News Karnataka Kannada
Thursday, April 25 2024
Cricket
ಕರ್ನಾಟಕ

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಚಿತ್ತ

Photo Credit :

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಚಿತ್ತ

ಗುಂಡ್ಲುಪೇಟೆ: ಇದುವರೆಗೆ ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದ ಪೋಷಕರು ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಖಾಸಗಿ ಶಾಲೆಬಿಟ್ಟು ಸರ್ಕಾರಿ ಶಾಲೆಯತ್ತ ಮುಖ ಮಾಡಿರುವುದು ಬೆಳಕಿಗೆ ಬಂದಿದೆ.

ತಾವು ಕಷ್ಟಪಟ್ಟರೂ ಪರ್ವಾಗಿಲ್ಲ ಮಕ್ಕಳು ಒಳ್ಳೆ ಶಾಲೆಯಲ್ಲಿ ಓದಲಿ ಕಾರಣಕ್ಕೆ ಕೂಲಿ ಮಾಡಿಯಾದರೂ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸಿ ಓದಿಸಿದ್ದರು. ಆದರೆ ಈ ಬಾರಿ ಕೊರೋನಾದಿಂದಾಗಿ ಯಾವುದೇ ರೀತಿಯ ಉದ್ಯೋಗ ಮಾಡಲು ಸಾಧ್ಯವಾಗದೆ ಜನ ಸಂಕಷ್ಟಪಡುವಂತಾಗಿದ್ದು, ಮೂರು ಹೊತ್ತು ಊಟ ಮಾಡುವುದೇ ಕಷ್ಟವಾಗಿದೆ. ಹೀಗಿರುವಾಗ ಖಾಸಗಿ ಶಾಲೆಗೆ ಹಣವನ್ನು ಕಟ್ಟುವುದಾದರೂ ಎಲ್ಲಿಂದ? ಆದ್ದರಿಂದ ಹೆಚ್ಚಿನವರು ಖಾಸಗಿ ಶಾಲೆಯಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುತ್ತಿರುವುದು ಕಂಡು ಬಂದಿದೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇದುವರೆಗೆ ಸುಮಾರು 137ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು, ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಖಾಸಗಿ ಶಾಲೆಗಳತ್ತ ವಾಲಿದ್ದರು. ಅವರನ್ನು ತರಗತಿಗೆ ಕರೆ ತರಲು ಖಾಸಗಿ ಶಾಲೆಗಳಿಂದ ಹಳ್ಳಿಹಳ್ಳಿಗಳಿಗೆ ವಾಹನಗಳ ಸೌಲಭ್ಯ ಮಾಡಿಕೊಡಲಾಗಿತ್ತು. ದುಡಿಮೆ ಚೆನ್ನಾಗಿದ್ದುದರಿಂದ ಪೋಷಕರಿಗೆ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವುದು ಕಷ್ಟವಾಗಿರಲಿಲ್ಲ. ಆದರೆ ಈಗ ಕಷ್ಟವಾಗುತ್ತಿದ್ದು ಖಾಸಗಿ ಶಾಲೆಗಳು ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿದ್ದು, ಹಣ ಕಟ್ಟಲು ಸಾಧ್ಯವಾಗದ ಕೆಲವು ಪೋಷಕರು ಮಕ್ಕಳ ವರ್ಗಾವಣೆ ಪತ್ರಕೊಡಿ ಸರ್ಕಾರಿ ಶಾಲೆಗೆ ಸೇರಿಸುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನೊಂದೆಡೆ ಖಾಸಗಿ ಶಾಲೆಗಳು ಆನ್‍ಲೈನ್ ತರಗತಿಗಳನ್ನು ಆರಂಭಿಸಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮರ್ಪಕವಾಗಿ ಸಿಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳು ನೆಟ್‍ವರ್ಕ್ ಹುಡುಕುತ್ತಾ ಗುಡ್ಡಬೆಟ್ಟಗಳಲ್ಲಿ ಅಲೆದಾಡುವಂತಾಗಿದೆ. ಕೆಲವು ಪಾಲಕರಿಗೆ ಮಕ್ಕಳಿಗೆ ಟ್ಯಾಬ್, ಮೊಬೈಲ್‍ಗಳನ್ನು ಕೊಡಿಸುವುದು ಪೋಷಕರಿಗೆ ಕಷ್ಟವಾಗಿದೆ. ಆದರೆ, ಸರ್ಕಾರಿ ಶಾಲೆಗಳು ವಿದ್ಯಾಗಮ ಎಂಬ ವಿನೂತನ ಯೋಜನೆ ಆರಂಭಿಸಿದೆ. ಶಿಕ್ಷಕರು ವಿದ್ಯಾರ್ಥಿಗಳಿದ್ದಲ್ಲಿಗೆ ತೆರಳಿ ಪಾಠ ಹೇಳುತ್ತಿದ್ದಾರೆ ಇದು ಸರ್ಕಾರಿ ಶಾಲೆಯತ್ತ ವಿದ್ಯಾರ್ಥಿಗಳು ಮುಖ ಮಾಡಲು ಕಾರಣವಾಗಿದೆ.

ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದ್ದವು. ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಕಡಿಮೆಯಾಗುತ್ತಿತ್ತು. ಇದರಿಂದ ಕೆಲವು ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದ್ದರೆ ಮತ್ತೆ ಕೆಲವು ಶಾಲೆಗಳನ್ನು ವಿಲೀನಗೊಳಿಸಲಾಗಿತ್ತು. ಆದರೆ ಈ ಬಾರಿ ಸರ್ಕಾರಿ ಶಾಲೆಯತ್ತ ವಿದ್ಯಾರ್ಥಿಗಳು ಬರುತ್ತಿರುವುದು ಶಿಕ್ಷಣ ಇಲಾಖೆಯಲ್ಲಿ ಭರವಸೆ ಮೂಡಿಸಿದೆ ಎಂದರೆ ತಪ್ಪಾಗಲಾರದು. ಮುಂದಿನ ಬೆಳವಣಿಗೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು