ನವದೆಹಲಿ: ಆಗ್ರಾ ನಗರವನ್ನು ʻವಿಶ್ವ ಪರಂಪರೆಯ ತಾಣʼ ಎಂದು ಘೋಷಿಸಲು ನಿರ್ದೆಶನ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಯಾವುದೇ ಸ್ಥಳವನ್ನು ಪಾರಂಪರಿಕ ತಾಣವೆಂದು ಘೋಷಿಸಲು ನ್ಯಾಯಾಲಯ ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಆಗ್ರಾವನ್ನು ಯುನೆಸ್ಕೋಗೆ ʻವಿಶ್ವ ಪರಂಪರೆಯ ತಾಣʼ ಸ್ಥಾನಮಾನಕ್ಕಾಗಿ ನಾಮನಿರ್ದೇಶನವನ್ನು ಮಾಡಬೇಕಾಗಿದೆ. ಇಂತಹ ಘೋಷಣೆಯು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ನ್ಯಾಯಾಲಯ ಇಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆಗ್ರಾವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸುವುದರಿಂದ ನಗರಕ್ಕೆ ಯಾವುದೇ ವಿಶೇಷ ಪ್ರಯೋಜನವಿದೆ ಎಂದು ತೋರಿಸಲು ಯಾವ ದಾಖಲೆಯನ್ನೂ ಇರಿಸಲಾಗಿಲ್ಲ ಎಂದು ಹೇಳಿತು. ಬಳಿಕ ಅರ್ಜಿಯನ್ನು ವಜಾಗೊಳಿಸಿತು.