News Karnataka Kannada
Sunday, April 21 2024
Cricket
ಕರ್ನಾಟಕ

ಗುಡ್ಡ ಕುಸಿತ: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಸೇರಿ ಐವರು ದುರ್ಮರಣ

Photo Credit :

ಗುಡ್ಡ ಕುಸಿತ: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಸೇರಿ ಐವರು ದುರ್ಮರಣ

ಮಡಿಕೇರಿ: ಬಿರುಗಾಳಿ ಸಹಿತ ಮಹಾಮಳೆಗೆ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ (80) ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ತಲಕಾವೇರಿ ದೇವಸ್ಥಾನದ ಅರ್ಚಕರುಗಳ ಎರಡು ಮನೆಗಳ ಮೇಲೆ ಬೆಟ್ಟವೇ ಜಾರಿ ಬಂದಿದ್ದು, ಪ್ರವಾಹದ ರೀತಿ ಹರಿದ ನೀರು, ಮಣ್ಣು ಹಾಗೂ ಬಿದ್ದ ಮರಗಳ ರಭಸಕ್ಕೆ ಮನೆಗಳ ಸಹಿತ ವ್ಯಕ್ತಿಗಳು ಮತ್ತು ಎಲ್ಲಾ ಪರಿಕರಗಳು ನಾಪತ್ತೆಯಾಗಿವೆ. ದುರಂತ ನಡೆದ ಪ್ರದೇಶದಲ್ಲಿ ಮನೆಗಳಿದ್ದ ಕುರುಹುಗಳೇ ಇಲ್ಲದಾಗಿದೆ.

ನಾರಾಯಣ ಆಚಾರ್ ಅವರ ಪತ್ನಿ ಶಾಂತ (70), ಸಹೋದರ ಆನಂದತೀರ್ಥ ಸ್ವಾಮಿ (86), ಸಹಾಯಕ ಅರ್ಚಕರಾದ ಕಾಸರಗೋಡಿನ ಮುಳ್ಳೇರಿಯಾದ ಶ್ರೀನಿವಾಸ ಪಡಿಲಾಯ (36) ಹಾಗೂ ಬಿ.ಸಿ.ರೋಡ್‍ನ ರವಿಕಿರಣ್ (29) ಮೃತ ದುರ್ದೈವಿಗಳು. ಸಹಾಯಕ ಅರ್ಚಕರಿಬ್ಬರೂ ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಊರುಗಳಿಂದ ತಲಕಾವೇರಿಗೆ ಬಂದಿದ್ದರು. ಇವರಿಬ್ಬರೂ ಅವಿವಾಹಿತರಾಗಿದ್ದಾರೆ.

ನಾರಾಯಣ ಆಚಾರ್ ಅವರಿಗೆ ಇಬ್ಬರು ಪುತ್ರಿಯರಿದ್ದು, ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಘಟನೆ ಸಂದರ್ಭ ಹಸುಗಳು ಹಾಗೂ ಕೆಲವು ವಾಹಗಳು ಕೂಡ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಐವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‍ಡಿಆರ್‍ಎಫ್ ತಂಡದ ಮೂಲಕ ಪತ್ತೆ ಕಾರ್ಯಾಚರಣೆ ನಡೆಸಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಮತ್ತು ದುರಂತ ನಡೆದ ಪ್ರದೇಶದಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜೆಸಿಬಿ ಯಂತ್ರವನ್ನು ತರಲು ಭಾಗಮಂಡಲ ರಸ್ತೆಯುದ್ದಕ್ಕೂ ಬಿದ್ದಿರುವ ಮಣ್ಣಿನ ರಾಶಿ ಅಡ್ಡಿಯಾಗಿದೆ. ಅಲ್ಲದೆ ಭಾಗಮಂಡಲದಲ್ಲಿ ಕಾವೇರಿ ನದಿ ನೀರು ಪ್ರವಾಹದ ರೂಪದಲ್ಲಿ ರಸ್ತೆಯನ್ನು ಆವರಿಸಿದ್ದು, ವಾಹನಗಳ ಸಂಚಾರ ಕಷ್ಟ ಸಾಧ್ಯವಾಗಿದೆ.

ಶುಕ್ರವಾರ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಯಾವುದೇ ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ, ಲೋಕೋಪಯೋಗಿ ಇಲಾಖೆ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ.ಬೋಪಯ್ಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈ ಹಿಂದೆ ಮನವಿ ಮಾಡಿಕೊಂಡರೂ ಕಾವೇರಮ್ಮನ ಸನ್ನಿಧಿಯಲ್ಲೇ ಇರುವುದಾಗಿ ತಿಳಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು