News Karnataka Kannada
Monday, April 15 2024
Cricket
ಕರ್ನಾಟಕ

ತಲಕಾವೇರಿಗೆ ಕೊಡವ ಸಮಾಜಗಳ ಒಕ್ಕೂಟ ಭೇಟಿ: ರೈಲು ಮಾರ್ಗ, ಹೆದ್ದಾರಿಗಳಿಗೆ ವಿರೋಧ 

Photo Credit :

ತಲಕಾವೇರಿಗೆ ಕೊಡವ ಸಮಾಜಗಳ ಒಕ್ಕೂಟ ಭೇಟಿ: ರೈಲು ಮಾರ್ಗ, ಹೆದ್ದಾರಿಗಳಿಗೆ ವಿರೋಧ 

ಮಡಿಕೇರಿ: ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿದ ತಲಕಾವೇರಿಗೆ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟ ಭೇಟಿ ನೀಡಿ ಪರಿಶೀಲಿಸಿತು. ಮುಂದಿನ ದಿನಗಳಲ್ಲಿ ಈ ರೀತಿಯ ಅನಾಹುತಗಳು ಸಂಭವಿಸಬಾರದೆಂದು ಪ್ರಾರ್ಥಿಸಿ ಒಕ್ಕೂಟದ ಪದಾಧಿಕಾರಿಗಳು ಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಬೆಟ್ಟ ಕುಸಿತದಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರ ನೇತೃತ್ವದಲ್ಲಿ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭ ನಾರಾಯಣ ಆಚಾರ್ ಅವರ ಪುತ್ರಿಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು 2018 ರಿಂದ ನಿರಂತರವಾಗಿ ಕೊಡಗಿನಲ್ಲಿ ಸಂಭವಿಸುತ್ತಿರುವ ಭೂ ಕುಸಿತದಿಂದ ಸಾರ್ವಜನಿಕ ಆಸ್ತಿ-ಪಾಸ್ತಿ, ಕೃಷಿ ಹಾನಿಯಾಗಿದೆ. ಸಾವು ನೋವುಗಳು ಕೂಡ ಸಂಭವಿಸಿದ್ದು, ಜಿಲ್ಲೆಯ ಜನ ಕಳೆದ ಮೂರು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರೈಲು ಮಾರ್ಗ, ಹೆದ್ದಾರಿ ಬೇಡ

ಕೊಡಗಿಗೆ ಪ್ರವಾಸೋದ್ಯಮ, ರೈಲುಮಾರ್ಗ, ಚತುಷ್ಪಥ ಇಲ್ಲವೆ ಆರು ಲೇನ್ ರಸ್ತೆಯ ಅಗತ್ಯವಿಲ್ಲ. ಬದಲಾಗಿ ಕೊಡಗಿನ ಮುಖ್ಯ ಸಮಸ್ಯೆಗಳಾದ ರೈತರು ಬೆಳೆಯುವ ಕಾಫಿ, ಭತ್ತ ಕರಿ ಮೆಣಸು, ಅಡಿಕೆ, ಏಲಕ್ಕಿ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆ, ರಸಗೊಬ್ಬರಕ್ಕೆ ಸಹಾಯಧನ ದೊರೆಯಬೇಕು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಮಾಡಿ ಸರ್ವಋತುಗಳಿಗೆ ಹೊಂದುವಂತಹ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳ ದುರಸ್ತಿ, ಮಕ್ಕಳಿಗೆ ಗುಣಮಟ್ಟ ಶಿಕ್ಷಣ, ರೋಗಿಗಳಿಗೆ ಉತ್ತಮ ಚಿಕಿತ್ಸೆ, ವೃದ್ಧರಿಗೆ ಮಾಸಿಕ ವೇತನ, ವಿಧವಾ ವೇತನ, ಬಡವರಿಗೆ ವಾಸದ ಮನೆ, ದಿನದ 24 ಗಂಟೆ ತಡೆ ರಹಿತ ವಿದ್ಯುಚ್ಛಕ್ತಿಯನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.

ವನ್ಯ ಜೀವಿಗಳ ಹಾವಳಿ ತಡೆಯಲು ರೈಲು ಕಂಬಿಯ ಬ್ಯಾರಿಕೇಡ್ ಹಾಗೂ ಸೋಲಾರ್ ಬೇಲಿ ನಿರ್ಮಾಣ ಮಾಡಿ, ಆನೆ, ಹುಲಿ, ಕಾಡು ಕೋಣ ಮತ್ತು ಕಾಡುಹಂದಿ ಸೇರಿದಂತೆ ವನ್ಯಜೀವಿಗಳಿಂದ ಕೊಡಗಿನ ಜನರನ್ನು ರಕ್ಷಿಸಬೇಕಾಗಿದೆ ಎಂದರು.

ಕೊಡವರ ಕುಲದೇವಿ ಕಾವೇರಿಯ ಸಂಕ್ರಮಣದ ದಿನ ಕಾವೇರಿ ಮಾತೆಯ ಕಣಿ ಪೂಜೆ, ಹುಟ್ಟಿದ ಮಕ್ಕಳ ಮೊದಲ ತಲೆ ಮುಡಿ ನೀಡುವುದು, ನವವಿವಾಹಿತ ದಂಪತಿಗಳು ಕಾವೇರಿ ತೀರ್ಥ ಸ್ನಾನ ಮಾಡುವುದು, ಮರಣಾ ನಂತರ ಪಿಂಡ ಪ್ರದಾನ ಮಾಡುವುದು ಎಲ್ಲವೂ ಕೊಡವರು ತಲಕಾವೇರಿ ಕ್ಷೇತ್ರದೊಂದಿಗೆ ಹೊಂದಿರುವ ಭಾವನಾತ್ಮಕ ಮತ್ತು ಧಾರ್ಮಿಕ ನಂಬಿಕೆಯಾಗಿದೆ. ಕಾವೇರಿ ನದಿಯಾಗಿ ಹರಿಯುವ ಮೊದಲೇ ಕೊಡವರು ಕೊಡಗಿನಲ್ಲಿ ನೆಲೆಸಿದ್ದರು ಎನ್ನುವುದಕ್ಕೆ ಅಗಸ್ತ್ಯ ಮುನಿಗಳಿಂದ ಬೇರ್ಪಟ್ಟ ಮಾತೆ ಕಾವೇರಿಯನ್ನು ಬಲಮುರಿಯಲ್ಲಿ ಕೊಡವ ನಾರಿಯರು ತಡೆದಿರುವುದೇ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ತಲಕಾವೇರಿ ಕ್ಷೇತ್ರ ಪುಣ್ಯ ತೀರ್ಥಕ್ಷೇತ್ರವಾಗಿ ಉಳಿಯಬೇಕೆ ಹೊರತು ಪ್ರವಾಸಿ ತಾಣವಾಗಬಾರದು. ಪ್ರವಾಸಿಗಳ ಮೋಜು ಮಸ್ತಿಗೆ ಅವಕಾಶ ನೀಡದೆ, ಭಕ್ತಾಧಿಗಳ ದಿವ್ಯ ತೀರ್ಥ ಕ್ಷೇತ್ರವಾಗಬೇಕು. ಅಲ್ಲದೆ ಜಾತ್ರಾ ಮಹೋತ್ಸವದ ಸಂದರ್ಭ ಸ್ಥಳೀಯರಿಗೆ (ಕೊಡಗಿನ ಮೂಲ ನಿವಾಸಿಗಳಿಗೆ) ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ರಾಜಕೀಯ ರಹಿತವಾಗಿ ಜಾತಿ, ಮತ, ಧರ್ಮ, ಭೇದವನ್ನು ಮೆಟ್ಟಿ ನಿಂತು, ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದ ವಿಷ್ಣು ಕಾರ್ಯಪ್ಪ ಅವರು, ಕ್ಷೇತ್ರದ ಬಗ್ಗೆ ಆಕ್ಷೇಪ, ಅಪಸ್ವರಗಳು ಸರಿಯಲ್ಲವೆಂದರು.

ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೊಳಂಡ ಮುನುಮುತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚಿರಾಣಿಯಂಡ ದಿನೇಶ್ ಗಣಪತಿ, ಚೇಯಂಡಣೆ ಕೊಡವ ಸಮಾಜದ ಅಧ್ಯಕ್ಷ ಮುಂಡ್ಯೂಳಂಡ ಬಿದ್ದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನುಪ್ ಉತ್ತಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಜಯ ದೇವಯ್ಯ, ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಸಂಘದ ಅಧ್ಯಕ್ಷ ಕನ್ನಂಡ ಕವಿತ ಬೊಳ್ಳಪ್ಪ ಪ್ರಮುಖರಾದ ಬೊಳ್ಳಜಿರ ಬಿ.ಅಯ್ಯಪ್ಪ, ಚೆಪ್ಪುಡಿರ ರಾಕೇಶ್ ದೇವಯ್ಯ, ಕೋಟೆರ ರಘು ಸೇರಿದಂತೆ ಎಲ್ಲಾ ಕೊಡವ ಸಮಾಜಗಳ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು