News Karnataka Kannada
Saturday, April 20 2024
Cricket
ಕರ್ನಾಟಕ

ಯಾವುದೇ ತನಿಖೆಗೆ ಸಿದ್ಧ: ನಾರಾಯಣ ಆಚಾರ್ ಕುಟುಂಬ ವರ್ಗ ಸ್ಪಷ್ಟನೆ

Photo Credit :

ಯಾವುದೇ ತನಿಖೆಗೆ ಸಿದ್ಧ: ನಾರಾಯಣ ಆಚಾರ್ ಕುಟುಂಬ ವರ್ಗ ಸ್ಪಷ್ಟನೆ

ಮಡಿಕೇರಿ: ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಮೃತರಾದ ನಾರಾಯಣ ಆಚಾರ್ ಅವರ ಬಗ್ಗೆ ಚಾರಿತ್ರ್ಯ ಹರಣದ ಅಪಪ್ರಚಾರ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿರುವ ಕುಟುಂಬವರ್ಗ, ಯಾವುದೇ ತನಿಖೆಗೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟುಂಬದ ವಕ್ತಾರರಾದ ಜಯಪ್ರಕಾಶ್ ರಾವ್, ತಲಕಾವೇರಿ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ ಆಚಾರ್ ಅವರು, ಯಾವುದೇ ಅಕ್ರಮ ಸಂಪಾದನೆಯನ್ನು ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.

ಮೃತಪಟ್ಟ ಸಂದರ್ಭ ಕುಟುಂಬವರ್ಗಕ್ಕೆ ಧೈರ್ಯ ತುಂಬುವ ಬದಲು ನಾರಾಯಣ ಆಚಾರ್ ಅವರ ತೇಜೋವಧೆಯ ಪ್ರಚಾರಗಳು ನಡೆದವು. ಇದು ಕುಟುಂಬವರ್ಗಕ್ಕೆ ತುಂಬಾ ನೋವನ್ನುಂಟುಮಾಡಿದ್ದು, ಅವರ ಸಂಪಾದನೆಯ ಕುರಿತ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಸುಮಾರು ಮುನ್ನೂರು ವರ್ಷಗಳ ಹಿಂದೆ ಪುತ್ತೂರಿನಲ್ಲಿದ್ದ ಆಚಾರ್ ಅರ್ಚಕ ವೃಂದವನ್ನು ಕೊಡಗಿಗೆ ಕರೆಯಿಸಿ ತಲಕಾವೇರಿಯಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಮಣ್ಣಿನೊಂದಿಗೆ ಮತ್ತು ಜನರೊಂದಿಗೆ ಹೊಂದಿಕೊಂಡು ಬದುಕುತ್ತಿರುವ ಆಚಾರ್ ಕುಟುಂಬ ಎಂದೆಂದಿಗೂ ಪ್ರಾಮಾಣಿಕವಾಗಿದೆ ಎಂದು ಹೇಳಿದರು.

ತಲಕಾವೇರಿಯ ಬೆಟ್ಟ ಸಾಲುಗಳು ಸಮತೋಲನವನ್ನು ಕಳೆದುಕೊಂಡಿರುವುದರಿಂದ ಕುಸಿಯುವ ಕುರಿತು ಸುಮಾರು 2 ವರ್ಷಗಳ ಹಿಂದೆಯೇ ಭೂಗರ್ಭ ಇಲಾಖೆ ಮಾಹಿತಿ ನೀಡಿತ್ತು. ಆದ್ದರಿಂದ ಈ ದುರ್ಘಟನೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅವಲೋಕನ ಮಾಡಬೇಕೇ ಹೊರತು ಬೇರೆ ಯಾವುದೇ ವಿಚಾರ ಬೆರೆಸಬಾರದೆಂದು ಮನವಿ ಮಾಡಿದರು. ಬೆಟ್ಟ ಕುಸಿದ ಘಟನೆಗೆ ಸಂಬಂಧಿಸಿದಂತೆ ಸತ್ಯ ಶೋಧನೆಯ ಮೂಲಕ ನೈಜಾಂಶವನ್ನು ತಿಳಿಯಬೇಕೆಂದು ಜಯಪ್ರಕಾಶ್ ತಿಳಿಸಿದರು.

ಪೂಜೆಯ ಹಕ್ಕು

 ತಲಕಾವೇರಿಯಲ್ಲಿ ಕಳೆದ ಮುನ್ನೂರು ವರ್ಷಗಳಿಂದ ಆಚಾರ್ ಕುಟುಂಬ ವಂಶಪಾರಂಪರ್ಯವಾಗಿ ಪೂಜೆ ನೆರವೇರಿಸುತ್ತಾ ಬಂದಿದ್ದು, ಈ ಸಂಪ್ರದಾಯ ಮುಂದುವರೆಯಬೇಕಾಗಿದೆ. ಆದರೆ, ಇತ್ತೀಚೆಗೆ ಅಮ್ಮ ಕೊಡವರು ತಮಗೆ ಪೂಜೆಯ ಹಕ್ಕು ಬೇಕೆಂದು ಕೇಳಿಕೊಂಡಿದ್ದಾರೆ. ನಾವುಗಳು ಸಂಬಂಧಿಸಿದ ಇಲಾಖೆಯ ಎದುರು ಅಗತ್ಯ ದಾಖಲೆಗಳನ್ನು ಇಡಲು ಸಿದ್ಧರಿದ್ದೇವೆ. ಅದೇ ರೀತಿ ಅಮ್ಮ ಕೊಡವರು ಕೂಡ ದಾಖಲೆಗಳನ್ನು ಒದಗಿಸಿ, ವಿಚಾರ ಮಂಡನೆಗೆ ಮುಂದಾದಲ್ಲಿ ನಾವುಗಳು ವಿನಮ್ರವಾಗಿ ಹಾಜರಾಗುತ್ತೇವೆ. ಈ ವಿಚಾರದಲ್ಲಿ ಆಚಾರ್ ಕಟುಂಬದಿಂದ ಯಾವುದೇ ಪ್ರತಿರೋಧ ಅಥವಾ ಸ್ಪರ್ಧೆ ಇಲ್ಲ. ನಾವು ಇಲ್ಲಿಯವರೆಗೂ ಸ್ಥಳೀಯ ಕೊಡವರು ಮತ್ತು ಅಮ್ಮಕೊಡವರ ಬಗ್ಗೆ ಅತೀವವಾದ ಗೌರವವನ್ನು ಹೊಂದಿರುವವರೇ ಆಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

 ಮುಜರಾಯಿ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಪೂಜೆಯ ಹಕ್ಕಿನ ಕುರಿತು ನೀಡುವ ಅಂತಿಮ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಆದೇಶವನ್ನು ಗೌರವಿಸುತ್ತೇವೆ ಎಂದು ತಿಳಿಸಿದರು.

 ತಲೆತಲಾಂತರಗಳಿಂದ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಸಂದರ್ಭದಲ್ಲಿಯೂ ತಲಕಾವೇರಿಯಲ್ಲಿ ಆಚಾರ್ ಕುಟುಂಬ ಪೂಜೆಯನ್ನು ನೆರವೇರಿಸಿದೆ. ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರಿಗೆ ತಲಕಾವೇರಿಯ ಮೇಲೆ ಭಾವನಾತ್ಮಕ ಸಂಬಂಧವಿತ್ತು. ಅಲ್ಲದೆ, ನನ್ನ ಕೊನೆಯ ಉಸಿರು ಇರುವವರೆಗೂ ಇಲ್ಲೇ ಸೇವೆ ಸಲ್ಲಿಸುವುದಾಗಿ ಅವರು ಹೇಳಿದ್ದರು ಎಂದು ಜಯಪ್ರಕಾಶ್ ವಿವರಿಸಿದರು.

ತಲಕಾವೇರಿ ಕ್ಷೇತ್ರದಲ್ಲಿ ಸರದಿ ಆಧಾರದಲ್ಲಿ ಆಚಾರ್ ಕುಟುಂಬ ಪೂಜೆ ಸಲ್ಲಿಸುತ್ತಾ ಬಂದಿದ್ದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಗುರುರಾಜ್ ಆಚಾರ್ ಮತ್ತು ರವಿರಾಜ್ ಆಚಾರ್ ಹಾಗೂ ನವೆಂಬರ್‍ನಲ್ಲಿ ಜಯರಾಂ ಆಚಾರ್ ಮತ್ತು ಡಿಸೆಂಬರ್‍ನಲ್ಲಿ ಸುಧಾಕರ್ ಆಚಾರ್ ಪೂಜೆ ಸಲ್ಲಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಚಾರ್ ಅರ್ಚಕ ಕುಟುಂಬದ ಸುಧಾಕರ ಆಚಾರ್, ಶ್ರೀಕೃಷ್ಣ ಆಚಾರ್, ಗುರುರಾಜ ಆಚಾರ್, ರವಿರಾಜ್ ಆಚಾರ್ ಹಾಗೂ ರಾಜೇಶ್ ಆಚಾರ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು