News Karnataka Kannada
Wednesday, April 24 2024
Cricket
ಕರ್ನಾಟಕ

ಅಂಗಡಿಬೈಲ ಭಂಡಾರಿ ಗದ್ದೆಯಲ್ಲಿ ನಾಗವರ್ಮರಸನ ಶಾಸನ ಪತ್ತೆ

Photo Credit :

ಅಂಗಡಿಬೈಲ ಭಂಡಾರಿ ಗದ್ದೆಯಲ್ಲಿ ನಾಗವರ್ಮರಸನ ಶಾಸನ ಪತ್ತೆ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ಚಂದ್ರಕಾಂತ ಆಚಾರಿಯವರ ಮನೆ ಎದುರಿನ ಮಾವಿನ ಮರದ ಕೆಳಗೆ ಇದ್ದ ಶಿಲ್ಪವನ್ನು ಪರಿಶೀಲಿಸಿದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಅದರ ಮೇಲೆ ಶಾಸನವಿರುವುದನ್ನು ಗುರುತಿಸಿದ್ದಾರೆ.

ಆಚಾರಿ ಮನೆಯವರಿಂದ ನಿತ್ಯ ಪೂಜೆಗೆ ಒಳಪಡುವ ಈ ಶಿಲ್ಪವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅವರು ಈ ಬಗ್ಗೆ ಮಾಹಿತಿ ನೀಡಿ ಇದು ತುಂಡಾದ ವೀರಗಲ್ಲು ಶಾಸನದ ಲಲಾಟದ ಭಾಗವಾಗಿದ್ದು ನಾಗವರ್ಮ ಎಂಬ ರಾಜನ ಕಾಲದ ಅಪ್ರಕಟಿತ ಶಾಸನವಾಗಿದೆ ಎಂದು ಮಾಹಿತಿ ನೀಡಿದರು.

ನಾಗವರ್ಮರಸ ಸುಮಾರು ಕ್ರಿ.ಶ. 1070 ರಿಂದ 1113ರ ವರೆಗೆ ಗೋಕರ್ಣವನ್ನು ಕೇಂದ್ರವಾಗಿಟ್ಟುಕೊಂಡು ಹೊನ್ನಾವರ, ಕುಮಟ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲೂಕುಗಳ ಭಾಗದಲ್ಲಿ ಮಹಾಮಂಡಳೇಶ್ವರನಾಗಿ ಸ್ವತಂತ್ರವಾಗಿ ಸಂಪೂರ್ಣ ಪ್ರಾಚೀನ ಹೈವೆ-500 ಪ್ರಾಂತ್ಯ ಮತ್ತು ಅದರ ಆಚೀಚಿನ ಪ್ರದೇಶಗಳÀನ್ನು ಆಳುತ್ತಿದ್ದಂತಹ ಒಬ್ಬ ರಾಜ. ಪ್ರಸ್ತುತ ಶಾಸನದ ಹೊರತು ಹೊನ್ನಾವರ ತಾಲೂಕಿನ ಕೆಕ್ಕಾರ, ಹಳದೀಪುರ, ಕಡಬಾಳ, ಅಂಕೋಲಾ ತಾಲೂಕಿನ ಬಡಗೇರಿ, ಹಾವೇರಿ ಜಿಲ್ಲೆಯ ಗಳಗನಾಥ ಮೊದಲಾದೆಡೆ ದೊರೆತ ಶಾಸನಗಳಲ್ಲಿ ನಾಗವರ್ಮರಸನ ಉಲ್ಲೇಖವಿದೆ. ಹಳದಿಪುರದ ಶಾಸನ ಈತನನ್ನು ಗೋಕರ್ಣ ಪುರವರಾಧೀಶ್ವರ ಎಂದು ಕರೆದಿದೆ ಎನ್ನುವ ವಿಷಯ ತಿಳಿಸಿದರು.

ಈ ಹೊಸ ಶಾಸನ ತಿಳಿಸುವ ವಿಷಯದ ಜೊತೆಗೆ ಇದರ ಶಿಲ್ಪವೂ ಅಪರೂಪದ್ದಾಗಿದೆ. ಲಲಾಟ ಭಾಗದಲ್ಲಿ ಐದು ಅಂತಸ್ತುಗಳ ಮೂರು ಸುಂದರ ಮಂಟಪಗಳನ್ನು ಚಿತ್ರಿಸಲಾಗಿದ್ದು ಮಧ್ಯದ ಮಂಟಪದಲ್ಲಿ ಶಿವಲಿಂಗವಿದ್ದು ಅದನ್ನು ಪೂಜಿಸುವ ಯತಿ ಮತ್ತು ಲಿಂಗದ ಎದುರಿಗೆ ಕೈಮುಗಿದು ನಿಂತ ವೀರನನ್ನು ಚಿತ್ರಿಸಲಾಗಿದೆ. ಶಿಲೆಯ ಬಲಭಾಗದ ಮಂಟಪದಲ್ಲಿ ಗಣಪತಿ, ಷಣ್ಮುಖ ಮತ್ತು ನಂದಿಯನ್ನು ಚಿತ್ರಿಸಲಾಗಿದ್ದರೆ, ಎಡಭಾಗದ ಮಂಟಪದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಆಕಳನ್ನು ಚಿತ್ರಿಸಲಾಗಿದೆ.

ಕೇವಲ ವೀರಗಲ್ಲು ಎಂದು ಪರಿಗಣಿಸಿದಾಗ ಇದು ಕೈಲಾಸದ ಚಿತ್ರಣ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಆ ಕಾಲದಲ್ಲಿ ಅಂಗಡಿಬೈಲ ಭಂಡಾರಿಗದ್ದೆಯಲ್ಲಿ ಶಿವ, ಗಣಪತಿ ಮತ್ತು ಷಣ್ಮುಖರ ದೇವಾಲಯ ಇದ್ದ ಸುಳಿವನ್ನು ನೀಡುತ್ತದೆ. ಶಿಲ್ಪಿಯು ಬೋಧಿಗೆಯೊಂದಿಗೆ ಚಿತ್ರಿಸಿದ್ದನ್ನು ನೋಡಿದರೆ ಈ ಮಂಟಪಗಳ ರಚನೆಗೆ ಆತ ಆವೂರಿನ ದೇವಾಲಯದಿಂದ ಸ್ಪೂರ್ತಿ ಪಡೆದದ್ದು ಸ್ವಷ್ಟವಾಗುತ್ತದೆ. ಇದಕ್ಕೆ ಪುಷ್ಠಿ ಕೊಡುವಂತೆ ಶಾಸನ ದೊರೆತ ಸ್ಥಳದಿಂದ ಸುಮಾರು 600ಮೀ. ದೂರದಲ್ಲಿ ಒಂದು ಕಾಂಕ್ರೀಟಿನಿಂದ ಜೀರ್ಣೊದ್ಧಾರವಾದ ಪ್ರಾಚೀನ ಶಿವಾಲಯವಿದೆ. ಅದರ ಪರಿಸರದಲ್ಲಿ ಸುಂದರ ಕೆತ್ತನೆಯ ಹಳೆಯ ಶಿಲಾಕಂಬಗಳ ಅವಶೇಷಗಳೂ ಇವೆ. ಇನ್ನು ಆಕಳು ಕರುವಿಗೆ ಹಾಲು ನೀಡುತ್ತಿರುವುದು ರಾಜ್ಯದ ಸಮೃದ್ಧಿಯ ಸಂಕೇತ ಎಂದು ಅವರು ವಿವರಿಸಿದರು.

ಇದೇ ವೇಳೆಗೆ ಶಾಸನವನ್ನು ಪರಿಶೀಲಿಸಲು ಅನುವು ಮಾಡಿಕೊಟ್ಟ ಚಂದ್ರಕಾಂತ ಆಚಾರಿ ಕುಟುಂಬದವರಿಗೆ, ಶಾಸನವಿರುವ ಮಾಹಿತಿ ನೀಡಿ ಸ್ಥಳಕ್ಕೆ ಕರೆದೊಯ್ದ ಉಪನ್ಯಾಸಕ ರಾಜು ಆಚಾರಿ ತೆಂಕಣಕೇರಿ ಅವರಿಗೆ ಮತ್ತು ಶಾಸನ ಪಾಠ ತಿದ್ದಿ ಅಗತ್ಯ ಮಾರ್ಗದರ್ಶನ ನೀಡಿದ ಡಾ. ರವಿಕುಮಾರ ಕೆ. ನವಲಗುಂದ ಹರಿಹರ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು