News Karnataka Kannada
Monday, April 22 2024
Cricket
ಕರ್ನಾಟಕ

ಗುಂಡ್ಲುಪೇಟೆಯಲ್ಲಿ ಚಿರತೆ ಸೆರೆಗೆ ಬೋನ್ ಅಳವಡಿಕೆ

Photo Credit :

ಗುಂಡ್ಲುಪೇಟೆಯಲ್ಲಿ ಚಿರತೆ ಸೆರೆಗೆ ಬೋನ್ ಅಳವಡಿಕೆ

ಚಾಮರಾಜನಗರ: ಜಿಲ್ಲೆಯಾದ್ಯಂತ ಕಾಡಂಚಿನ ಗ್ರಾಮ, ಪಟ್ಟಣಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕೆಲವೊಂದನ್ನು ಸೆರೆ ಹಿಡಿದು ಕಾಡಿಗೆ ಬಿಡುತ್ತಿದ್ದರೂ ಉಪದ್ರವ ಮಾತ್ರ ಕಡಿಮೆಯಾಗಿಲ್ಲ. ಇದೀಗ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿಯೇ ಚಿರತೆ ಕಾಣಿಸಿಕೊಳ್ಳುವ ಮೂಲಕ ಜನರನ್ನು ಭಯಭೀತಗೊಳಿಸಿದೆ.

ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಿರುವ ವ್ಯಾಪ್ತಿಯ ಮಹದೇವಪ್ರಸಾದ್ ಬಡಾವಣೆ, ಜಾಕೀರಹುಸೇನ್ ಬಡಾವಣೆಯಲ್ಲಿ ಐದು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ. ಸಮೀಪದ ಅರಣ್ಯದಿಂದ ಆಹಾರ ಅರಸಿ ಬರುತ್ತಿರುವ ಚಿರತೆ ಬೀದಿ ನಾಯಿಗಳನ್ನು ಟಾರ್ಗೆಟ್ ಮಾಡುತ್ತಿವೆ. ಚಿರತೆಗಳನ್ನು ಬಡಾವಣೆಯಲ್ಲಿ ನೋಡಿದ ಜನ ಭಯಗೊಂಡಿದ್ದಾರೆ.

ಇಲ್ಲಿ ಸಾರ್ವಜನಿಕ ಆಸ್ಪತ್ರೆಯಿದ್ದು, ಜನ ಓಡಾಡುತ್ತಿರುತ್ತಾರೆ. ಹೀಗಿರುವಾಗ ಚಿರತೆ ದಾಳಿ ಮಾಡಿದರೆ ಎಂಬ ಭಯ ಜನರದ್ದಾಗಿದೆ. ಈಗಾಗಲೇ ಜಾಕೀರ್ ಹುಸೇನ್ ಬಡಾವಣೆಯಲ್ಲಿ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಚಿರತೆ ಬೀದಿ ನಾಯಿಗಳನ್ನು ಬೇಟೆಯಾಡಿ ಹೊತ್ತೊಯ್ಯುತ್ತಿದೆ. ಮುಂದಿನ ದಿನಗಳಲ್ಲಿ ಜನರ ಮೇಲೆ ದಾಳಿ ಮಾಡಿದರೆ ಎಂಬ ಭಯದಲ್ಲಿರುವ ಜನ ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಜನರ ಒತ್ತಾಯದ ಮೇರೆಗೆ ಸ್ಥಳಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಿರತೆ ಬೋನಿಗೆ ಬೀಳುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು