News Karnataka Kannada
Friday, April 19 2024
Cricket
ಕರ್ನಾಟಕ

ಕೊಡಗು ಜಿಲ್ಲೆಯಲ್ಲಿ ಮೀನು-ಮಾಂಸ ಗಳಿಗೆ ಏಕದರ ನಿಗದಿಗೆ ಒತ್ತಾಯ

Photo Credit :

ಕೊಡಗು ಜಿಲ್ಲೆಯಲ್ಲಿ ಮೀನು-ಮಾಂಸ ಗಳಿಗೆ ಏಕದರ ನಿಗದಿಗೆ ಒತ್ತಾಯ

ಮಡಿಕೇರಿ: ಕೊಡಗು ಜಿಲ್ಲಾದ್ಯಂತ ಮೀನು ಮತ್ತು ವಿವಿಧ ಮಾಂಸಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಜಿಲ್ಲಾಧ್ಯಂತ ಮೀನು ಮತ್ತು ಮಾಂಸಗಳಿಗೆ ಏಕದರ

ನಿಗದಿಪಡಿಸಿ ಆದೇಶ ಹೊರಡಿಸಬೇಕೆಂದು ಕೊಡಗು ಜಿ. ಪಂ. ಸದಸ್ಯರ ನಿಯೋಗವೊಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.

 

ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಅನಿಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿದ ಜಿ.ಪಂ. ಸದಸ್ಯರಾದ ಸಿ.ಕೆ. ಬೋಪಣ್ಣ ಅವರ ನೇತೃತ್ವದ ನಿಯೋಗ, ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಮೀನು ಮತ್ತು ಮಾಂಸಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆಗೆ ಕೂಡಲೇ ಕಡಿವಾಣ ಹಾಕುವಂತೆ ಒತ್ತಾಯಿಸಿದೆ.

 

ಇದೀಗ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದರದ ಮಾರಾಟ ಗ್ರಾಹಕರಿಂದ ಹಣ ದೋಚುವ ದಂಧೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಗೋಣಿಕೊಪ್ಪಲು ಮತ್ತು ವಿರಾಜಪೇಟೆ ಭಾಗದಲ್ಲಿ ಮಿತಿ ಮೀರಿದ ಹೆಚ್ಚಿನ ದರದಲ್ಲಿ ಮೀನು ಮತ್ತು ವಿವಿಧ ಮಾಂಸಗಳನ್ನು ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರನ್ನು ಸುಲಿಗೆ ನಡೆಸಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಜನತೆ ರೊಚ್ಚಿಗೇಳುವ ಸಾಧ್ಯತೆ ಇದೆ ಎಂದು ಈ ನಿಯೋಗ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.

 

ಕೋವಿಡ್-19 ನಿಯಂತ್ರಣಕ್ಕಾಗಿ ಜಾರಿಯಾಗಿದ್ದ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಕುರಿಗಳನ್ನು ಹೊರ ಜಿಲ್ಲೆಯಿಂದ ತರಬೇಕಾದ್ದರಿಂದ ಕೆ.ಜಿ.ವೊಂದಕ್ಕೆ ರೂ 450ರಂತೆ ಇದ್ದ ಕುರಿಮಾಂಸದ ಮಾರಾಟ ಬೆಲೆಯನ್ನು ಜಿಲ್ಲಾಡಳಿತ ರೂ. 650ಕ್ಕೆ ನಿಗದಿಪಡಿಸಿತ್ತು. ಇದೀಗ ಲಾಕ್ ಡೌನ್ ತೆರವುಗೊಂಡು ಕುರಿ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲದಿದ್ದರೂ ಜಿಲ್ಲೆಯಲ್ಲಿ ಕುರಿ ಮಾಂಸ ಕೆ.ಜಿ. ವೊಂದಕ್ಕೆ ರೂ.650ರಿಂದ 700ರವರೆಗೆ ಮಾರಾಟವಾಗುತ್ತಿದೆ. ಜಿಲ್ಲಾಡಳಿತದ ಹಿಂದಿನ ಆದೇಶವನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ವರ್ತಕರು ಜನರಿಂದ ಹೆಚ್ಚಿನ ಹಣ ಪಡೆದು ಸುಲಿಗೆ ನಡೆಸುತ್ತಿದ್ದಾರೆ. ಅಲ್ಲದೆ ಕೋಳಿ, ಹಂದಿ ಮಾಂಸ ಮತ್ತು ಮೀನಿನ ಮಾರಾಟ ಬೆಲೆಯಲ್ಲಿಯೂ ತಾರತಮ್ಯವಿದ್ದು, ವಿವಿಧ ಪಟ್ಟಣಗಳಲ್ಲಿ ಬೇರೆ ಬೇರೆ ರೀತಿಯ ದರದಲ್ಲಿ ಮಾರಾಟವಾಗುತ್ತಿದೆ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರು ಹೆಚ್ಚಿನ ಬೆಲೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಬೋಪಣ್ಣ ಅವರು ಮನವರಿಕೆ ಮಾಡಿದರು.

 

ಜಿಲ್ಲೆಯಲ್ಲಿ ಮೀನು ಮತ್ತು ಮಾಂಸಗಳಿಗೆ ಏಕರೀತಿ ದರ ನಿಗದಿಪಡಿಸಲು ಜಿಲ್ಲಾ ಪಂಚಾಯಿತಿಯ ಹಿಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿದೆ. ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ಪಿಡಿಓಗಳಿಗೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಇದೀಗ ಕೊಡಗು ಜಿ. ಪಂ. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೂ ಆಗಿರುವ ಅನಿಶ್ ಕಣ್ಮಣಿ ಜಾಯ್ ಅವರಲ್ಲಿ ಜಿ.ಪಂ. ಸದಸ್ಯರ ಈ ನಿಯೋಗ ಮನವಿ ಮಾಡಿತು.

 

ಕೊರೋನಾ ತಲ್ಲಣದ ನಡುವೆಯೇ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲಾದ್ಯಂತ ರೈತರ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಮೊದಲೇ ಶೋಚನೀಯ ಸ್ಥಿತಿಯಲ್ಲಿರುವ ಕೊಡಗಿನ ಅತಂತ್ರ ರೈತರು ಇದರಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ವಿಪರೀತ ಮಳೆ ಮತ್ತು ಬಿರುಗಾಳಿಗೆ ತೋಟದಲ್ಲಿದ್ದ ಮರಗಳು ಕಾಫಿ ಗಿಡದ ಮೇಲೆ ಬಿದ್ದು ಫಸಲು ನಾಶವಾಗಿದೆ. ಅಲ್ಲದೆ ಇದರಿಂದ ಕರಿಮೆಣಸು ಕೃಷಿಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯಿಂದಾಗಿ ನದಿ-ತೊರೆಗಳ ನೀರು ಭತ್ತದ ಗದ್ದೆಗಳಿಗೆ ಮತ್ತು ಕಾಫಿ ತೋಟಕ್ಕೆ ನುಗ್ಗಿದ ಪರಿಣಾಮ ಹಲವೆಡೆ ಗದ್ದೆ ಮತ್ತು ತೋಟಗಳಲ್ಲಿ ಮರಳು ಶೇಖರಣೆಯಾಗಿದೆ ಎಂದು ನಿಯೋಗ ಜಿಲ್ಲಾಧಿಕಾರಿಗಳಿಗೆ ವಿವರಿಸಿತು.

 

ಪ್ರಕೃತಿ ವಿಕೋಪದಿಂದ ಬೆಳೆ ನಾಶಗೊಂಡ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು. ನೀರು ನುಗ್ಗಿದ ಪರಿಣಾಮ ತೋಟ ಮತ್ತು ಗದ್ದೆಗಳಲ್ಲಿ ಶೇಖರಣೆಯಾಗಿರುವ ಮರಳನ್ನು ಸಾಗಿಸಲು ಅನುಮತಿ ನೀಡುವಂತೆ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಬೇಕು ಎಂದು ಜಿ.ಪಂ. ಸದಸ್ಯರ ಈ ನಿಯೋಗ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿತು.

 

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಮೀನು ಮತ್ತು ಮಾಂಸಗಳಿಗೆ ದರ ನಿಗದಿಗೆ ಸಂಬಂಧಿಸಿದಂತೆ ಕೂಡಲೇ ಆದೇಶ ಹೊರಡಿಸಲಾಗುವುದು. ಸಂತ್ರಸ್ತರಿಗೆ ಸೂಕ್ತ ಪರಿಹಾರ ವಿತರಣೆಗೆ ಅಗತ್ಯವಿರುವ ಪ್ರಕ್ರಿಯೆ ಇದೀಗ ಪ್ರಗತಿಯಲ್ಲಿದೆ ಎಂದು ಹೇಳಿದರು. ಗದ್ದೆ ಮತ್ತು ತೋಟಗಳಲ್ಲಿ ಮರಳು ಶೇಖರಣೆ ಕುರಿತು ಸಂಬಂಧಿಸಿದವರಿಂದ ವಿವರ ಪಡೆದು ಮುಂದೆ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ಸಿ.ಕೆ. ಬೋಪಣ್ಣ ಅವರು ತಿಳಿಸಿದ್ದಾರೆ.

 

ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಮೂಕೊಂಡ ಶಶಿ ಸುಬ್ರಮಣಿ, ಬಿ ಎನ್.ಪ್ರತ್ಯು ಮತ್ತು ಪಾಡಿಯಮಂಡ ಮುರುಳಿ ಕರುಂಬಮ್ಮಯ್ಯ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು