲೂರಿನ ಕೈಗಾರಿಕಾ ಬಡಾವಣೆಯಲ್ಲಿರುವ ಎಸ್ಎಲ್ಎನ್ ಗೆ ಸೇರಿದ ಕಾಫಿ ಸಂಸ್ಕರಣಾ ಘಟಕ ಮತ್ತು ಕಾಫಿ ಇನ್ಸ್ಸ್ಟೆಂಟ್ ಘಟಕದ ಕಚೇರಿ, ಮಂಗಳೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟಿಂಬರ್ ಡಿಪೋ, ಪೆಟ್ರೋಲ್ ಬಂಕ್, ಐಶಾರಾಮಿ ಹೋಟೇಲ್ ಪರ್ಪಲ್ ಪಾಮ್ ಮತ್ತು ಇಬ್ಬರು ಎಸ್ಎಲ್ಎನ್ ಗ್ರೂಪ್ ಮಾಲೀಕರು ಹಾಗೂ ಸಹೋದರರಾದ ವಿಶ್ವನಾಥನ್ ಮತ್ತು ಸಾತಪ್ಪನ್ನವರ ಮನೆಗಳ ಮೇಲೆ ಹಾಗೂ ಪಾಲಿಬೆಟ್ಟ ಸಮೀಪದ ಗ್ಲೋಬ್ ಎಸ್ಟೇಟ್, ಕೊಪ್ಪದಲ್ಲಿನ ಎಸ್ಟೇಟ್ ಮತ್ತು ಎಸ್ಎಲ್ಎನ್ ಎಸ್ಟೇಟ್ ನ ಕಚೇರಿಗಳು, ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ಬಳಿ ಇರುವ ಈಡನ್ ಗಾರ್ಡನ್ ಹೋಂ ಸ್ಟೇ ಕಚೇರಿಗಳ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಅಧಿಕಾರಿಗಳಿಗೆ ಕಚೇರಿಗಳಲ್ಲಿ ಮತ್ತು ಅವರ ನಿವಾಸಗಳಲ್ಲಿ ಕೆಲವು ಮಹತ್ವದ ದಾಖಲೆಗಳು ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಚೆನೈನಲ್ಲಿ ಕೇಂದ್ರ ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಅಲ್ಲಿ ದೊರೆತ ಕೆಲವು ದಾಖಲೆಗಳ ಆಧಾರದ ಮೇಲೆ ಕುಶಾಲನಗರದ ಎಸ್ಎಲ್ಎನ್ ಗ್ರೂಪ್ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಐಟಿ ದಾಳಿಯ ಹಿನ್ನಲೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಪೆಟ್ರೋಲ್ ಬಂಕ್ ಸೇವೆಯನ್ನು ನಿಲ್ಲಿಸಲಾಗಿತ್ತು. ಯಾವುದೇ ಸೂಚನೆ, ಸುಳಿವು ಸಿಗದಂತೆ ತಂಡೋಪ ತಂಡವಾಗಿ 13 ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದರು. ಇದುವರೆಗೂ ಈ ರೀತಿಯ ದಾಳಿಯನ್ನು ನೋಡದ ಜನ ಇದನ್ನು ಕಂಡು ನಿಬ್ಬೆರಗಾಗಿದ್ದರು.

ಮೊದಲಿಗೆ ಕೂಡ್ಲೂರು ಕೈಗಾರಿಕಾ ವಲಯದಲ್ಲಿರುವ ಎಸ್ಎಲ್ಎನ್ ಕಾಫಿ ಸಂಸ್ಕರಣಾ ಘಟಕಕ್ಕೆ ಆಗಮಿಸಿದ ಅಧಿಕಾರಿಗಳು ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಿದರು. ಬಳಿಕ ಕಾರ್ಯನಿರ್ವಹಿಸಲು ಆಗಮಿಸಿದ ಕಾರ್ಮಿಕರ ಮತ್ತು ಗುಮಾಸ್ತರುಗಳ ಮೊಬೈಲ್ ಗಳನ್ನು ವಶಪಡಿಸಿಕೊಂಡು ಯಾವುದೇ ಮಾಹಿತಿ ಹೊರಹೋಗದಂತೆ ನೋಡಿಕೊಂಡರಲ್ಲದೆ, ಗೇಟಿನ ಮುಂಭಾಗದಲ್ಲಿ ಸಂಸ್ಥೆ ಕಸವನ್ನು ಸಾಗಿಸುವ ಟ್ರ್ಯಾಕ್ಟರ್ ನ್ನು ಕೂಡ ಹೊರಬಿಡಲಿಲ್ಲ. ಐಟಿ ಅಧಿಕಾರಿಗಳು ಅವರದ್ದೇ ಆದ ಪೊಲೀಸರನ್ನು ಕರೆತಂದಿದ್ದರು.

ಅಧಿಕಾರಿಗಳಿಗೆ ಏನೆಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಮತ್ತು ವಶಪಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದು, ಒಟ್ಟಾರೆ ಐಟಿ ದಾಳಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಂತು ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು