News Karnataka Kannada
Thursday, April 18 2024
Cricket
ಕರ್ನಾಟಕ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ‌ ಸಾವಿನ ಸಂಖ್ಯೆ

Photo Credit :

ಚಾಮರಾಜನಗರ ಜಿಲ್ಲೆಯಲ್ಲಿ  ಹೆಚ್ಚುತ್ತಿರುವ ‌ ಸಾವಿನ ಸಂಖ್ಯೆ

ಚಾಮರಾಜನಗರ: ಮೇ 2ರ ದುರಂತದಿಂದಾಗಿ ತೀವ್ರ ಆತಂಕಕ್ಕೆ ಒಳಗಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ 20 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 910 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.ಮೇ 4ರಂದು 8, 5ರಂದು 8, 6ರಂದು 14, 7ರಂದು 9, 8ರಂದು 5 ಹಾಗೂ 9ರಂದು ಸಂಜೆ 6 ಗಂಟೆವರೆಗೆ 20 ಮಂದಿ ಮೃತಪಟ್ಟಿದ್ದಾರೆ. ಮೇ 2ರಂದು ಆಮ್ಲಜನಕದ ವ್ಯತ್ಯಯ ಹಾಗೂ ಇನ್ನಿತರ ಕಾರಣಗಳಿಂದ 24 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದ ಹಿಡಿದು ಇಲ್ಲಿವರೆಗೆ ಒಟ್ಟು 88 ಮಂದಿ ಮೃತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
ಮೃತರ ಪೈಕಿ ಜಿಲ್ಲೆಯ ಅಮಚವಾಡಿ ಗ್ರಾಮದ ತಂದೆ ಮತ್ತು ಮಗ ಸೇರಿದ್ದಾರೆ. ಮತ್ತೊಬ್ಬ ಪುತ್ರ ಮೈಸೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಸಂಜೀವ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಈ ಕುರಿತು ನನಗೇನೂ ಗೊತ್ತಿಲ್ಲ’ ಎಂದಷ್ಟೇ ಹೇಳಿ ಕರೆ ಮೊಟಕುಗೊಳಿಸಿದರು. ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ರೋಗ ಉಲ್ಬಣಗೊಂಡ ನಂತರ ಕೊನೆಯ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಿರುವುದು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣ. ಜತೆಗೆ, ಆಸ್ಪತ್ರೆಯ ಮೇಲೂ ಅಧಿಕ ಒತ್ತಡ ಇದೆ’ ಎಂದರು.
‘ಸಾವಿನ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಆಮ್ಲಜನಕದ ಕೊರತೆ ಕಾರಣ ಅಲ್ಲ’ ಎಂದು ಆಮ್ಲಜನಕ ಸರಬರಾಜು ವಿಭಾಗದ ನೋಡೆಲ್‌ ಅಧಿಕಾರಿ ಡಿಸಿಎಫ್ ಏಡುಕುಂಡಲು ತಿಳಿಸಿದರು. ‘ಆಮ್ಲಜನಕದ ಸಂಗ್ರಹ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ 4.5 ಕೆ.ಎಲ್‌ ಆಮ್ಲಜನಕ ಬೇಕಿದೆ. 400 ಆಮ್ಲಜನಕದ ಸಿಲಿಂಡರ್‌ಗಳೂ ಇವೆ. ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಸಾಕಾಗುತ್ತದೆ’ ಎಂದರು.ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 14 ಮಂದಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ವ್ಯಾಪಾರಸ್ಥರು ಪೊಲೀಸರ ಸೂಚನೆಗೂ ಕಾಯದೆ ಸ್ವಯಂಪ್ರೇರಿತರಾಗಿ ಭಾನುವಾರ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದರು. ಶುಕ್ರವಾರವಷ್ಟೇ ಆರೋಗ್ಯ ಇಲಾಖೆಯ ಪರಿಣತರ ತಂಡವೊಂದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಾವಿನ ಕುರಿತು ಪರಿಶೀಲನೆ ನಡೆಸಿತ್ತು. ಹೊಸ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿದೆ. ಮೇ 4ರಿಂದ 9 ರವರೆಗೆ 16 ಮಂದಿಯಷ್ಟೇ ಪಟ್ಟಣ ಪ್ರದೇಶದವರು ಮೃತಪಟ್ಟಿದ್ದರೆ, 42 ಮಂದಿ ಗ್ರಾಮೀಣ ಪ್ರದೇಶದವರು ಸಾವಿಗೀಡಾಗಿದ್ದಾರೆ. ಪಟ್ಟಣ ಪ್ರದೇಶದ 723 ಹಾಗೂ ಗ್ರಾಮೀಣ ಪ್ರದೇಶದ 3,237 ಮಂದಿಗೆ ಸೋಂಕು ತಗುಲಿದೆ.
‘ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಅವರನ್ನು ಪರೀಕ್ಷೆಗೆ ಯಾರೂ ಕರೆದುಕೊಂಡು ಹೋಗುವುದಿಲ್ಲ. ಗಂಭೀರವಾಸ್ಥೆ ತಲುಪಿದಾಗ ಮಾತ್ರವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು