ಹೊಸದಿಲ್ಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಶೂಟಿಂಗ್ ತಾರೆ ಸರಬ್ಜೋತ್ ಸಿಂಗ್ ಅವರು ಸರ್ಕಾರಿ ನೌಕರಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಸರಬ್ಜೋತ್ ಸಿಂಗ್ ಅವರು ಮನು ಭಾಕರ್ ಅವರೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಅವರು ತವರಿಗೆ ಮರಳಿದ ಬಳಿಕ ಹರ್ಯಾಣ ಸರ್ಕಾರವು ಅವರಿಗೆ ಗೌರವ ಪೂರ್ವಕವಾಗಿ ಸರ್ಕಾರಿ ಕೆಲಸದ ಆಫರ್ ನೀಡಿತ್ತು. ಆದರೆ ಸರಬ್ಜೋತ್ ಅವರು ಅದನ್ನು ನಿರಾಕರಿಸಿದ್ದಾರೆ. ಶೂಟಿಂಗ್‌ನತ್ತ ಗಮನ ಹರಿಸಲು ಬಯಸುತ್ತಿರುವ ಕಾರಣ ಈಗ ಸರ್ಕಾರಿ ಉದ್ಯೋಗವನ್ನು ತೆಗೆದುಕೊಳ್ಳುವುದಿಲ್ಲ ಎಂದು ಶೂಟರ್ ಸುದ್ದಿಗಾರರಿಗೆ ತಿಳಿಸಿದರು. ಇದೀಗ ತಾನು ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ಹೋಗಲು ಬಯಸುವುದಿಲ್ಲ ಎಂದು ಸರಬ್ಜೋತ್ ಹೇಳಿದ್ದಾರೆ.
“ಉದ್ಯೋಗ ಒಳ್ಳೆಯದು, ಆದರೆ ಈ ಅದನ್ನು ಸ್ವೀಕರಿಸಲಾಗುತ್ತಿಲ್ಲ. ಶೂಟಿಂಗ್ ಮೇಲೆ ಮೊದಲು ಗಮನ ಹರಿಸಬೇಕಿದೆ. ಉತ್ತಮ ಉದ್ಯೋಗ ಹುಡುಕವಂತೆ ನನ್ನ ಕುಟುಂಬವೂ ನನಗೆ ಸೂಚನೆ ನೀಡಿತ್ತು. ಆದರೆ ನನಗೆ ಶೂಟಿಂಗ್ ನಲ್ಲಿ ಮುಂದುವರಿಯಬೇಕಿದೆ” ಎಂದು ಸಿಂಗ್ ಹೇಳಿದ್ದಾರೆ.