ನವದೆಹಲಿ: ಭಾರತವು ಸೆಮಿಕಂಡಕ್ಟರ್ ವಲಯದಲ್ಲಿ ತನ್ನ ಜಾಗತಿಕ ಜವಾಬ್ದಾರಿಯನ್ನು ಗುರುತಿಸಿ ಆ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮುಂಬರುವ ಸಮಯವು ತಂತ್ರಜ್ಞಾನದಿಂದ ಚಾಲಿತವಾಗಿರುತ್ತದೆ. ಸೆಮಿಕಂಡಕ್ಟರ್ ‘ಡಿಜಿಟಲ್ ಯುಗ’ದ ಆಧಾರವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಸಂಜೆ ದೆಹಲಿಯ ತಮ್ಮ ನಿವಾಸದಲ್ಲಿ ‘ಸೆಮಿಕಂಡಕ್ಟರ್ ಎಕ್ಸಿಕ್ಯೂಟಿವ್ಸ್ ರೌಂಡ್‌ಟೇಬಲ್’ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಸೆಮಿಕಂಡಕ್ಟರ್ ಉದ್ಯಮವು ಶೀಘ್ರದಲ್ಲೇ ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳ ತಳಹದಿಯಾಗಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಮತ್ತು ತಂತ್ರಜ್ಞಾನವು ಒಟ್ಟಾಗಿ ಮಾನವೀಯತೆಯ ಕಲ್ಯಾಣವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಸಾಮಾಜಿಕ, ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿ, ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು, ಉತ್ಪಾದನೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಸೇರಿದಂತೆ ಅಭಿವೃದ್ಧಿಯ ಆಧಾರ ಸ್ತಂಭಗಳ ಕುರಿತು ಮೋದಿ ಮಾತನಾಡಿದರು. ಇದೇ ವೇಳೆ ಸಿಇಒಗಳು ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭಾರತದ ಬದ್ಧತೆಯನ್ನು ಶ್ಲಾಘಿಸಿದರು.