News Karnataka Kannada
Thursday, April 25 2024
ಕರ್ನಾಟಕ

ಮತ್ತೆ ಕೃಷಿಯತ್ತ ಚಿತ್ತಹರಿಸಿದ ಯುವಕರು

Photo Credit :

ಮತ್ತೆ ಕೃಷಿಯತ್ತ ಚಿತ್ತಹರಿಸಿದ ಯುವಕರು

ಚಾಮರಾಜನಗರ: ನಗರ ಜೀವನದ ತುಡಿತ, ಗ್ರಾಮೀಣ ಜೀವನದ ಬಗೆಗಿನ ಬೇಸರದಿಂದಾಗಿ ಹಳ್ಳಿ ತೊರೆದು ನಗರ ಪ್ರದೇಶಗಳನ್ನು ಸೇರಿದ್ದ ಯುವ ಜನತೆ, ಇದೀಗ ಮಹಾ ಮಾರಿ ಕರೋನಾದಿಂದಾಗಿ ನಗರ ಪ್ರದೇಶ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲ ಹೆತ್ತವರ ಜತೆ ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಾಣುತ್ತಿವೆ.

ಶಿಕ್ಷಣ ಪಡೆದು ಕೃಷಿ ಜೀವನದಿಂದ ದೂರವಾಗಿ ನಗರ ಸೇರಿ ಅಲ್ಲಿ ಖಾಸಗಿ ನೌಕರಿ ಮಾಡಿಕೊಂಡಿದ್ದ ಬಹಳಷ್ಟು ಮಂದಿ ಈಗ ಕೆಲಸವಿಲ್ಲದ ಕಾರಣ ಪಟ್ಟಣ ಬಿಟ್ಟು ತಮ್ಮ ಊರು ಸೇರಿದ್ದಾರೆ. ಈಗ ಮನೆಯವರೊಂದಿಗೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆಯಷ್ಟೆ ಓದಿದ್ದ ಮತ್ತು ಓದದೆ ಇದ್ದವರೂ ಕೂಡ ಪಟ್ಟಣದತ್ತ ಮುಖ ಮಾಡಿದ್ದರಲ್ಲದೆ, ಅಲ್ಲಿಯೇ ಯಾವುದಾದರೂ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು.

ಯಾವಾಗ ಗ್ರಾಮೀಣ ಮಂದಿ ಪಟ್ಟಣದತ್ತ ಹೋದರೋ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಕಾರ್ಮಿಕರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಕೆಲವರು ಕೃಷಿ ಮಾಡಲಾಗದೆ ಜಮೀನುಗಳನ್ನು ಪಾಳು ಬಿಟ್ಟಿದ್ದರು. ನಗರ ಸೇರಿದ ಮಕ್ಕಳು ಕಳುಹಿಸಿ ಕೊಡುವ ಹಣದಲ್ಲಿ ಜೀವನ ಸಾಗಿಸುವ ಸ್ಥಿತಿಗೂ ಕೆಲವರು ಬಂದಿದ್ದರು.

ಕೊರೋನಾ ಲಾಕ್ ಡೌನ್ ಬಳಿಕ ಬಹುತೇಕ ಮಂದಿ ಪಟ್ಟಣ ತೊರೆದು ಹಳ್ಳಿ ಸೇರಿದ್ದಾರೆ. ಈಗ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಅಪ್ಪ ಅಮ್ಮಂದಿರ ಜತೆ ಸೇರಿ ಕೃಷಿ ಮಾಡುವತ್ತ ಮುಂದಾಗಿದ್ದಾರೆ. ಇನ್ನು ಕೆಲವರು ಕೃಷಿ ಕಾರ್ಯಗಳನ್ನು ನೋಡಿಕೊಳ್ಳುವ ಮೂಲಕ ಹೆತ್ತವರಿಗೆ ಆಸರೆಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ, ಬಾಚಹಳ್ಳಿ ಮಂಗಲ, ಜಕ್ಕಹಳ್ಳಿ, ಕಂದೇಗಾಲ, ಗೋಪಾಲಪುರ, ಕೊಡಸೋಗೆ, ದೇವರಹಳ್ಳಿ, ಹಂಗಳಪುರ, ಶಿವಪುರ ಇನ್ನೂ ಮುಂತಾದ ಯುವಕರು ಬೆಂಗಳೂರು, ಮೈಸೂರು ಮಂಗಳೂರು ಮಂಡ್ಯ ಮುಂಬೈ ಕಡೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೊರೋನಾದಿಂದಾಗಿ ತವರಿನತ್ತ ಮರಳುವುದು ಅನಿವಾರ್ಯವಾದ ಕಾರಣ ತಮ್ಮ ಊರುಗಳಲ್ಲಿದ್ದುಕೊಂಡೇ ಕೃಷಿ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಕಂಡು ಬಂದಿದೆ. ಇದು ಪೋಷಕರಿಗೂ ಸ್ವಲ್ಪ ಮಟ್ಟಿಗೆ ಖುಷಿ ತಂದಿದೆ.

ನಗರಗಳಲ್ಲಿ ಹೋಟೆಲ್ ಹಾಗೂ ಹಲವಾರು ಕಾರ್ಖಾನೆಗಳು ಮುಚ್ಚಿವೆ. ಅವು ಮತ್ತೆ ತೆರೆದರೆ ಬಹುಶಃ ಉದ್ಯೋಗ ಸಿಗಬಹುದೇನೋ? ಆದರೆ ಅದು ಸದ್ಯಕ್ಕಂತು ಇಲ್ಲ. ಹೀಗಾಗಿ ಹಳ್ಳಿ ಸೇರಿರುವರು ಜಮೀನುಗಳಲ್ಲಿ ದುಡಿಯುವುದು ಅನಿವಾರ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು