News Karnataka Kannada
Saturday, April 20 2024
Cricket
ಕರ್ನಾಟಕ

ಮರೆಯಾಗುತ್ತಿದೆ ಆಟಿ ತಿಂಗಳ ಭತ್ತದ ಕೃಷಿ ಸಂಭ್ರಮ..!

Photo Credit :

ಮರೆಯಾಗುತ್ತಿದೆ ಆಟಿ ತಿಂಗಳ ಭತ್ತದ ಕೃಷಿ ಸಂಭ್ರಮ..!

ಕೊಡಗಿನಲ್ಲಿ ಆಟಿ ತಿಂಗಳೆಂದರೆ ಭತ್ತದ ಕೃಷಿಯ ಕಾಲ. ಈ ಸಮಯದಲ್ಲಿಯೇ ಭತ್ತದ ನಾಟಿಯು ನಡೆಯುತ್ತದೆ. ಸದಾ ಸುರಿಯುವ ಮಳೆ… ಕೊರೆಯುವ ಚಳಿ.. ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯುವುದು ಹಿಂದಿನಿಂದಲೂ ನಡೆದು ಬಂದಿದೆ.

 

ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಆಟಿ(ಕಕ್ಕಡ) ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧವಾಗಿದ್ದು, ಕೃಷಿ ಕೆಲಸಗಳಿಗೆ ಜನ ಹೆಚ್ಚಿನ ಆದ್ಯತೆ ನೀಡುವುದರಿಂದ ಇತರೆ ಎಲ್ಲ ವ್ಯಾಪಾರಗಳು ಕಡಿಮೆಯಾಗುತ್ತವೆ.

 

ಬೇರೆ ಕಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದೇ ಮಳೆಗಾಲದಲ್ಲಿ. ಮಳೆ ಸುರಿದು ಭೂಮಿಯಡಿಯಿಂದ ಜಲ ಹುಟ್ಟಿ ಹರಿದರೆ ಅದರ ನೀರಲ್ಲಿ ಕೃಷಿ ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಹೀಗಾಗಿ ಮಳೆಗಾಲದಲ್ಲಿ ಭತ್ತದ ಪೈರು ಹಾಕಿ ಅದನ್ನು ನಾಟಿ ನೆಡುತ್ತಾರೆ. ಮಳೆ ಕಡಿಮೆಯಾಗಿ ಬಿಸಿಲು ಬರುತ್ತಿದ್ದಂತೆಯೇ ಅಂದರೆ ನವೆಂಬರ್ ಡಿಸೆಂಬರ್ ವೇಳೆಗೆ ಭೂಮಿಯಿಂದ ಉಕ್ಕಿ ಹರಿಯುವ ನೀರು ಕಡಿಮೆಯಾಗುತ್ತದೆ. ಆ ವೇಳೆಗೆ ಭತ್ತದ ಫಸಲು ಕೊಯ್ಲಿಗೆ ಸಿದ್ಧವಾಗುತ್ತದೆ.

 

ನೀರಿನ ಅನುಕೂಲವಿದ್ದ ಪ್ರದೇಶಗಳಲ್ಲಿ ಭತ್ತದ ಗದ್ದೆಯನ್ನು ಹಿಂದಿನವರು ನಿರ್ಮಿಸಿದ್ದರು. ಅವತ್ತಿನ ಕಾಲದಲ್ಲಿ ವಾಣಿಜ್ಯ ಬೆಳೆಗಳ ಭರಾಟೆ ಇರಲಿಲ್ಲ. ದಟ್ಟವಾದ ಮರಕಾಡು ಇದ್ದಿದ್ದರಿಂದ ಅಲ್ಲಿ ಕಾಫಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲೆಡೆಯೂ ಏಲಕ್ಕಿ ತೋಟಗಳು ಇದ್ದವು. ಅವುಗಳಿಗೆ ದಟ್ಟ ಮರಕಾಡು ಜತೆಗೆ ಹೆಚ್ಚಿನ ಮಳೆಯೂ ಏಲಕ್ಕಿಗೆ ಅಗತ್ಯವಿತ್ತು. ಆ ದಿನಗಳಲ್ಲಿ ಏಲಕ್ಕಿ ಕೊಡಗಿನ ಬೆಳೆಗಾರರಿಗೆ ಹಣ ತರುವ ಏಕೈಕ ಬೆಳೆಯಾಗಿತ್ತು.

 

ಪ್ರತಿಯೊಬ್ಬರೂ ಭತ್ತದ ಕೃಷಿ ಮಾಡುತ್ತಿದ್ದರು. ಕೂಡು ಆಳುಗಳಾಗಿ ಒಬ್ಬರಿಗೆ ಮತ್ತೊಬ್ಬರು ಸಹಕರಿಸುತ್ತಾ ಭತ್ತದ ನಾಟಿ ಕೆಲಸವನ್ನು ಮುಗಿಸುತ್ತಿದ್ದರು. ಶ್ರೀಮಂತರು ಮಾತ್ರ ಆಳುಗಳನ್ನಿಟ್ಟು ಕೆಲಸ ಮಾಡಿಸುತ್ತಿದ್ದರು. ಉಳಿದಂತೆ ಸಣ್ಣಪುಟ್ಟ ರೈತರು ಕೂಡು ಆಳುಗಳಾಗಿ ಕೆಲಸ ಮಾಡುತ್ತಾ ಮುಂದುವರೆಯುತ್ತಿದ್ದರಿಂದ ಜತೆಗೆ ಮನೆಯಲ್ಲಿ ಹೆಚ್ಚಿನ ಜನರಿದ್ದುದರಿಂದ ಅವರೆಲ್ಲರೂ ಕೃಷಿ ಕೆಲಸವನ್ನು ಚಿಕ್ಕಂದಿನಿಂದಲೇ ಕೆಲಸವನ್ನು ಮಾಡುತ್ತಿದ್ದರಿಂದ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಜತೆಗೆ ಭತ್ತದ ಕೃಷಿಯನ್ನು ಎಲ್ಲರೂ ಒಟ್ಟಾಗಿ ಸಂತೋಷದಿಂದ ಸಂಭ್ರಮದಿಂದ ಮಾಡುತ್ತಿದ್ದರು.

 

ತಿಂಗಳಾನುಗಟ್ಟಲೆ ಗದ್ದೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರಿಂದ ಹೊರಗಿನ ಸಂಪರ್ಕವೇ ಇರುತ್ತಿರಲಿಲ್ಲ. ಇನ್ನು ಮನರಂಜನೆಯಂತು ಇಲ್ಲವೇ ಇಲ್ಲದಾಗಿತ್ತು. ಹೀಗಾಗಿ ಭತ್ತದ ಗದ್ದೆಯನ್ನೇ ಕ್ರೀಡಾಂಗಣ ಮಾಡಿಕೊಂಡು ನಾಟಿ ಗದ್ದೆಯಲ್ಲಿಯೇ ಓಟವನ್ನೇರ್ಪಡಿಸಿ ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನಕಾಯಿ, ಎಲೆಅಡಿಕೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು.

 

ನಾಟಿಯನ್ನು ಕೂಡ ಗುಂಪು ಗುಂಪಾಗಿ ಮಾಡುತ್ತಿದ್ದರಲ್ಲದೆ, ನಾಟಿಯಲ್ಲಿ ಪ್ರಾಸಬದ್ಧ ಒಯ್ಯ ಹಾಕುವ ಮೂಲಕ ತಮ್ಮ ಆಯಾಸವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಬಯಲುಗಳಲ್ಲಿ ಚಿಕ್ಕ ಗದ್ದೆಗಳಲ್ಲಿ ನಾಟಿಯನ್ನು ಮುಗಿಸಿ ಒಂದು ದೊಡ್ಡಗದ್ದೆಯಲ್ಲಿ ನಾಟಿ ಮಾಡಲಾಗುತ್ತಿತ್ತು. ಅವತ್ತು ಹೆಚ್ಚಿನ ಸಂಖ್ಯೆಯಲ್ಲಿ ನಾಟಿಗೆ ಜನ ಸೇರುತ್ತಿದ್ದರು. ಅದನ್ನು ದೊಡ್ಡನಾಟಿ ಎಂದು ಕರೆಯಲಾಗುತ್ತಿತ್ತು. ಈ ದೊಡ್ಡ ನಾಟಿಯಂದು ಬಾಡೂಟ ಏರ್ಪಡಿಸಲಾಗುತ್ತಿತ್ತು. ಇವತ್ತಿಗೂ ನಾಟಿಯನ್ನು ಹಬ್ಬದಂತೆ ಮಾಡುವುದು ಇಲ್ಲಿನ ವಿಶೇಷವಾಗಿದೆ.

 

ಇದೀಗ ಬದಲಾದ ಕಾಲಮಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಯೇ ಸರಿಯಾಗಿ ಸುರಿಯದಿದ್ದಾಗ ಜನರಿಗೆ ಆಟಿ ತಿಂಗಳ ಮಳೆಗಾಲದ ರೌದ್ರತೆ ಮರೆತು ಹೋಗಿತ್ತು. ಜತೆಗೆ ಲಾಭ ನಷ್ಟಗಳ ಲೆಕ್ಕಾಚಾರದಿಂದಾಗಿ ಭತ್ತದ ಕೃಷಿ ಮಾಡುವುದೇ ಸಮಸ್ಯೆಯಾಗಿ ಜತೆಗೆ ನಷ್ಟವಾಗಿ ಪರಿಣಮಿಸ ತೊಡಗಿತು. ಹೀಗಾಗಿ ಕೆಲವರು ಅವುಗಳನ್ನು ತೋಟವಾಗಿ ಪರಿವರ್ತಿಸಿದರೆ ಮತ್ತೆ ಕೆಲವರು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಿದರು ಮತ್ತೆ ಕೆಲವರು ಕೃಷಿ ಮಾಡದೆ ಪಾಳು ಬಿಟ್ಟರು. ಈಗ ಕೆಲವೇ ಕೆಲವರು ಮಾತ್ರ ಭತ್ತದ ಕೃಷಿಯನ್ನು ಮಾಡುವಂತಾಗಿದೆ. ಇದರಿಂದ ಆಟಿ ತಿಂಗಳ ಆ ಸಂಭ್ರಮ ಸದ್ದಿಲ್ಲದೆ ಮರೆಯಾಗುತ್ತಿರುವುದು ಕಂಡು ಬರುತ್ತಿದೆ.

 

ಭತ್ತದ ಕೃಷಿ ಮೇಲಿನ ಆಸಕ್ತಿ ಕೊಡಗಿನಲ್ಲೀಗ ಇಲ್ಲದಂತಾಗಿದೆ. ಎತ್ತುಗಳ ಬದಲಿಗೆ ಟ್ರ್ಯಾಕ್ಟರ್, ಟಿಲ್ಲರ್ ಬಂದಿವೆ. ಒಂದಷ್ಟು ಬದಲಾವಣೆಗಳ ನಡುವೆ ಕೃಷಿ ಮೊದಲಿನ ವೈಭವ ಕಳೆದು ಕೊಳ್ಳುತ್ತಿದೆ. ಹೀಗಾಗಿ ಆಟಿ ತಿಂಗಳ ಸಂಭ್ರಮವೂ ಇಲ್ಲದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು