News Karnataka Kannada
Sunday, April 21 2024
Cricket
ಕರ್ನಾಟಕ

ಕೊವೀಡ್ ನಿಯಂತ್ರಣಕ್ಕೆ ಸ್ಥಳೀಯ ನಿರ್ಧಾರವೂ ಮುಖ್ಯ: ಸಚಿವ ಕೆ. ಗೋಪಾಲಯ್ಯ

Photo Credit :

ಕೊವೀಡ್ ನಿಯಂತ್ರಣಕ್ಕೆ ಸ್ಥಳೀಯ ನಿರ್ಧಾರವೂ ಮುಖ್ಯ: ಸಚಿವ ಕೆ. ಗೋಪಾಲಯ್ಯ

ಹಾಸನ: ಕೊವೀಡ್-19 ನಿಯಂತ್ರಣಕ್ಕೆ ಸ್ಥಳೀಯ ಆಡಳಿತ, ಶಾಸಕರು ಜಿಲ್ಲಾಡಳಿತದ ಸಮನ್ವಯತೆಯೊಂದಿಗೆ ಕೈಗೊಳ್ಳುವ ನಿರ್ಧಾರಗಳನ್ನು ಅನುಷ್ಟಾನಕ್ಕೆ ತರಲು  ಯಾವುದೇ ಆಕ್ಷೇಪವಿಲ್ಲ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.
 
ನಗರದ ಅಂಬೇಡ್ಕರ್ ಭವನದಲ್ಲಿಂದು ಜಿಲ್ಲೆಯಲ್ಲಿನ ಕೊವೀಡ್-19 ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಜಿಲ್ಲೆಯ ಕೊವೀಡ್ ಪರಿಸ್ಥಿತಿಯನ್ನು ಮತ್ತು ಜಿಲ್ಲೆಯ ಶಾಸಕರ ಅಭಿಪ್ರಾಯ ಸಲಹೆ-ಸೂಚನೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದರು.
 
ಸರ್ಕಾರ ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರ ನೀಡುತ್ತಿದೆ. ವಾಹನ ಚಾಲಕರು, ನೇಕಾರರು, ಅಗಸ ಹಾಗೂ ಕ್ಷೌರಿಕ ವೃತ್ತಿಯವರಿಗೆ ತಲಾ 5,000 ಸಹಾಯಧನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
 
 ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತಿದ್ದು, ಸಂಘಟಿತ ಪ್ರಯತ್ನ ಮತ್ತು ಸಹಕಾರ ಹಾಗೂ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
 
ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿಯಾಗಿ ಬೇಕಿರುವ ವೆಂಟಿಲೇಟರ್, ಆಕ್ಸಿಜನ್ ಕಿಟ್, ಹಾಸಿಗೆ ಮುಂತಾದ ಸೌಕರ್ಯಗಳನ್ನು ಶೀಘ್ರವಾಗಿ ಒದಗಿಸಲು ಕ್ರಮವಹಿಸಲಾಗುವುದು. ಕಾರ್ಮಿಕ ಇಲಾಖೆಯಿಂದ ಜಿಲ್ಲೆಗೆ ಪೂರೈಕೆಯಾಗಲು ಬಾಕಿಯಿರುವ ಆಹಾರ ಕಿಟ್‍ಗಳನ್ನು ಮುಂದಿನ ದಿನಗಳಲ್ಲಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
 
 ಇನ್ನೂ 2 ದಿನಗಳಲ್ಲಿ 3,500 ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಒದಗಿಸಲಾಗುವುದು. ಕೊವೀಡ್ ಪರೀಕ್ಷಾ ಫಲಿತಾಂಶ ಶೀಘ್ರವೇ ದೊರಕುವಂತೆ ಮಾಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. 
 
ಅಧಿಕಾರಿ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಶಾಸಕರುಗಳು, ಜಿಲ್ಲಾಡಳಿತ, ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸೋಣ, ಸಾಮಾಜಿಕ ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿಯ ಪಥದಲ್ಲಿ ಸಾಗೋಣ ಎಂದು ಸಚಿವರಾದ ಕೆ. ಗೋಪಾಲಯ್ಯ ಅವರು ಕರೆ ನೀಡಿದರು.
 
ಶಾಸಕರಾದ ಎಚ್.ಡಿ. ರೇವಣ್ಣ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ ಕೊವೀಡ್ ಸೋಂಕಿತರನ್ನು ಸಾರ್ವಜನಿಕವಾಗಿ ಹೆಚ್ಚಿನ ಭಯಮುಕ್ತರನ್ನಾಗಿಸಬೇಕು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಲಾಕ್‍ಡೌನ್ ವಿಚಾರವಾಗಿ ನಿರ್ದಿಷ್ಟವಾದ ನಿಯಮ ರೂಪಿಸಬೇಕು.  ಸಮುದಾಯದಲ್ಲಿ ಕೊರೋನಾ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಡುವಿಕೆಯನ್ನು ತಡೆಯಲು ಸ್ಥಳೀಯವಾಗಿ ತಾಲ್ಲೂಕು ಹಂತದಲ್ಲಿ ಕೈಗೋಳ್ಳುವ ತಿರ್ಮಾನಗಳನ್ನು ಅನುಷ್ಟಾನಗೊಳಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
 
ಶಾಸಕರಾದ ಎಚ್.ಡಿ. ರೇವಣ್ಣ ಮತ್ತು ಎ.ಟಿ. ರಾಮಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಿ ಅವರ ಸಮಸ್ಯೆಯನ್ನು ನಿವಾರಿಸಬೇಕು ಅಲ್ಲದೆ ಜಿಲ್ಲೆಯ ಖಾಸಗಿ ಶಾಲಾ-ಕಾಲೇಜುಗಳು ಡೊನೆಷನ್ ವಸೂಲಿಗೆ ಇಳಿದಿದ್ದಾರೆ ಇದರಿಂದ ಪೋಷಕರಿಗೆ ತೊಂದರೆಯಾಗುತ್ತಿದೆ ಅದನ್ನು ತಪ್ಪಿಸಬೇಕು ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದನ್ನು ಆಧ್ಯತೆಯಾಗಿ ಪರಿಗಣಿಸಿ ನಿವಾರಿಸಬೇಕು ಎಂದು ಮನವಿ ಮಾಡಿದರು.
 
ಜಿಲ್ಲೆಯಲ್ಲಿ ವಾಡಿಕೆಗಿಂತ 33% ಕಡಿಮೆ ಮಳೆಯಾಗಿದೆ. ಮುಂಗಾರಿನಲ್ಲೇ ಜಿಲ್ಲೆಯ ಜನರು ಕೃಷಿ ಚಟುವಟಿಕೆ ಮಾಡುವುದು ಹಾಗಾಗಿ ಶೀಘ್ರವಾಗಿ ನೀರು ಹರಿಸಿರಿ ರೈತರು ಸಂಕಷ್ಠಕೊಳಗಾಗುವುದನ್ನು ತಪ್ಪಿಸಬೇಕು. ಶೀಘ್ರವಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು ಎಂದು ಶಾಸಕರಾದ ಎಚ್.ಡಿ. ರೇವಣ್ಣ ಮತ್ತು ಎ.ಟಿ. ರಾಮಸ್ವಾಮಿ ಅವರು ಸಭಿಕರನ್ನು ಒತ್ತಾಯಿಸಿದರು.
 
ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ಮಾತನಾಡಿ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕಿನ ಆಸ್ಪತ್ರೆಗಳಿಗೆ ಕೊರೋನಾ ಸೋಂಕಿತರನ್ನು ಕರೆದೊಯ್ಯುವ ಆ್ಯಯಂಬುಲೆನ್ಸ್ ವಾಹನಗಳ ಕೊರತೆಯಿದ್ದು ತುರ್ತಾಗಿ ಒದಗಿಸಬೇಕು. ಅಲ್ಲದೆ ವೆಂಟಿಲೇಟರ್, ಆಕ್ಸಿಜನ್ ಕಿಟ್, ಮೊಬೈಲ್ ಎಕ್ಸರೆ ಸೌಲಭ್ಯ, ಸುಧಾರಿತ ಇ.ಸಿ.ಜಿ. ಯಂತ್ರಗಳನ್ನು ಅಗತ್ಯವಾಗಿ ಒದಗಿಸುವಂತೆ ಹೇಳಿದರು.
 
ಕಳೆದ 15 ದಿನಗಳಲ್ಲಿ 25ಕ್ಕೂ ಅಧಿಕ ಸಾವು ಸಂಭವಿಸಿದ್ದು ಅದರ ಹಿಂದಿನ 4 ತಿಂಗಳಲ್ಲಿ ಕೇವಲ 8 ಸಾವುಗಳು ಸಂಭವಿಸಿವೆ. ಹಾಸನ ತಾಲ್ಲೂಕಿನಲ್ಲಿ ಅತಿಹೆಚ್ಚು ಮಂದಿ ಕೊವೀಡ್‍ಗೆ ಬಲಿಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಶಾಸಕರಾದ ಬಾಲಕೃಷ್ಣ ಹೇಳಿದರು.
 
ಶಾಸಕರಾದ ಪ್ರೀತಂ ಜೆ. ಗೌಡ ಅವರು ಮಾತನಾಡಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿರ್ದೇಶನವಿದ್ದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊವೀಡ್ ಸೋಂಕಿತರನ್ನು ಚಿಕಿತ್ಸೆ ಮಾಡುತ್ತಿದ್ದಾರೆ. ಕಡ್ಡಾಯವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲೇಬೇಕು ಹಾಗೂ  ಕೆಲವು ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕೊವೀಡ್ ಚಿಕಿತ್ಸೆಗೆ ಮೀಸಲಿಡಬೇಕು. ಕೊವೀಡ್ ಆಸ್ಪತ್ರೆಯಲ್ಲಿ ಬಡವರಿಗಷ್ಟೇ ಚಿಕಿತ್ಸೆ ನೀಡಬೇಕು. ಸೋಂಕಿತ ಸ್ಥಿತಿವಂತನಾಗಿದ್ದು, ಹಣ ಪಾವತಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ ಅಲ್ಲಿಯೇ ವ್ಯವಸ್ಥೆ ಮಾಡಬೇಕು ಎಂದರು.
 
ಶಾಸಕರಾದ ಕೆ.ಎಸ್. ಲಿಂಗೇಶ್ ಅವರು ಮಾತನಾಡಿ ರಾಜ್ಯಾದ್ಯಂತ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ ಆದರೆ ಅವರ ದುಡಿಮೆಗೆ ತಕ್ಕ ಸಂಬಳವಿಲ್ಲ ಹಾಗಾಗಿ ಕನಿಷ್ಠ 10,000 ವೇತನ ನಿಗಧಿ ಮಾಡಿ ಉದ್ಯೋಗ ಭದ್ರತೆ ಒದಗಿಸಬೇಕು ಎಂದರು. 
   
 
 
 
 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು