News Karnataka Kannada
Thursday, April 25 2024
Cricket
ಕರ್ನಾಟಕ

ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ

Photo Credit :

ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ

ಚಾಮರಾಜನಗರ: ಬಂಡೀಪುರದಲ್ಲೀಗ ನಿಸರ್ಗ ಸುಂದರ ನೋಟಗಳು ಪ್ರಕೃತಿ ಪ್ರಿಯರ ಮನಮುದಗೊಳಿಸುತ್ತಿದೆ. ಎಲ್ಲೆಡೆಯೂ ಕಾಣಬರುವ ಹಸಿರು ಹಚ್ಚಡದ ಸುಂದರ ನೋಟ ನೋಡುಗರ ಮನಸೆಳೆಯುತ್ತಿದೆ. ಈ ಬಾರಿ ಸುರಿದ ಮಳೆ ಪ್ರಕೃತಿಯನ್ನು ಪುಳಕಗೊಳಿಸಿದೆ. ಜತೆಗೆ ಬಂಡೀಪುರದ ನಡುವೆಯಿರುವ ಕೆರೆಕಟ್ಟೆಗಳಲ್ಲಿ ನೀರು ಕಾಣಿಸುತ್ತಿದೆ.

ಬೇಸಿಗೆಯಲ್ಲಿ ಆಗೊಮ್ಮೆ ಈಗೊಮ್ಮೆ ಸುರಿದ ಮಳೆ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರು ಅರಣ್ಯದತ್ತ ಬಾರದ ಕಾರಣದಿಂದಾಗಿ ಯಾವುದೇ ರೀತಿಯ ಅಗ್ನಿ ಅನಾಹುತಗಳು ಸಂಭವಿಸದ ಕಾರಣದಿಂದಾಗಿ ಬಂಡೀಪುರ ಅರಣ್ಯ ಸಮೃದ್ಧವಾಗಿ ಹಸಿರ ಕಾನನದಿಂದ ಕಂಗೊಳಿಸುತ್ತಿದೆ.

ಬಂಡೀಪುರ ಹುಲಿಗಳ ಆವಾಸ ಸ್ಥಾನವಾದರೂ ಇವುಗಳನ್ನು ಹೊರತು ಪಡಿಸಿದರೆ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಈಗ ನೋಡಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಛಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತ್ತಿವೆ. ಇನ್ನು ಮುಂಜಾನೆಯ ಚುಮುಚುಮು ಚಳಿಯಲ್ಲಿ ಹಿಮದ ಹಾದಿಯಲ್ಲಿ ಸಾಗುವಾಗಿ ಗಿಡಮರಗಳ ನಡುವೆ ಹಾದು ಹೋಗುವ ಪ್ರಾಣಿಗಳನ್ನು ನೋಡುವುದೇ ಒಂದು ರೀತಿಯ ಮಜಾ.. ಅದರಲ್ಲೂ ಪಕ್ಷಿಗಳ ಕಲರವ, ಕಾನನ ಕುಸುಮಗಳ ಸುವಾಸನೆ ಹೊಸದಾದ ಲೋಕಕ್ಕೆ ಕರೆದೊಯ್ಯುತ್ತದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದ್ದು, ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಪ್ರವಾಸಿಗರು ಸಫಾರಿಯಲ್ಲಿ ತೆರಳಿ ಹುಲಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಾರೆ.

ಬಂಡೀಪುರವು ರಾಜ್ಯದ ಸಂಪರ್ಕ ಸೇತುವಾಗಿದ್ದು, ದಕ್ಷಿಣಕ್ಕೆ ತಮಿಳುನಾಡು ಮತ್ತು ಪಶ್ಚಿಮಕ್ಕೆ ಕೇರಳದ ಅರಣ್ಯಪ್ರದೇಶಗಳೊಂದಿಗೆ ವಿಲೀನಗೊಂಡಿದೆ. ಇಲ್ಲಿ ಎಲೆ ಉದುರುವ ಹಾಗೂ ಕುರುಚಲು ಸಸ್ಯ ಪ್ರಭೇದಗಳು ಹೆಚ್ಚಾಗಿವೆ. ಈ ವ್ಯಾಪ್ತಿಯಲ್ಲಿ ಮಳೆ ಆಗಾಗ್ಗೆ ಸುರಿಯುತ್ತಿರುವುದರಿಂದ ಹಸಿರಾಗಿದೆ. ಪ್ರಾಣಿಗಳಿಗೆ ಮೇವು ನೀರು ಎಲ್ಲವೂ ಯಥೇಚ್ಛವಾಗಿ ದೊರೆಯುತ್ತಿರುವುದರಿಂದ ನೆಮ್ಮದಿಯಾಗಿ ಎಲ್ಲೆಂದರಲ್ಲಿ ವಿಹರಿಸುತ್ತಿವೆ.

ಇದೀಗ ಕೊರೋನಾ ಹಿನ್ನಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವ ಕಾರಣದಿಂದಾಗಿ ಪ್ರಾಣಿಗಳಿಗೂ ಸಂಪೂರ್ಣ ಸ್ವಾತಂತ್ರ್ಯ ದೊರೆತಂತಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ನಿರ್ಭಯವಾಗಿ ಓಡಾಡುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬಂಡೀಪುರಕ್ಕೆ ಹೊಸದೊಂದು ಕಳೆಬಂದಿದಂತು ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು