News Karnataka Kannada
Tuesday, April 23 2024
Cricket
ಕರ್ನಾಟಕ

ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಸೌಮ್ಯರೆಡ್ಡಿ

Photo Credit :

ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಸೌಮ್ಯರೆಡ್ಡಿ

ರಾಮನಗರ: ಕೋವಿಡ್ 19 ಸೋಂಕು ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಿರ್ವಹಣೆ ಸಾಧ್ಯವಾಗದಿದ್ದರೆ ಈ ಸರ್ಕಾರವನ್ನು ವಿಸರ್ಜಿಸಲಿ ಎಂದು ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಆಗ್ರಹಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂಬ ಮಾಹಿತಿ ಇದ್ದರೂ ಅದಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ರಾಜ್ಯ ಸರ್ಕಾರ ಮಾಡಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಇಂದು ಸೋಂಕಿತರು ಚಿಕಿತ್ಸೆ ಸಿಗದೆ ಬೆಂಗಳೂರಿನ ಬೀದಿಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ದೂರಿದರು.

ಬೆಂಗಳೂರು ನಗರದಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇದೆ ಎಂಬ ಬಗ್ಗೆ ಅಂತರ್ಜಾಲದ ಡ್ಯಾಷ್‍ಬೋರ್ಡ್ ಸೃಜಿಸಿ ಎಂದು ಸಲಹೆ ಕೊಟ್ಟರೂ ಸರ್ಕಾರ ಅದನ್ನು ಮಾಡಿಲ್ಲ. ಸೋಂಕು ನಿರ್ವಹಣೆ ವಿಚಾರದಲ್ಲಿ ವಿರೋಧ ಪಕ್ಷಗಳ ಸಲಹೆಯನ್ನು ಸ್ವೀಕರಿಸುವ ಮನೋಭಾವವೂ ಈ ಸರ್ಕಾರಕ್ಕೆ ಇಲ್ಲ.  ಬೆಂಗಳೂರಿನ ಎಕ್ಸಿಬಿಷನ್ ಮೈದಾನದಲ್ಲಿ ಕೋವಿಡ್ ಸೋಂಕಿತರಿಗಾಗಿ ತಾತ್ಕಾಲಿಕ ಆಸ್ಪತ್ರೆ ಮೊದಲೇ ಮಾಡಬಹುದಿತ್ತು. ಆದರೆ ಈಗ ಮಾಡಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ವಿಳಂಬ ಧೋರಣೆ ಮಾಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ 19 ಸೋಂಕು ಚಿಕಿತ್ಸೆ, ನಿರ್ವಹಣೆ ವಿಚಾರದಲ್ಲಿ 2000 ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ತಮ್ಮ ಪಕ್ಷ ಆರೋಪಿಸಿ ಸಾಕ್ಷ್ಯಗಳನ್ನು ನೀಡಿದೆ. ಆದರೆ ಸರ್ಕಾರ ಇದನ್ನು ನಿರಾಕರಿಸಿದೆ. ಶ್ವೇತ ಪತ್ರ ಹೊರಡಿಸಿ ಲೆಕ್ಕ ಕೊಡಿ ಅಂದ್ರೆ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರದ ಸಲಹೆ, ಸೂಚನೆಗಳಿಗೆ ನಾಗರೀಕರು ಸ್ಪಂದಿಸಿದ್ದಾರೆ. ಆದರೆ ಸರ್ಕಾರಗಳೇ ಜನರ ಕಾಳಜಿ ವಹಿಸುತ್ತಿಲ್ಲ. ಜನತೆಯೇ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಮಾತನಾಡಿ, ಭ್ರಷ್ಟಾಚಾರದ ಆರೋಪದ ವಿಚಾರದಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ನಾಯಕರಿಗೆ ನೀಡಿರುವ ಲೀಗಲ್ ನೋಟಿಸ್‍ಗೆ ನ್ಯಾಯಾಲಯದ ಮೂಲಕವೇ ಉತ್ತರ ನೀಡುವುದಾಗಿ ತಿಳಿಸಿದರು. ಭ್ರಷ್ಟಾಚಾರ ನಡೆದಿಲ್ಲ ಎಂದು ಸಮರ್ಥಿಸಿಕೊಳ್ಳುವ ಸಚಿವರುಗಳು ತನಿಖೆಗೆ ಮುಂದಾಗುತ್ತಿಲ್ಲ. ತನಿಖೆ ನಡೆದು ಸತ್ಯ ಬಯಲಾದರೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯದಿಂದಲೇ ಬಿಜೆಪಿ ನಾಯಕರು ತನಿಖೆಗೆ ಮುಂದಾಗುತ್ತಿಲ್ಲ ಎಂದು ಮಾತಿನ ಚಾಟಿ ಬೀಸಿದರು.

ಗೋಷ್ಠಿಯಲ್ಲಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಜಿಪಂಅಧ್ಯಕ್ಷ ಎಚ್.ಬಸಪ್ಪ, ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು