News Karnataka Kannada
Saturday, April 13 2024
Cricket
ಕರ್ನಾಟಕ

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಮುಕ್ತ ಗ್ರಾಮ ಆಂದೋಲನ

Photo Credit :

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಮುಕ್ತ ಗ್ರಾಮ ಆಂದೋಲನ

ಚಾಮರಾಜನಗರ: ಜಿಲ್ಲೆಯಲ್ಲಿ ‘ಕೊರೊನಾ ಮುಕ್ತ ಗ್ರಾಮ’ ಅಭಿಯಾನ ಆರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೃಹತ್ ಆಂದೋಲನ ರೂಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿರುವ ಕೊರೊನಾವನ್ನು ನಿಯಂತ್ರಿಸುವ ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಸದಸ್ಯರಿಗೆ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ ಹೊಸದಾಗಿ ಸೋಂಕಿತರಾದರೆ ಅಥವಾ ಹೊರಗಿನಿಂದ ಸೋಂಕಿತರು ಬಂದರೆ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಬೇಕು ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಕೊರೋನ ನಿಯಂತ್ರಣಕ್ಕೆ ಲಕ್ಷಣ ಕಾಣಿಸಿಕೊಂಡ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು. ನಂತರ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು. ಕೊನೆಯದಾಗಿ ಹಾಗೂ ಅತಿ ಮುಖ್ಯವಾಗಿ ಧೈರ್ಯವಾಗಿರುವುದು. ಈ ಮೂರು ಅಂಶಗಳನ್ನು ಎಲ್ಲರೂ ಪಾಲಿಸಿದರೆ, ಕೊರೊನಾ ವಿರುದ್ಧ ಜಯ ಖಚಿತ ಎಂದರು.
ಈಗ ರೋಗಿಗಳು ಉಸಿರಾಟದ ಸಮಸ್ಯೆ ಬಂದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಅವರ ಚೇತರಿಕೆಯ ಅವಧಿಯೂ ಹೆಚ್ಚಾಗಲಿದೆ. ಒಂದು ವೇಳೆ ತೀವ್ರ ನಿಗಾ ಘಟಕಕ್ಕೆ ಹೋದರೆ ಅವರ ಮನೋಬಲವೇ ಕುಂದುತ್ತದೆ. ವಾಪಸ್ ಬದುಕಿ ಬರುವುದು ಸಾಧ್ಯವೇ ಇಲ್ಲ ಎಂದು ಯೋಚಿಸುತ್ತಾರೆ. ಆದರೆ, ಕೊರೊನಾ ಸೋಂಕಿನಿಂದ ಮರಣ ಪ್ರಮಾಣ ತೀರಾ ಅತ್ಯಲ್ಪ. ಗುಣಮುಖರಾದವರ ಸಂಖ್ಯೆ ಬಹಳ ಹೆಚ್ಚಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ಆಶಾ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನೆಮನೆಗೆ ಹೋಗಿ ತಪಾಸಣೆ ನಡೆಸುವ ವೇಳೆ ಅವರಿಗೆ ಬೆದರಿಕೆ ಒಡ್ಡಿರುವ ಘಟನೆಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನು ಮುಂದೆ ಆಶಾ ಕಾರ್ಯಕರ್ತೆಯರಿಗೆ ಗೃಹರಕ್ಷಕರು ಹಾಗೂ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಅವರಿಂದ ಭದ್ರತೆ ಒದಗಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕೋವಿಡ್‌ ಕೇರ್ ಕೇಂದ್ರಗಳಲ್ಲಿ 2,006 ಬೆಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೇವಲ 400 ಮಂದಿ ಮಾತ್ರವೇ ದಾಖಲಾಗಿದ್ದಾರೆ. 3,242 ಮಂದಿ ಹೋಂ ಐಸೋಲೇ ಷನ್‌ನಲ್ಲಿಯೇ ಇದ್ದಾರೆ ಎಂದು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ಮನೆಯಲ್ಲಿ ಹೋಂ ಐಸೋಲೇಷನ್‌ಗೆ ಅಗತ್ಯ ಸೌಲಭ್ಯ ಇಲ್ಲದವರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ಸೇರಿಸಲು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿ, ಸಿಡಿಪಿಒ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರದ ಒಳಗೆ ಅವರು ಈ ಕಾರ್ಯ ನೆರವೇರಿಸಬೇಕು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು