News Karnataka Kannada
Tuesday, April 23 2024
Cricket
ಕರ್ನಾಟಕ

ಕೊಡಗಿನ ಸಮಾಜಮುಖಿ ಫೋಟೋಗ್ರಾಫರ್‌ ಎಸ್‌ ಎನ್‌ ನಾಣಿ ಕೋವಿಡ್‌ ಗೆ ಬಲಿ

Photo Credit :

ಕೊಡಗಿನ ಸಮಾಜಮುಖಿ ಫೋಟೋಗ್ರಾಫರ್‌ ಎಸ್‌ ಎನ್‌ ನಾಣಿ  ಕೋವಿಡ್‌ ಗೆ ಬಲಿ

ಮಡಿಕೇರಿ ; ಅದು 1980 ರ ದಶಕ. ಜಿಲ್ಲೆಯ ಸಣ್ಣ ಪಟ್ಟಣ ಸೋಮವಾರಪೇಟೆಯಲ್ಲಿ ಇದ್ದುದು ಕೇವಲ 4-5 ಸ್ಟುಡಿಯೋ ಮಾತ್ರ. ಆದರಲ್ಲಿ ಎಸ್‌ ಎನ್‌ ನಾಣಿ (75) ಅವರ ನಾಣಿ ಫೋಟೋ ಸ್ಟುಡಿಯೋ
ಕೂಡ ಒಂದು. ಖಾಸಗಿ ಬಸ್‌ ನಿಲ್ದಾಣದಿಂದ ಸರ್ಕಾರಿ ಬಸ್‌ ನಿಲ್ದಾಣದೆಡೆಗೆ ತೆರಳುವ ಗಲ್ಲಿಯಲ್ಲಿದ್ದ ಈ ಸ್ಟುಡಿಯೋ ಮುಂದೆ ನಿತ್ಯವೂ ಸಾವಿರಾರು ಜನರು ಹಾದು ಹೋಗುತಿದ್ದರು.ಈ ಸ್ಟುಡಿಯೋ ಮುಂದೆ ಹೋಗುವಾಗ ದೊಡ್ಡ ಗಾಜಿನ ಶೋ ಕೇಸ್‌ ನಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಭಾಷಣ ಮಾಡುತಿದ್ದ ಫೋಟೋ, ಮತ್ತೋರ್ವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಸೋಮವಾರಪೇಟೆಯಲ್ಲಿ ಚುನಾವಣಾ ಪ್ರಚಾರ ಮಾಡಿದ ಫೋಟೋ, ಮಾಜಿ ಮುಖ್ಯ ಮಂತ್ರಿ ಆರ್‌ ಗುಂಡೂರಾವ್‌ ಸೇರಿದಂತೆ ರಾಜಕಾರಣಿಗಳು ಸೋಮವಾರಪೇಟೆ ಸುತ್ತ ಮುತ್ತ ಚಿತ್ರೀಕರಣಕ್ಕೆ ಆಗಮಿಸಿದ್ದ ಚಿತ್ರ ನಟ ನಟಿಯರ ಫೋಟೋಗಳು ಜನರನ್ನು ಸೆಳೆಯುತಿದ್ದವು.
ಆ ಸಮಯದಲ್ಲಿ ಪೋಲೀಸ್‌ , ಅರಣ್ಯ ಮತ್ತು ಅಬಕಾರಿ ಇಲಾಖೆ ಯ ಅಪರಾಧ ಪ್ರಕರಣಗಳ ಫೋಟೋ ತೆಗೆಯಲು ನಾಣಿ ಅವರೇ ಅಧಿಕೃತವಲ್ಲದ ಖಾಯಂ ಪೋಟೋ ಗ್ರಾಫರ್‌ ಆಗಿದ್ದರು. ಇಲ್ಲಿನ ಎಲ್ಲ
ಪತ್ರಕರ್ತರಿಗೂ ಅವರೇ ಫೋಟೋ ನೀಡುವುದು ವಾಡಿಕೆಯಾಗಿತ್ತು. ಏಕೆಂದರೆ ಎಲ್ಲೋ ಒಂದು ಅಪಘಾತ, ಕೊಲೆ, ಆತ್ಮಹತ್ಯೆ ಆಗಿದ್ದಾಗ ಪೋಲೀಸರು ನಾಣಿ ಅವರಿಂದಲೇ ಫೋಟೋ ತೆಗೆಸುತಿದ್ದರು. ನಾಣಿ ಅವರ ಫೋಟೋ ಬಳಸಿಕೊಂಡದ್ದಕ್ಕೆ ಅವರು ಹಣ ನಿರೀಕ್ಷಿಸುತ್ತಿರಲಿಲ್ಲ, ಪತ್ರಿಕೆಯಲ್ಲಿ ಫೋಟೋ ಕ್ರೆಡಿಟ್‌ ನೀಡಿದರೆ ಖುಷಿಯಾಗುತಿದ್ದರು. ಅದೇ ಅವರಿಗೆ ತೃಪ್ತಿ. ಕೆಲವೊಮ್ಮೆ ಅವರೇ ಫೋಟೋ ತೆಗೆದಿದ್ದೇನೆ ಬೇಕಾ ಎಂದ ಕೇಳಿಯೇ ಪತ್ರಕರ್ತರಿಗೆ ನೀಡುತಿದ್ದರು. 