News Karnataka Kannada
Tuesday, April 23 2024
Cricket
ಕರ್ನಾಟಕ

ಹೊಂಬಮ್ಮನ ಕೆರೆ ಅತಿಕ್ರಮಣ ತೆರವು ವಿಳಂಬ ಆರೋಪ

Photo Credit :

ಹೊಂಬಮ್ಮನ ಕೆರೆ ಅತಿಕ್ರಮಣ ತೆರವು ವಿಳಂಬ ಆರೋಪ

ರಾಮನಗರ: ಭೂ ಒತ್ತುವರಿದಾರರ ಜತೆಗೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಐತಿಹಾಸಿಕ ಹೊಂಬಮ್ಮನ ಕೆರೆ ಅತಿಕ್ರಮಣ ತೆರವುಗೊಳಿಸಲು ವಿಳಂಬ ಧೋರಣೆ ತಾಳಿದ್ದಾರೆ ಎಂದು ಬಿಡದಿ ಹೋಬಳಿ ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ರವಿಕುಮಾರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮನಗರ ತಾಲ್ಲೂಕಿನ ಅವರಗೆರೆ ಗ್ರಾಮದಲ್ಲಿರುವ ಐತಿಹಾಸಿಕ ಹೊಂಬಮ್ಮನ ಕೆರೆ ಒತ್ತುವರಿ ತೆರವಿಗೆ ಗ್ರಾಮಸ್ಥರು ಮಾಡಿದ್ದ ಮನವಿಗೆ ಸ್ಪಂದಿಸಿದ ರಾಮನಗರ ತಾಲೂಕು ತಹಸೀಲ್ದಾರ್ ಅವರು ಕೆರೆ ಅಚ್ಚುಕಟ್ಟು ಪ್ರದೇಶವನ್ನು ಸರ್ವೆ ಮಾಡಿಸಿ ಹದ್ದುಬಸ್ತು ಗುರುತಿಸಿದ್ದಾರೆ. ಆದರೆ ತಹಸೀಲ್ದಾರ್ ಅವರ ಆದೇಶದಂತೆ ಕೆರೆ ಅತಿಕ್ರಮಣ ತೆರವು ಮಾಡಲು ಬಿಡದಿ ಹೋಬಳಿ ಕಂದಾಯ ಇಲಾಖೆ ಅಧಿಕಾರಿಗಳು ಮೀನಾ-ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಭೂ ಕಬಳಿಕೆದಾರರ ಒತ್ತುವರಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿರುವ ಅವರಗೆರೆ ಗ್ರಾಮದ ಐತಿಹಾಸಿಕ ಹೊಂಬಮ್ಮನ ಕೆರೆಯ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಸ್ಥಳೀಯ ಪುರಸಭೆ ಸದಸ್ಯೆ ಲಕ್ಷ್ಮಿದೇವಿ ರವಿಕುಮಾರ್ ಸಹಿತ ಕೆಲವು ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಮನವಿಗೆ ಸ್ಪಂದಿಸಿದ ತಾಲ್ಲೂಕು ತಹಸೀಲ್ದಾರ್ ಅವರು ಹೊಂಬಮ್ಮನ ಕೆರೆ ಭೂ ಪ್ರದೇಶದ ಜಂಟಿ ಸರ್ವೆಗೆ ಆದೇಶ ಹೊರಡಿಸಿದ್ದರು.

ತಹಸೀಲ್ದಾರ್ ಅವರ ಆದೇಶದಂತೆ ಕಳೆದ ಜನವರಿ ತಿಂಗಳಲ್ಲಿ ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಹಮ್ಮಿಕೊಂಡು ಸರ್ವೆ ಕಾರ್ಯಾಚರಣೆ ಮಾಡಿ ತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದರು. ಅವರಗೆರೆ ಗ್ರಾಮದ ಸರ್ವೆ ನಂಬರ್ 4 ರಲ್ಲಿ ಸುಮಾರು 15.29 ಎಕರೆ ಭೂ ಪ್ರದೇಶವನ್ನು ಹೊಂದಿರುವ ಹೊಂಬಮ್ಮನ ಕೆರೆಯ ಭೂ ಪ್ರದೇಶದ ಭಾರಿ ಅತಿಕ್ರಮಣಕ್ಕೆ ಒಳಗಾಗಿರುವುದು ವರದಿಯಲ್ಲಿ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಅವರು ಆದೇಶ ನೀಡಿದ್ದಾರೆ.

ಆದೇಶದ ಪ್ರತಿ ಬಿಡದಿಯ ನಾಡ ಕಚೇರಿ ತಲುಪಿದ್ದರೂ ಕೂಡ ಅಧಿಕಾರಿಗಳು ಭೂ ಪ್ರದೇಶದ ಹದ್ದುಬಸ್ತು ಗುರುತಿಸಿ ಅತಿಕ್ರಮಣವನ್ನು ಬಿಡಿಸಲು ಇನ್ನೂ  ಮುಂದಾಗಿಲ್ಲ. ಭೂ ಕಬಳಿಕೆದಾರರ ಅಮಿಷಕ್ಕೆ ಹಾಗೂ ಒತ್ತಡಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗಾಗಿರುವ ಶಂಕೆಯಿದೆ. ಈ ಬಗ್ಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದರು.

2013-14ನೇ ಸಾಲಿನವರೆಗೆ ಸರಕಾರಿ ದಾಖಲೆಗಳ ಪ್ರಕಾರ ಹೊಂಬಮ್ಮನ ಕೆರೆ 15.29 ಎಕರೆ ವಿಸ್ತೀರ್ಣವಿದೆ. ಆದರೆ 2014ನೇ ಸಾಲಿನಿಂದ ಕೆರೆಯ ವಿಸ್ತೀರ್ಣ ಏಕಾಏಕಿ ಶೂನ್ಯ ಆಗಿರುವುದು ಕಂಡುಬಂದಿತ್ತು. ಅತಿಕ್ರಮಣಕಾರರು ಕೆರೆಯ ವಿಸ್ತೀರ್ಣವನ್ನೇ ದಾಖಲೆಗಳಲ್ಲಿ ಡಿಲಿಟ್ ಮಾಡಿಸುವ ಸಂಚು ನಡೆಸಿದ್ದರು. ಈ ಹುನ್ನಾರದ ಹಿಂದೆ ಅಧಿಕಾರಿಗಳು ಹಾಗೂ ಕಾಣದ ಕೈಗಳು ಕೆಲಸ ಮಾಡಿವೆ. ಗ್ರಾಮಸ್ಥರ ಅರ್ಜಿ ಮೇರೆಗೆ ಕೆರೆಯ ಸರ್ವೆ ಕಾರ್ಯ ಮುಗಿದಿದೆ. ಆದರೆ ಭೂ ಒತ್ತುವರಿ ಮಾತ್ರ ತೆರವಾಗಿಲ್ಲ. ಈ ಕೂಡಲೇ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು