ವಯನಾಡು: ಭೂಕುಸಿತದಲ್ಲಿ ತಂದೆ-ತಾಯಿ, ಕುಟುಂಬದವರನ್ನು ಕಳೆದುಕೊಂಡ ಅನಾಥ ನವಜಾತ ಶಿಶುಗಳಿಗೆ ಎದೆಹಾಲು ನೀಡಲು ಸಿದ್ಧ ಎಂದು ಯುವ ದಂಪತಿ ಮುಂದೆ ಬಂದಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಯನಾಡಿನಲ್ಲಿ ದುರಂತ ಸಂಭವಿಸಿ ಇಂದಿಗೆ 5 ದಿನವಾಗಿದೆ. ಇಂದಿಗೆ ಸತ್ತವರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಸ್ಥಳೀಯರು ಹುಡುಕಾಟ ಮುಂದುವರೆಸಿದ್ದಾರೆ.
ಭೂಕುಸಿತದಲ್ಲಿ ಶಿಶುಗಳು ತನ್ನವರನ್ನು ಕಳೆದುಕೊಂಡು ಅನಾಥವಾಗಿವೆ. ಈ ವಿಚಾರದಿಂದ ಮರುಗಿದ ಇಡುಕ್ಕಿಯ ಕಟ್ಟಪ್ಪನ ಬಳಿಯ ಉಪ್ಪುತಾರದಲ್ಲಿ ವಾಸಿಸುವ ದಂಪತಿ ಭೂಕುಸಿತದಲ್ಲಿ ಅನಾಥವಾಗಿರುವ ಮಕ್ಕಳಿಗೆ ಎದೆಹಾಲು ನೀಡಲು ಸಿದ್ಧರಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕಿದ್ದಾರೆ.
ಸಜಿನ್ ಪರೇಕ್ಕರ ಮತ್ತು ಭಾವನಾ ದಂಪತಿ ಈಗಾಗಲೇ 4 ವರ್ಷದ ಮಗು ಮತ್ತು 4 ತಿಂಗಳ ಮಗುವನ್ನು ಹೊಂದಿದ್ದಾರೆ. ವಯನಾಡು ಭೂಕುಸಿತದ ಭೀಕರತೆ ಬಗ್ಗೆ ತಿಳಿದಿರುವ ಈ ಜೋಡಿ ಶಿಬಿರಗಳಲ್ಲಿ ಇರುವ ಮಕ್ಕಳನ್ನು ನೋಡಿಕೊಳ್ಳಲು ನಾವು ರೆಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಭಾವನಾ ‘ನಾನು ಎರಡು ಮಕ್ಕಳ ತಾಯಿ. ಹೆತ್ತವರನ್ನು ಕಳೆದುಕೊಂಡ ಶಿಶುಗಳ ನೋವು ನನಗೆ ಗೊತ್ತು. ಶಿಶುಗಳಿಗೆ ಎದೆಹಾಲು ನೀಡುವ ನನ್ನ ಆಲೋಚನೆಯನ್ನು ನಾನು ನನ್ನ ಪತಿಯೊಂದಿಗೆ ಹೇಳಿಕೊಂಡಿದ್ದೇನೆ. ಅವರು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಭಾವನಾ ಅವರ ಮಹಾತ್ಕಾರ್ಯದ ಬಳಿಕ ವಯನಾಡ್‌ನ ದಂಪತಿಗಳಾದ ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ವಿಪತ್ತು ವಲಯದಿಂದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ದಂಪತಿಗಳು ದತ್ತು ತೆಗೆದುಕೊಂಡ ಮಗುವಿಗೆ ಚಿಕ್ಕು ಎಂದು ಹೊಸ ಹೆಸರನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ.