ಜಮ್ಮು: ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಮೋದಿ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಸರ್ಕಾರ ಉರುಳುವ ಸಮಯ ದೂರವಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗಾಲ್ದಾನ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅವರ ಕಾರ್ಪೊರೇಟ್ ಗೆಳೆಯರು ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಿರುದ್ಯೋಗ ಹೆಚ್ಚಳ ಕುರಿತಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಇಬ್ಬರು ಬಿಲಿಯನೇರ್‌ಗಳಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿ ಮತ್ತು ನೋಟು ಅಮಾನ್ಯೀಕರಣ ಮಾಡಿದ್ದರಿಂದ ಸಣ್ಣ ಉದ್ದಿಮೆಗಳಿಗೆ ಮಾರಕವಾಯಿತು ಎಂದು ದೂರಿದ್ದಾರೆ.
ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರವು ಅತ್ಯಧಿಕ ನಿರುದ್ಯೋಗ ದರವನ್ನು ಹೊಂದಿದೆ. ಇಲ್ಲಿನ ಯುವಕರಿಗಾಗಿ ಉದ್ಯೋಗ ಸೃಷ್ಟಿಗೆ ಮೋದಿ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಇಂಡಿಯಾ ಕೂಟ ರಚಿಸಿಕೊಂಡು ಅವರಿಗೆ ಸವಾಲೆಸೆದ ಬಳಿಕ ಅವರ ವಿಶ್ವಾಸ ಕುಸಿತವಾಗಿದೆ ಎಂದಿದ್ದಾರೆ.
ಮಾನಸಿಕವಾಗಿ ಮೋದಿಯನ್ನು ನಾವು ಸೋಲಿಸಿದ್ದೇವೆ. ನಾನು ಸಂಸತ್ತಿನಲ್ಲಿ ಅವರ ಮುಂದೆ ಕೂರುತ್ತೇನೆ. ಅವರು ವಿಶ್ವಾಸ ಕಳೆದುಕೊಂಡಿರುವುದು ನನಗೆ ತಿಳಿದಿದೆ. ಈಗ ಸ್ವಲ್ಪ ಸಮಯ ಮಾತ್ರ ಉಳಿದಿದ್ದು, ಅಧಿಕಾರದಿಂದ ಮೋದಿ ಮತ್ತು ಬಿಜೆಪಿಯನ್ನು ಕೆಳಗಿಳಿಸುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.