News Karnataka Kannada
Saturday, April 13 2024
Cricket
ಕರ್ನಾಟಕ

ಗಾರ್ಮೆಂಟ್ಸ್ ನಲ್ಲಿ ಮಹಿಳಾ ಕಾರ್ಮಿಕರಿಗೆ ಕಿರುಕುಳ ಆರೋಪ

Photo Credit :

ಗಾರ್ಮೆಂಟ್ಸ್ ನಲ್ಲಿ ಮಹಿಳಾ ಕಾರ್ಮಿಕರಿಗೆ ಕಿರುಕುಳ ಆರೋಪ

ಕೆ.ಆರ್.ಪೇಟೆ: ತಾಲೂಕಿನ ಅಗಸರಹಳ್ಳಿ-ಹಾದನೂರು ಸಮೀಪ ಸ್ಥಾಪನೆಯಾಗಿರುವ ಗಾರ್ಮೆಂಟ್ಸ್‍ನಲ್ಲಿ ಮಹಿಳಾ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎನ್ನಲಾಗಿದ್ದು, ಇದರಿಂದ ನೊಂದ ನೂರಾರು ಮಹಿಳಾ ಕಾರ್ಮಿಕರು ಕೆಲಸವನ್ನು ಬಿಟ್ಟಿದ್ದು, ಇದೀಗ ನೊಂದ ಕೆಲವರು ದೌರ್ಜನ್ಯದ ಬಗ್ಗೆ ಮಹಿಳಾ ಆಯೋಗ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

 

ಅಗಸರಹಳ್ಳಿ-ಹಾದನೂರು ಬಳಿ ಸ್ಥಾಪನೆಯಾಗಿರುವ ಗಾರ್ಮೆಂಟ್ಸ್‍ನಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದು, ಇಲ್ಲಿ ಮಹಿಳೆಯರಿಗೆ ದೌರ್ಜನ್ಯ ನಡೆಸಲು ಆರಂಭಿಸಿದ್ದರಿಂದ ಹಲವರು ಕೆಲಸ ಬಿಟ್ಟಿದ್ದರು. ಪುರುಷರೇ ಮೇಲ್ವಿಚಾರಕರಾಗಿದ್ದು, ಕೆಲಸಕ್ಕೆ ಬರುವ ಮಹಿಳಾ ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸುವುದು, ಕಿರುಕುಳ ನೀಡುವುದು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಕಿರುಕುಳ ತಡೆಯಲಾರದೆ ಕೆಲಸ ಬಿಟ್ಟು ಹೋಗಿದ್ದರೆ ಮತ್ತೆ ಕೆಲವರು ಬೇರೆ ಮಾರ್ಗವಿಲ್ಲದೆ ಕಿರುಕುಳ ಸಹಿಸಿಕೊಂಡೇ ಬಂದಿದ್ದರು. ಆದರೆ ಇದೀಗ ನೊಂದ ಮಹಿಳೆಯರು ಕಾರ್ಮಿಕ ಇಲಾಖೆ, ಮಹಿಳಾ ಆಯೋಗ ಮತ್ತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಈ ನಡುವೆ ಗಾರ್ಮೆಂಟ್ಸ್‍ನಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದೂರು ನೀಡಿರುವುದರಿಂದ ಕಾರ್ಮಿಕರ ಸಭೆ ನಡೆಸಿ ಹಾಲಿ ಕೆಲಸಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಇಲ್ಲಿ ನಡೆಯುವ ಯಾವುದೇ ವಿಷಯವನ್ನು ಬಹಿರಂಗ ಪಡಿಸಬಾರದು ಒಂದು ವೇಳೆ ಹೊರಗೆ ತಿಳಿಸಿದರೆ ಕ್ರಮತೆಗೆದುಕೊಳ್ಳುವ ಜೊತೆಗೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

 

ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಪುರುಷರನ್ನು ಮೇಲ್ವಿಚಾರಕರನ್ನಾಗಿ ನೇಮಕಮಾಡಿರುವುದರಿಂದ ಮಹಿಳಾ ಕಾರ್ಮಿಕರು ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಕೆಲಸ ಸಮಯದಲ್ಲಿ ಮಹಿಳೆಯರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೆಲವು ಮೇಲ್ವಿಚಾರಕರು ಅನಾವಶ್ಯಕವಾಗಿ ಮಹಿಳಾ ಕಾರ್ಮಿಕರು ದೇಹಸ್ಪರ್ಶಮಾಡಿ ಮಾತನಾಡಿಸುವುದು, ಕೆಲಸ ಕಲಿಸುವುದು ಮಾಡುವುದರಿಂದ ಮಹಿಳಾ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಮಹಿಳಾ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಮಹಿಳಾ ಮೇಲ್ವಿಚಾರಕರನ್ನೇ ನೇಮಕ ಮಾಡಬೇಕು ಎಂಬ ಒತ್ತಾಯವನ್ನು ನೊಂದ ಮಹಿಳೆಯರು ಮಾಡಿದ್ದಾರೆ.

 

ಈ ಕುರಿತಂತೆ ಮಾತನಾಡಿರುವ ಗಾರ್ಮೆಂಟ್ಸ್‍ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ನಮ್ಮ ಗಾರ್ಮೆಂಟ್ಸ್‍ನಲ್ಲಿ ಮಹಿಳೆಯರನ್ನ ಗೌರವದಿಂದಲೇ ನಡೆಸಿಕೊಳ್ಳುತ್ತಿದ್ದೇವೆ. ಕೆಲವು ಮಹಿಳಾ ಕಾರ್ಮಿಕರು ಕೆಲಸ ಮಾಡಲಾಗದೆ ಕೆಲಸವನ್ನು ಬಿಟ್ಟಿದ್ದಾರೆ. ನಾವು ಯಾರಿಗೂ ಕಿರುಕುಳ ನೀಡಿಲ್ಲ. ಆದರೂ ಈಗ ಮಹಿಳಾ ಕಾರ್ಮಿಕರು ಆರೋಪ ಮಾಡಿರುವುದರಿಂದ ತಕ್ಷಣ ಎಲ್ಲಾ ಅಧಿಕಾರಿಗಳ ಸಭೆ ಕರೆದು ಏನಾದರು ಸಮಸ್ಯೆ ಇದೆಯಾ ಎಂದು ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು