ಚೆನ್ನೈ: ಕೆಲಸದ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.ಕಾರ್ತಿಕೇಯನ್ (38) ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್. ಮೂಲತಃ ತಮಿಳುನಾಡಿನ ತೇಣಿ ಜಿಲ್ಲೆಯವರಾದ ಕಾರ್ತಿಕೇಯನ್ ಅವರು ತಮ್ಮ ಪತ್ನಿ ಇಬ್ಬರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದರು.
ಕಾರ್ತಿಕೇಯನ್ ಕಳೆದ 15 ವರ್ಷಗಳಿಂದ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ಒತ್ತಡದಿಂದ ಅಸಮಾಧಾನಗೊಂಡು, ಎರಡು ತಿಂಗಳ ಕಾಲ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ (ಸೆ.19ರಂದು) ಕಾರ್ತಿಕೇಯನ್ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಪತ್ನಿ ಕೆ.ಜಯರಾಣಿ ಸೋಮವಾರ ಚೆನ್ನೈನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ತಿರುನಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಅವರ ಮಕ್ಕಳು ತಾಯಿಯ ಮನೆಯಲ್ಲಿದ್ದರು. ಈ ವೇಳೆ ಕಾರ್ತಿಕೇಯನ್ ತನ್ನನ್ನು ತಾನೇ ಎಲೆಕ್ಟ್ರಿಕ್ ವೈಯರ್‌ನಿಂದ ಸುತ್ತಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.