ದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹರಾಗಿದ್ದಾರೆ. ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ. ಈ ಆಘಾತದ ಸುದ್ದಿಯ ಮಧ್ಯೆ ವಿನೇಶ್ ಫೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಸೆಮಿಫೈನಲ್‌ನಲ್ಲಿ ಭಾಗಿಯಾಗಿದ್ದ ವಿನೇಶ್ ಫೋಗಟ್ ಅವರ ತೂಕ ನಿನ್ನೆ 50 ಕೆಜಿಗಿಂತ ಕಡಿಮೆಯೇ ಇತ್ತು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದ ಮೇಲೆ ನೀರು ಕುಡಿದಿದ್ದಾರೆ. ಇದರ ಜೊತೆಗೆ ಊಟ ಮಾಡಿದ ಮೇಲೆ ವಿನೇಶ್ ಪೋಗಟ್ ಅವರ ದೇಹದ ತೂಕ ಬರೋಬ್ಬರಿ 2 ಕೆಜಿ ಹೆಚ್ಚಾಗಿದೆ. ಇದೇ ನೋಡಿ ಯಡವಟ್ಟಿಗೆ ಕಾರಣವಾಗಿದೆ.
ಒಂದೇ ದಿನದಲ್ಲಿ 2 ಕೆಜಿ ತೂಕ ಜಾಸ್ತಿ ಆದ ವಿನೇಶ್ ಫೋಗಟ್ ಅವರು ಫೈನಲ್ ಪಂದ್ಯಕ್ಕೆ ಸಜ್ಜಾಗಿದ್ದಾರೆ. ನಿನ್ನೆ ಸೆಮಿಫೈನಲ್ ಪಂದ್ಯ ಮುಗಿದ ಮೇಲೆ ಊಟ ಮಾಡಿದ ಫೋಗಟ್ ಅವರು ದೇಹದ ತೂಕ ನೋಡಿ ಶಾಕ್ ಆಗಿದ್ದಾರೆ.
ವಿನೇಶ್ ಫೋಗಟ್ ಅವರು ಕಳೆದ ದಿನ ಇಡೀ ರಾತ್ರಿ ಮಲಗೇ ಇಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ರಾತ್ರಿ ಪೂರ್ತಿ ವರ್ಕೌಟ್ ಮಾಡಿದ ವಿನೇಶ್ ಫೋಗಟ್ ಅವರು 1.85 ಕಿ.ಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ 150 ಗ್ರಾಂ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಈ 150 ಗ್ರಾಂ ತೂಕ ಕಡಿಮೆಯಾಗದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು 50 ಕೆಜಿ 150 ಗ್ರಾಂಗೆ ತಲುಪಿದ್ದಾರೆ. 150 ಗ್ರಾಂ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್ ಫೈನಲ್ ಪಂದ್ಯದಿಂದಲೇ ಅನರ್ಹರಾಗಿದ್ದಾರೆ.
ವಿನೇಶ್ ಫೋಗಟ್ ಅವರು ತೂಕ ಇಳಿಸಲು ವ್ಯಾಯಾಮ ಮಾಡಿದ್ದೇ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ವಿನೇಶ್ ಅಸ್ವಸ್ಥರಾಗಿದ್ದಾರೆ. ವಿನೇಶ್ ಫೋಗಟ್ ಅವರು ಆಸ್ಪತ್ರೆ ಸೇರಿದ ಮೇಲೆ ತೂಕ ಜಾಸ್ತಿಯಾಗಿರುವ ಸಾಧ್ಯತೆ ಇದೆ.
ಇನ್ನು ಈ ಸುದ್ದಿ ತಿಳಿದು ಪ್ರಧಾನಿ ಮೋದಿ ಅವರು, ಐಒಎ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿನೇಶ್ ಪೋಗಟ್‌ಗೆ ಆಗಿರುವ ಹಿನ್ನಡೆಯ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಹಾಗೂ ಭಾರತ ಹೊಂದಿರುವ ಆಯ್ಕೆಗಳ ಬಗ್ಗೆ ಮೊದಲ ಮಾಹಿತಿಯನ್ನು ಕೇಳಿದ್ದಾರೆ. ವಿನೇಶ್ ಪೋಗಟ್‌ಗೆ ಸಹಾಯ ಮಾಡುವ ನಿಟ್ಟಿಲ್ಲಿ ಎಲ್ಲಾ ರೀತಿಯ ಅವಕಾಶಗಳು ಹಾಗೂ ಆಯ್ಕೆಗಳನ್ನು ಬಳಸಿಕೊಳ್ಳುವಂತೆ ಅವರಿಗೆ ತಿಳಿಸಿದ್ದಾರೆ. ಹಾಗೇನಾದರೂ ವಿನೇಶ್‌ಗೆ ಸಹಾಯವಾಗುತ್ತದೆ ಎಂದಾದಲ್ಲಿ ಅವರ ಅನರ್ಹತೆಯ ಬಗ್ಗೆ ಕಠಿಣವಾದ ಪ್ರತಿಭಟನೆಯನ್ನೂ ದಾಖಲಿಸುವಂತೆ ಮೋದಿ ಅವರು ಪಿಟಿ ಉಷಾಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಅದಲ್ಲದೆ, ಭಾರತೀಯ ಒಲಿಂಪಿಕ್ ಸಮಿತಿ ಅಧ್ಯಕ್ಷೆ ಪಿಟಿ ಉಷಾ ಅವರಿಂದ ಪ್ರಧಾನಿ ಮೋದಿ ವರದಿಯನ್ನೂ ಕೇಳಿದ್ದಾರೆ ಎಂದು ತಿಳಿದು ಬಂದಿದೆ.