ಪಾಟ್ನಾ: ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆಸಿರುವ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ.
ಮುಜಾಫರ್‍ಪುರ-ಸಮಸ್ತಿಪುರ ಮಾರ್ಗದಲ್ಲಿ ಜೈನಗರದಿಂದ ದೆಹಲಿಗೆ ರೈಲು ಪ್ರಯಾಣಿಸುತ್ತಿದ್ದಾಗ ದಾಳಿ ನಡೆದಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮಸ್ತಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ ರೈಲಿನ ಕೆಲವು ಕೋಚ್‍ಗಳ ಗಾಜುಗಳು ಪುಡಿಪುಡಿಯಾಗಿವೆ. ಸಮಸ್ತಿಪುರ ರೈಲ್ವೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಲ್ಲುಗಳನ್ನು ಏಕೆ ಎಸೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಸಮಸ್ತಿಪುರ ರೈಲು ನಿಲ್ದಾಣದ ಹೊರ ಸಿಗ್ನಲ್‍ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಮುಜಾಫರ್‍ಪುರಕ್ಕೆ ಹೊರಡುವ ಮೊದಲು ಗುರುವಾರ ರಾತ್ರಿ 8:45ರ ಸುಮಾರಿಗೆ ನಿಲ್ದಾಣದಲ್ಲಿ ಸ್ವಲ್ಪ ಸಮಯ ನಿಂತಿತ್ತು. ಬಳಿಕ ಹೊರಗಿನ ಸಿಗ್ನಲ್ ತಲುಪಿದ ತಕ್ಷಣ ಕಲ್ಲು ತೂರಾಟ ಆರಂಭವಾಯಿತು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.