2005 ನೇ ಇಸವಿ ನಂತರ ಪತ್ರಕರ್ತರು ಇ ಮೇಲ್‌ ಮೂಲಕ ಸುದ್ದಿ ಕಳಿಸಲು ಆರಂಭಿಸಿದ ಮೇಲೆ ತಾವೇ ಡಿಜಿಟಲ್‌ ಕ್ಯಾಮೆರಾ ಹೊಂದಿದರಿಂದ ನಾಣಿ ಅವರ ಅವಲಂಬನೆ ಕಡಿಮೆ ಆಗಿ ಸಂಪರ್ಕವೇ ಕಡಿದು ಹೋಯಿತು. ಇಲ್ಲಿಗೆ ಸಮೀಪದ ಕಾರೆಕೊಪ್ಪದಲ್ಲಿ 1992 ರಲ್ಲಿ ಅರಣ್ಯ ಇಲಾಖೆ ದೊಡ್ಡ ಪ್ರಮಾಣದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಿ ಪಂಜರದಲ್ಲಿ ಬಂಧಿಸಿಟ್ಟಿದ್ದಾಗ , ನಂತರ ಕಾರೆಕೊಪ್ಪದಲ್ಲೆ ಶಿವರಾಜ್‌ ಕುಮಾರ್‌ ಅವರ
ಗಂಧದ ಗುಡಿ ಭಾಗ ಎರಡು ಚಿತ್ರೀಕರಣ ಸಮಯದಲ್ಲಿ ನಾಣಿ ಅವರು ಅಲ್ಲಿ ಹಾಜರಾಗಿ ಫೋಟೋ ತೆಗೆಯುವುದರಲ್ಲಿ ಬಿಜಿ ಆಗಿರುತಿದ್ದರು. ಅನೇಕ ಸಭೆ ಸಮಾರಂಭಗಳಲ್ಲಿ ಜನಪ್ರಿಯ ವ್ಯಕ್ತಿಗಳಿದ್ದರೆ , ನಾಣಿ ಅವರು ತಪ್ಪದೆ ತಮ್ಮ ಯೆಜ್ಡಿ ಬೈಕಿನಲ್ಲಿ ಹೆಗಲಿಗೆ ಕ್ಯಾಮರಾ ನೇತು ಹಾಕಿಕೊಂಡು ಹೋಗಿ ಫೋಟೋ ತೆಗೆಯುತಿದ್ದರು. ಆದರೆ ಫೋಟೋ ಗ್ರಾಫಿಯ ಹಪಹಪಿಗೆ ಬಿದ್ದಿದ್ದ ಅವರು ತಮ್ಮ ಜೀವನಾಧಾರವಾಗಿದ್ದ ಏಕೈಕ ಸ್ಟುಡಿಯೋವನ್ನು ಮುಚ್ಚಿ ಗಂಟೆಗಟ್ಟಲೆ ಮುಚ್ಚಿ ರಾಜಕಾರಣಿ ವಿಐಪಿ ಗಳ ಫೋಟೋ ತೆಗೆಯಲು ಕಾದು ನಿಲ್ಲುತಿದ್ದರು. ಆದರೆ ಇದಕ್ಕೆ ಇವರಿಗೆ ಹಣವೇನೂ ಸಿಗುತ್ತಿರಲಿಲ್ಲ.!ತಮ್ಮ ಸ್ಟುಡಿಯೋದ ಗಾಜಿನ ಷೋ ಕೇಸ್‌ ನಲ್ಲಿ ಆ ಫೋಟೋ ಎನ್‌ಲಾರ್ಜ್‌ ಮಾಡಿ ಜನರಿಗೆ ತೋರಿಸುವುದರಲ್ಲೇ ಅವರಿಗೆ ಆನಂದ. ನಾಣೀ ಅವರು ಸುಮಾರು 5 ದಶಕಗಳ ಕಾಲ ಫೋಟೋಗ್ರಾಫರ್‌ ಅಗಿದ್ದು ಇವರ ಕೈಕೆಳಗೆ ಕೆಲಸ ಮಾಡಿದ ಹಲವರು ಸ್ವಂತ ಸ್ಟುಡಿಯೋ ಹೊಂದಿದ್ದಾರೆ. ನಗರದಲ್ಲೇ ಹಿರಿಯ ಫೋಟೋಗ್ರಾಫರ್‌ ಆಗಿದ್ದ ಇವರಿಗೆ 10 ದಿನಗಳ ಹಿಂದೆ ಜ್ವರ ಬಂದಿತ್ತು. ಆದರೆ ಆಸ್ಪತ್ರೆಗೇ ಹೋಗದೆ ಮನೆಯಲ್ಲೆ ಮೂರು ದಿನ ಮಲಗಿ ಬಿಟ್ಟರು. ನಂತರ ಪರಿಸ್ಥಿತಿ ಉಲ್ಪಣಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಕೋವಿಡ್‌ ಪಾಸಿಟಿವ್‌ ದೃಢಪಟ್ಟ ನಂತರ ನಂತರ ಮಡಿಕೇರಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಒಂದು ವಾರ ಇದ್ದು ಶನಿವಾರ ಬೆಳಿಗ್ಗೆ ಮೃತರಾದರು. ಇವರಿಗೆ ಪತ್ನಿ ಮೂವರು ಹೆಣ್ಣು ಮಕ್ಕಳು ಮತ್ತು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಓರ್ವ ಪುತ್ರ ಇದ್ದಾನೆ. ಈ ಸಮಾಜಮುಖಿ ಫೋಟೋಗ್ರಾಫರ್‌ ಇನ್ನು ನೆನಪಷ್ಟೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು