News Karnataka Kannada
Wednesday, April 24 2024
Cricket
ಕರ್ನಾಟಕ

ವೃದ್ಧದಂಪತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Photo Credit :

ವೃದ್ಧದಂಪತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹಾಸನ: ಆಲಗೊಂಡನಹಳ್ಳಿ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಶಂಕಿತ ಆರೋಪಿಯ ಮೇಲೆ ಪೊÇಲೀಸರು ಗುಂಡು ಹಾರಿಸುವ ಮೂಲಕ ಬಂಧಿಸಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಬರಗೂರು ಗ್ರಾಮದ ಆರೋಪಿ ಪ್ರಸಾದ್ ಅಲಿಯಾಸ್ ಗುಂಡ ಎಂಬಾತನೇ ಪೊಲೀಸರ ಗುಂಡೇಟು ತಿಂದು ಬಂಧಿತನಾದವನು. ಆಗಸ್ಟ್ 29ರಂದು ರಾತ್ರಿ ಅಲಗೊಂಡನಹಳ್ಳಿಯ ಮುರಳಿಧರ್ ಮತ್ತು ಉಮಾದೇವಿ ಎಂಬ ವೃದ್ಧ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಮಂಗಳವಾರ ಮುಂಜಾನೆ ಚನ್ನರಾಯಪಟ್ಟಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಕೊಲೆ ಪ್ರಕರಣದಲ್ಲಿ ಬರಗೂರು ಗ್ರಾಮದ ಪ್ರಸಾದ್ ಎಂಬಾತ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹಿಡಿಯಲು ಮುಂದಾದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೊಲೆ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಬರಗೂರು ಹ್ಯಾಂಡ್ ಪೋಸ್ಟ್ ಬಳಿಯ ಕೋಳಿ ಫಾರಂನಲ್ಲಿ ಅಡಗಿದ್ದಾನೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಬರಗೂರು ಗ್ರಾಮದ ಆರೋಪಿ ಪ್ರಸಾದ್ ಅಲಿಯಾಸ್ ಗುಂಡ ಎಂಬುವನನ್ನು ಚನ್ನರಾಯಪಟ್ಟಣದ ಪೊಲೀಸರು ಸೆ.1ರ ಮುಂಜಾನೆಯೇ ಸೆರೆ ಹಿಡಿಯಲು ಮುಂದಾಗಿದ್ದಾರೆ.

ಈ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಸಿಪಿಐ ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಬೇಲೂರು ಸಿಪಿಐ ಸಿದ್ದರಾಮಪ್ಪ ಅವರು ಗುಂಡು ಹಾರಿಸಿ ಆರೋಪಿಯನ್ನು ಜೀವಂತವಾಗಿ ಸೆರೆಹಿಡಿದಿದ್ದಾರೆ. ಅಲ್ಲದೆ ಸಿಪಿಐ ವಿನಯ್ ರವರಿಗೆ ಘಟನೆ ವೇಳೆ ಗಾಯಗಳಾಗಿದ್ದು, ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹತ್ಯೆಗೀಡಾದ ಮುರಳಿಧರ್ ಮತ್ತು ಉಮಾದೇವಿ ಎಂಬ ವೃದ್ಧ ದಂಪತಿಗೆ ಮಕ್ಕಳಿರಲಿಲ್ಲ. ಇವರಿಗೆ 90 ಎಕರೆಗೂ ಹೆಚ್ಚು ಜಮೀನಿದ್ದು, ಇದರಲ್ಲಿ ಸ್ವಲ್ಪ ಪ್ರಮಾಣದ ಆಸ್ತಿಯನ್ನು ಮಾರಾಟ ಮಾಡಿದ್ದರು. ಜಮೀನು ಮಾರಾಟದಿಂದ ಬಂದ ಹಣವನ್ನು ಮನೆಯಲ್ಲಿ ಇಟ್ಟಿದ್ದರು ಎಂಬ ಮಾಹಿತಿ ತಿಳಿದಿದ್ದ ಕೆಲವು ದುಷ್ಕರ್ಮಿಗಳು ಆಗಸ್ಟ್ 29ರಂದು ಅವರ ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಗದು ಕಳ್ಳತನ ಮಾಡಿದ್ದಾರೆ. ದಂಪತಿಯ ಬ್ಯಾಂಕ್ ಖಾತೆ ಪುಸ್ತಕ ಮತ್ತು ಎಟಿಎಂಗಳನ್ನು ಕಳ್ಳತನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಗುರುತು ಸಿಗಬಾರದು ಎಂದು ಅವರು ಓಡಾಡಿದ್ದ ಮತ್ತು ಮನೆಯಲ್ಲಿ ಚಲ್ಲಾಪಿಲ್ಲಿ ಮಾಡಿದ್ದ ವಸ್ತುಗಳ ಮೇಲೆ ಖಾರದ ಪುಡಿ ಹಾಕುವ ಮೂಲಕ ಸುಳಿವು ಸಿಗದಂತೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತನಿಖಾ ತಂಡವನ್ನು ರಚನೆ ಮಾಡಿದ್ದು, ತಂಡವನ್ನು ಸೋಮವಾರ ತುಮಕೂರಿಗೆ ಕಳಿಸಲಾಗಿತ್ತು. ಅಲ್ಲಿಂದ ಆರೋಪಿ ವಾಪಸ್ ಊರಿಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಆತನ ಇರುವಿಕೆಯನ್ನು ಖಚಿತಪಡಿಸಿಕೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಆತ ಮುಂದಾಗಿದ್ದನು. ಹೀಗಾಗಿ ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಲಾಗಿದೆ. ಪರಿಣಾಮ ಆತನ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಇನ್ನು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಉಳಿದ ಆರೋಪಿಗಳನ್ನು ಕೂಡ ಬಂಧಿಸಿದ್ದು, ಗಾಯಗೊಂಡ ಆರೋಪಿಯನ್ನು ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೃದ್ಧ ದಂಪತಿ ಕೊಲೆ ಪ್ರಕರಣ ತನಿಖೆಗೆ ಪೊಲೀಸರು 4 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು.

ಈ ಕುರಿತಂತೆ ಮಾತನಾಡಿರುವ ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್ ಅವರು ವೃದ್ದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ಮಂಜುಶೆಟ್ಟಿ ಮತ್ತು ಪ್ರಸಾದ್ ಅಲಿಯಾಸ್ ಗುಂಡನ ಬಂಧನ ಮಾಡಲಾಗಿದೆ ಎಂದರು.

ಪ್ರಸಾದ್ ಅಲಿಯಾಸ್ ಗುಂಡ ರೌಡಿಶೀಟರ್ ಆಗಿದ್ದು, ಉಪ್ಪಾರಪೇಟೆ, ಸಂಜಯ್ ನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಲವು ಕೇಸ್ ದಾಖಲಾಗಿವೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬ ಬಗ್ಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ ಪ್ರಕರಣದ ತನಿಖೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಯಾವುದೇ ಭಯಪಡುವ ಅಗತ್ಯವಿಲ್ಲ ಏನಾದರೂ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು. ಈ ಸಂದರ್ಭ ಎಸ್ಪಿ ಶ್ರೀನಿವಾಸ ಗೌಡ, ಎಎಸ್ ಪಿ.ನಂದಿನಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು