News Karnataka Kannada
Wednesday, April 24 2024
Cricket
ಕರ್ನಾಟಕ

ರೈತನ ಕೈಹಿಡಿದ ಸಾಂಪ್ರದಾಯಿಕ ಶೈಲಿಯ ಕೃಷಿ

Photo Credit :

ರೈತನ ಕೈಹಿಡಿದ ಸಾಂಪ್ರದಾಯಿಕ ಶೈಲಿಯ ಕೃಷಿ

ಚಾಮರಾಜನಗರ: ಇವತ್ತಿನ ದಿನಗಳಲ್ಲಿ ಹೆಚ್ಚಿನ ರೈತರು ಏಕಬೆಳೆ ಪದ್ಧತಿಗೆ ಜೋತು ಬಿದ್ದು, ನಷ್ಟ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ದೊಡ್ಡರಾಯಪೇಟೆ ಗ್ರಾಮದ ರೈತ ಮಹದೇವಸ್ವಾಮಿರವರು ಮಿಶ್ರ ಬೇಸಾಯದ ಮೂಲಕ ಕೃಷಿಯಲ್ಲಿಯೂ ಲಾಭದಾಯಕ ಬದುಕನ್ನು ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕೃಷಿಕ ಮಹದೇವಸ್ವಾಮಿರವರು ರೈತ ನೇತಾರ ಪೆÇ್ರ.ಎಂ.ಡಿ.ನಂಜುಂಡಸ್ವಾಮಿರವರ ಅನುಯಾಯಿಗಳು. ತಮಗಿರುವ ಮೂರು ಎಕರೆ ಜಮೀನಿನಲ್ಲಿ ಒಂದೇ ಒಂದು ಬೆಳೆ ಬೆಳೆದರೆ ಅದರಿಂದ ನಷ್ಟವೇ ಜಾಸ್ತಿ ಎಂಬುದನ್ನರಿತು ನೈಸರ್ಗಿಕ ಕೃಷಿಯ ಮೂಲಕ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಭೂಮಿಗೆ ಯಾವುದೇ ರಾಸಾಯನಿಕ ಗೊಬ್ಬರವಾಗಲೀ, ಕ್ರಿಮಿನಾಶಕ ಔಷಧಿಯನ್ನಾಗಲೀ ಸಿಂಪಡಿಸದೇ ತಾವು ಸಾಕಿದ ಹಸುಗಳಿಂದ ತಯಾರಾದ ಗೊಬ್ಬರ ಹಾಗೂ ಗಂಜಲದಿಂದ ಬೆಳೆಗಳಿಗೆ ಸಿಂಪಡಣೆ ಮಾಡಿ, ಆಧುನಿಕ ಉಪಕರಣಗಳ ಗೋಜಿಗೆ ಸಿಲುಕದೇ ಸಾಂಪ್ರದಾಯಿಕ ಶೈಲಿಯಲ್ಲಿ ಕೃಷಿಯನ್ನು ಸುಭಾಷ್ ಪಾಳೇಕಾರ್‍ರವರನ್ನು ಅನುಸರಣೆಯಲ್ಲಿ ಮಾಡುತ್ತಾ ನಷ್ಟದಿಂದ ಮುಕ್ತರಾಗಿದ್ದಾರೆ.

 

ತಮಗಿರುವ ಮೂರು ಎಕರೆ ಜಮೀನಿನಲ್ಲಿ ಏಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳದೆ, ಹತ್ತಾರು ಬಗೆಯ ತರಕಾರಿಗಳು, ಸೊಪ್ಪುಗಳು ಹಾಗೂ ಹಣ್ಣು-ಹಂಪಲುಗಳನ್ನು ನೈಸರ್ಗಿಕವಾಗಿ ಬೆಳೆದು, ತಾವು ಬೆಳೆದಂತಹ ಬೆಳೆಗೆ ಯಾವುದೇ ದಲ್ಲಾಳಿಯ ಮೊರೆ ಹೋಗದೇ ತಮ್ಮ ಜಮೀನಿನ ರಸ್ತೆ ಬದಿಯಲ್ಲಿ ಅಂಗಡಿ ನಿರ್ಮಿಸಿ ಮಾರಾಟ ಮಾಡುವ ಮೂಲಕ ತಾವೇ ಸ್ವತಃ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಇವರು ನೈಸರ್ಗಿಕವಾಗಿ ಸೊಪ್ಪು, ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಬೆಳೆಯುವುದರಿಂದ ಬೇಡಿಕೆಯೂ ಹೆಚ್ಚಾಗುತ್ತಿದೆ.

 

ಜೀವಾಮೃತದಿಂದ ಬೆಳೆದ ಇವರ ಬೆಳೆಗೆ ಇವರು ನಿರೀಕ್ಷಿಸಿದಷ್ಟು ಬೆಂಬಲ ಬೆಲೆ ಸಿಗುತ್ತಿರುವುದರಿಂದ ಲಾಕ್ ಡೌನ್ ಸಮಯದಲ್ಲಿಯೂ ಕೂಡ ಬೇರೆ ರೈತರಂತೆ ಚಿಂತಾಕ್ರಾಂತರಾಗಿ ಕುಳಿತುಕೊಳ್ಳದೇ, ದ್ವಿಗುಣ ಆದಾಯವನ್ನು ಗಳಿಸುವುದರ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆ ನಡೆಸುತ್ತಿದ್ದು, ಹಸುಗಳಿಂದ ಹಾಲಿನ ಮಾರಾಟ ಮಾಡಿ ಅದರಿಂದಲೂ ಆದಾಯ ಗಳಿಸುತ್ತಿದ್ದಾರೆ. ಜತೆಗೆ ತಮ್ಮ ಹಸುಗಳಿಂದ ಉತ್ಪತ್ತಿಯಾಗುವ ಗೊಬ್ಬರ ಹಾಗೂ ಗಂಜಲದಿಂದ ಜೀವಾಮೃತ ತಯಾರಿಸಿ, ಬೆಳೆಗಳಿಗೆ ಕೀಟ ಹಾಗೂ ರೋಗಬಾಧೆ ತಗುಲಿದಾಗ ಜೀವಾಮೃತವನ್ನೇ ಸಿಂಪಡಿಸಿ, ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಇವರ ಭೂಮಿಯು ದಿನೇ ದಿನೇ ಫಲವತ್ತತೆಯ ಹಾದಿಯನ್ನು ಹಿಡಿಯುತ್ತಿದ್ದು, ಬೇರೆ ರೈತರು ನಿಬ್ಬೆರಗಾಗುವಂತೆ ಮಾಡಿದೆ.

 

ಮಳೆಗಾಲದಲ್ಲಿ ಜಮೀನಿನ ನೀರು ಬೇರೆಡೆಗೆ ಹರಿದು ಹೋಗದಂತೆ ಎಚ್ಚರಿಕೆ ವಹಿಸಿರುವ ಇವರು ಜಮೀನಿನ ಸುತ್ತಲೂ ಕಾಲುವೆ ತೋಡಿ ಭೂಮಿಯಲ್ಲಿ ಅಂತರ್ಜಲ ಇಂಗುವಂತೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ತಮ್ಮ ಮೂರು ಎಕರೆ ಜಮೀನಿನಲ್ಲಿ ತೆಂಗು, ಕಬ್ಬು, ಸೀಬೆ, ಉದ್ದು, ಹೆಸರುಕಾಳು, ಅಲಸಂದೆ, ಸೂರ್ಯಕಾಂತಿ, ಸಪೆÇೀಟ, ಪರಂಗಿ, ಮೂಲಂಗಿ, ಬೆಂಡೆಕಾಯಿ, ಇರಳೆಕಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಹೂಕೋಸು, ಗೆಡ್ಡೆಕೋಸು, ಸಬಸಿಗೆಸೊಪ್ಪು, ದಂಟಿನ ಸೊಪ್ಪು, ಕೊತ್ತಂಬರಿಸೊಪ್ಪು, ಪಪ್ಪಾಯಿ, ಹುಣಸೆ ಸೇರಿದಂತೆ ಹತ್ತಾರು ಬಗೆಯ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಸಾವಯವ ಕೃಷಿಯಲ್ಲಿಯೇ ಬೆಳೆದು ಜಮೀನಿನಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

 

ಕಳೆದ ಆರು ವರ್ಷಗಳಿಂದ ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿಕ ಮಹದೇವಸ್ವಾಮಿ ಅವರು, ಈ ಬಾರಿಯ ಲಾಕ್ ಡೌನ್‍ನಲ್ಲಿ ವೇಳೆ ತಿಂಗಳಿಗೆ ಸುಮಾರು ಐವತ್ತು ಸಾವಿರದಷ್ಟು ಆದಾಯ ಪಡೆದಿದ್ದಾರೆ. ಜತೆಗೆ ಈ ಸಂಕಷ್ಟದಿಂದ ಪಾರಾಗಬೇಕಾದರೆ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂಬುದನ್ನು ಕೃಷಿಕ ಮಹದೇವಸ್ವಾಮಿ ಇತರೆ ರೈತರಿಗೆ ತೋರಿಸಿಕೊಟ್ಟಿದ್ದಾರೆ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು