ಚೆನ್ನೈ: ತಡವಾಗಿ ಡೆಲಿವರಿ ಮಾಡಿದಕ್ಕೆ ಮಹಿಳೆಯೊಬ್ಬಳು ಬಾಯಿಗೆ ಬಂದಂತೆ ಬೈದಿದ್ದಕ್ಕೆ ಮನನೊಂದು ಫುಡ್ ಡೆಲಿವರಿ ಬಾಯ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಳತ್ತೂರಿನಲ್ಲಿ ನಡೆದಿದೆ.
ಕೊಳತ್ತೂರು ಪೊಲೀಸರ ಪ್ರಕಾರ ಮೃತನನ್ನು ಜೆ ಪವಿತ್ರನ್ (19)ಎಂದು ಗುರುತಿಸಲಾಗಿದ್ದು, ಈತ ಬಿಕಾಂ ವಿದ್ಯಾರ್ಥಿಯಾಗಿದ್ದು, ಸಂಜೆಯ ಹೊತ್ತಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ದಿನಸಿ ಸಾಮಾನುಗಳನ್ನು ತಲುಪಿಸಲು ಹೋದಾಗ ಮಹಿಳೆಯೊಬ್ಬರು ತನ್ನನ್ನು ನಿಂದಿಸಿದ್ದರಿಂದ ಮನನೊಂದ ತಾನು ಈ ಕ್ರಮ ಕೈಗೊಂಡಿರುವುದಾಗಿ ಯುವಕ ಡೆತ್ ನೋಟ್ನಲ್ಲಿ ಬರೆದುಕೊಂಡಿದ್ದಾನೆ.
ಮನೆಯ ಅಡ್ರಸ್ ಸಿಗದೇ ಇದ್ದ ಕಾರಣ ದಿನಸಿ ತಲುಪಿಸುವಷ್ಟರಲ್ಲಿ ತಡವಾಯಿತು. ಇದರಿಂದ ಕೋಪಗೊಂಡ ಮಹಿಳೆ ಡೆಲಿವರಿ ಕಂಪನಿಗೆ ದೂರು ನೀಡಿ, ಈ ಯುವಕನನ್ನು ಮತ್ತೆ ಡೆಲಿವರಿಗಾಗಿ ಕಳುಹಿಸಬೇಡಿ ಎಂದು ಕೇಳಿಕೊಂಡಿದ್ದರು. ಕಂಪನಿಯ ಕಡೆಯಿಂದ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಮಗೆ ತಿಳಿದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ನಂತರ, ಶುಕ್ರವಾರ, ಕೆಲಸ ಕಳೆದುಕೊಂಡ ಯುವಕ ಮಹಿಳೆಯ ಮನೆಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಒಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಿಳೆ ಕೊರಟ್ಟೂರು ಪೊಲೀಸರಿಗೆ ದೂರು ನೀಡಿದ್ದು, ಸಿಎಸ್‌ಆರ್ ಜಾರಿ ಮಾಡಲಾಗಿತ್ತು. ಇದಲ್ಲದೇ ಯುವಕನ ಪೋಷಕರಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ಬಿಡಲಾಗಿತ್ತು. ಇದರಿಂದ ಮನನೊಂದ ಯುವಕ ಮಂಗಳವಾರ ತನ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.