News Karnataka Kannada
Tuesday, April 23 2024
Cricket
ಕರ್ನಾಟಕ

ಗಜಗಿರಿ ಬೆಟ್ಟ ದುರಂತ: ನಾರಾಯಣ ಆಚಾರ್ ಮೃತ ದೇಹ ಪತ್ತೆ

Photo Credit :

ಗಜಗಿರಿ ಬೆಟ್ಟ ದುರಂತ: ನಾರಾಯಣ ಆಚಾರ್ ಮೃತ ದೇಹ ಪತ್ತೆ

ಮಡಿಕೇರಿ: ಮಹಾಮಳೆಯಿಂದ ಗಜಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾಗಿದ್ದ ತಲಕಾವೇರಿ ಪ್ರದೇಶಲ್ಲಿ ಮಂಗಳವಾರ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಸಿಕ್ಕಿದೆ.

ಪ್ರಕೃತಿ ವಿಕೋಪ ನಿರ್ವಹಣಾ ತಂಡ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಡಿದಾದ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ ಸಂದರ್ಭ ಕೊಳೆತ ಸ್ಥಿತಿಯಲ್ಲಿ ಮೃತ ಶರೀರ ಪತ್ತೆಯಾಗಿದೆ.

ನಾರಾಯಣ ಆಚಾರ್ ಅವರ ಮನೆಯಿದ್ದ ಪ್ರದೇಶದಿಂದ 2.50 ಕಿ.ಮೀ ದೂರದಲ್ಲಿ ಶವ ಮಣ್ಣಿನಡಿ ಗೋಚರಿಸಿದ್ದು, ಜಡಿಮಳೆಯ ನಡುವೆಯೂ ಕಾರ್ಯಾಚರಣೆ ತಂಡ ಕಂದಕದಿಂದ ಶವವನ್ನು ಮೇಲೆ ತರುವಲ್ಲಿ ಯಶಸ್ವಿಯಾಯಿತು.

ಈ ನಡುವೆ ನಾರಾಯಣ ಆಚಾರ್ ಅವರಿಗೆ ಸೇರಿದ ಎರಡು ಕಾರು, ಒಂದು ಬೈಕ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಮಣ್ಣಿನಡಿ ಪತ್ತೆಯಾಯಿತಲ್ಲದೆ, ಸಾಕು ನಾಯಿಯ ಮೃತದೇಹ ಕೂಡ ಸಿಕ್ಕಿತು.

ಪ್ರತಿಕೂಲ ಹವಾಗುಣದ ಹಿನ್ನೆಲೆ ಸಂಜೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಧಾರಾಕಾರ ಮಳೆಯೊಂದಿಗೆ ಕೆಸರು ಮಿಶ್ರಿತ ನೀರು ಬೆಟ್ಟದ ಭಾಗದಿಂದ ಹರಿದು ಬರುತ್ತಿದ್ದುದರಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಆ.6 ರಂದು ಘಟನೆ ನಡೆದಿದ್ದು, 8 ರಂದು ನಾರಾಯಣ ಆಚಾರ್ ಅವರ ಸೋದರ ಆನಂದತೀರ್ಥಸ್ವಾಮಿಗಳ ಮೃತದೇಹ ಸಿಕ್ಕಿತ್ತು. ನಾಪತ್ತೆಯಾದ ಐವರಲ್ಲಿ ಇಬ್ಬರ ಶವ ದೊರೆತಂತ್ತಾಗಿದ್ದು, ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ ಅವರುಗಳ ಪತ್ತೆ ಕಾರ್ಯ ಬುಧವಾರ ಮತ್ತೆ ಮುಂದುವರೆಯಲಿದೆ.  

ನಾರಾಯಣ ಆಚಾರ್ ಹಾಗೂ ಪತ್ನಿ ಶಾಂತ ಅವರುಗಳು ಮನೆಯ ಮೇಲಂತಸ್ತಿನಲ್ಲಿ ನಿದ್ರಿಸಿದ್ದರು. ಈ ಕಾರಣದಿಂದಲೇ ಬೆಟ್ಟ ಬಿದ್ದ ರಭಸಕ್ಕೆ ಎರಡೂವರೆ ಕಿ.ಮೀ ನಷ್ಟು ದೂರ ದೇಹ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳದಲ್ಲೇ ಇದ್ದ ಸಚಿವರು

ರಾಜ್ಯ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ವಯಸ್ಸಿನ ಹಂಗು ತೊರೆದು ಕಳೆದ ಐದು ದಿನಗಳಿಂದ ತಲಕಾವೇರಿ ಪ್ರದೇಶದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡರು. ಬೆಟ್ಟ ಕುಸಿದ ಕಡಿದಾದ ಪ್ರದೇಶದಲ್ಲಿ ಜಡಿಮಳೆಯ ನಡುವೆ ಸಂಚರಿಸಿ ಕಾರ್ಯಾಚರಣೆಯ ತಂಡಕ್ಕೆ ಅಗತ್ಯ ಸಲಹೆಗಳನ್ನು ನೀಡಿ ಧೈರ್ಯ ತುಂಬಿದರು. ಖುದ್ದು ಊಟ ಬಡಿಸಿ ಮತ್ತು ತಾವೂ ಸಿಬ್ಬಂದಿಗಳೊಂದಿಗೆ ಊಟ ಮಾಡಿ ಪ್ರೋತ್ಸಾಹ ನೀಡಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಕೂಡ ಇಷ್ಟೇ ಕಾಳಜಿಯಿಂದ ಕಾರ್ಯ ನಿರ್ವಹಿಸಿದರು. ಪ್ರತಾಪ್ ಸಿಂಹ ಅವರು ಕೆಸರುಮಯ ಬೆಟ್ಟದಲ್ಲಿ ಕಾರ್ಯಾಚರಣೆಗೂ ಕೈಜೋಡಿಸಿದರು. ಇದಕ್ಕೂ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ವಿಶೆಷ ಪೂಜೆ ಸಲ್ಲಿಸಿದರು.

ಜಿಲ್ಲಾಧಿಕಾರಿ ಬಗ್ಗೆ ಮೆಚ್ಚುಗೆ

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಾವೊಬ್ಬ ಮಹಿಳಾ ಅಧಿಕಾರಿ ಎನ್ನುವುದನ್ನೂ ಲೆಕ್ಕಿಸದೆ ಕುಸಿದ ಕೆಸರುಮಯ ಬೆಟ್ಟ, ಗುಡ್ಡಗಳನ್ನೇರಿ, ಇಳಿದು, ಅಪಾಯಕಾರಿ ಬಂಡೆಗಳ ನಡುವೆ ಸಂಚರಿಸಿ ಕಾರ್ಯಾಚರಣೆಯ ಸಿಬ್ಬಂದಿಗಳಿಗೆ ಸ್ಫೂರ್ತಿ ತುಂಬಿದರು. ಕಳೆದ ಆರು ದಿನಗಳಿಂದ ಧಾರಾಕಾರ ಮಳೆಯ ನಡುವೆ ಪರಿಶ್ರಮ ಪಡುತ್ತಿರುವ ಜಿಲ್ಲಾಧಿಕಾರಿ ಕಾರ್ಯ ವೈಖರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಕೂಡ ಕಾರ್ಯ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು