Bengaluru 27°C
Ad

ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳ ಜೊತೆ ತಂದೆಯೂ ಆತ್ಮಹತ್ಯೆ!

ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಬೆರೆಸಿ, ಜೊತೆಗೆ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ರಂಗಪುರಿ ನಗರದಲ್ಲಿ ನಡೆದಿದೆ.

ನವದೆಹಲಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಬೆರೆಸಿ, ಜೊತೆಗೆ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ರಂಗಪುರಿ ನಗರದಲ್ಲಿ ನಡೆದಿದೆ.

ಮೃತ ತಂದೆಯನ್ನು 48 ವರ್ಷದ ಹೀರಾಲಾಲ್ ಶರ್ಮಾ ಹಾಗೂ ತನ್ನ ನಾಲ್ಕು ವಿಶೇಷಚೇತನ ಮಕ್ಕಳಾದ ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಇಬ್ಬರು ವಿಶೇಷಚೇತನ ಮಕ್ಕಳು ಹಾಗೂ ಇನ್ನುಳಿದ ಇಬ್ಬರಿಗೆ ಅಂಗವೈಕಲ್ಯದಿಂದಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ದೆಹಲಿಯ ನೈರುತ್ಯ ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಮಾತನಾಡಿ, ಕಟ್ಟಡದ ಮಾಲೀಕ ನಿತಿನ್ ಚೌಹಾಣ್ ಎಂಬಾತ ಕರೆ ಮಾಡಿ, ಹೀರಾಲಾಲ್ ಮನೆಯ ಬಳಿ ದುರ್ವಾಸನೆ ಬರುತ್ತಿರುವುದಾಗಿ ಶುಕ್ರವಾರ ಬೆಳಿಗ್ಗೆ 10:18ರ ಸುಮಾರಿಗೆ ವಿಷಯ ತಿಳಿಸಿದ್ದಾರೆ ಎಂದು ಹೇಳಿದರು. ಫ್ಲಾಟ್‌ನ ಬಾಗಿಲಿನ ಒಳಗಿನಿಂದ ಚಿಲಕ ಹಾಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ತೆಗೆಯಿಸಲಾಗಿದೆ.

ಫ್ಲಾಟ್‌ನಲ್ಲಿ ಎರಡು ಕೊಠಡಿಗಳಿದ್ದು, ಒಂದು ಕೋಣೆಯಲ್ಲಿ ತಂದೆಯ ಶವ ಹಾಗೂ ಇನ್ನೊಂದು ಕೋಣೆಯಲ್ಲಿ ಆತನ ನಾಲ್ಕು ಮಕ್ಕಳ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ಆ ನಾಲ್ಕು ಮಕ್ಕಳು ಕ್ಯಾನ್ಸ್‌ರ್‌ನಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ತನ್ನ ಹೆಂಡತಿಯ ಸಾವಿನ ಬಳಿಕ ತನ್ನ ನಾಲ್ಕು ಮಕ್ಕಳನ್ನು ತಾನೇ ನೋಡಿಕೊಳ್ಳಲು ಆರಂಭಿಸಿದನು.

ಹೆಂಡತಿಯ ಸಾವಿನ ಬಳಿಕ ಮನೆಯವರ ಸಂಪರ್ಕ ಕಳೆದುಕೊಂಡಿದ್ದನು. ಜೊತೆಗೆ ತನ್ನ ಮಕ್ಕಳ ಹೆಚ್ಚು ಗಮನ ಹರಿಸಲು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದನು ಎಂದು ಮೂಲಗಳು ತಿಳಿಸಿವೆ. ಐದು ಗ್ಲಾಸ್‌ಗಳು, ಸ್ಪೂನ್, ವಿಷದ ಪ್ಯಾಕೆಟ್‌ಗಳು ಹಾಗೂ ಅನುಮಾನಾಸ್ಪದ ದ್ರವವೊಂದು ದೊರೆತಿದೆ. ಇದರಿಂದಾಗಿ ಕುಟುಂಬದ ಐವರು ವಿಷ ಸೇವಿಸುವುದರ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad
Ad
Nk Channel Final 21 09 2023