ಆಂಧ್ರ ಪ್ರದೇಶ : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂಧ್ರ ಸರ್ಕಾರ 9 ಜನರ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಟಿಟಿಡಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಈ ಆರೋಪ ಬೆನ್ನಲ್ಲೇ ಭಾರೀ ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಕೋಟ್ಯಂತರ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಆಂಧ್ರ ಸರ್ಕಾರ ತನಿಖೆಗೆ ಮುಂದಾಗಿದೆ. ಕಳೆದ ರಾತ್ರಿ ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀರಬ್ ಕುಮಾರ್ ಪ್ರಸಾದ್, ತಿರುಮಲ ತಿರುಪತಿ ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸುವ ಕಾಪಾಡುವ ನಿಟ್ಟಿನಲ್ಲಿ ವಿವರವಾದ ಮತ್ತು ಸಮಗ್ರ ತನಿಖೆಗಾಗಿ ಎಸ್‌ಐಟಿ ರಚಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
ಗುಂಟೂರ್ ವಲಯದ ಐಜಿಪಿ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಈ ತಂಡದಲ್ಲಿ ವಿಶಾಖ ರೇಂಜ್ ಡಿಐಜಿ ಗೋಪಿನಾಥ್ ಜೆಟ್ಟಿ, ವೈಎಸ್‌ಆರ್ ಜಿಲ್ಲಾ ಎಸ್‌ಪಿ ಹರ್ಷವರ್ಧನ್ ರಾಜು, ತಿರುಪತಿ ಹೆಚ್ಚುವರಿ ಎಸ್‌ಪಿ (ಅಡ್ಮಿನ್) ವೆಂಕಟರಾವ್, ಡಿಎಸ್‌ಪಿಗಳಾದ ಜಿ.ಸೀತಾರಾಮ ರಾವ್, ಶಿವನಾರಾಯಣ ಸ್ವಾಮಿ, ಅನ್ನಮಯ್ಯ ಜಿಲ್ಲಾ ಎಸ್‌ಬಿ ಇನ್‌ಸ್ಪೆಕ್ಟರ್ ಟಿ.ಸತ್ಯ ನಾರಾಯಣ, ಎನ್‌ಟಿಆರ್ ಪೊಲೀಸ್ ಕಮಿಷನರೇಟ್ ಇನ್‌ಸ್ಪೆಕ್ಟರ್ ಕೆ.ಉಮಾಮಹೇಶ್ವರ್, ಚಿಟ್ಟಾ ಜಿಲ್ಲೆ ಕಲ್ಲೂರು ಐಎಂ ಸೂರ್ಯ ನಾರಾಯಣ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.